ಪ್ರಕೃತಿಯೇ ನಿರ್ಮಿಸಿದ ಮೂರು ಅಂತಸ್ತಿನ ದೇವಾಲಯ; ಬಾರ್ಕೂರಿನ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನದ ವೈಶಿಷ್ಟ್ಯ ಏನು?

ಮೂರು ಅಂತಸ್ತಿನ ಪ್ರಕೃತಿ ನಿರ್ಮಿತ ಕಲ್ಲುಬಂಡೆಗಳಿಂದ ಕೂಡಿದ ಗುಹಾಂತರ ದೇವಾಲಯ ಎನ್ನುವುದು ಇದರ ವೈಶಿಷ್ಟ್ಯ. ಬೃಹದಾಕಾರದ ಕಲ್ಲುಬಂಡೆಗಳ ನಡುವೆ ಶಿವ, ಪಾರ್ವತಿ, ಗಣಪತಿ ಇಲ್ಲಿ ವಿರಾಜಮಾನವಾಗಿ ನೆಲೆಸಿದ್ದಾರೆ. ಪಡುಮುಂಡು ಕಲ್ಲು ಗಣಪತಿ ದೇವಸ್ಥಾನವನ್ನು 12ನೇ ಶತಮಾನದಲ್ಲಿ ತುಳುನಾಡನ್ನು ಆಡಳಿತ ಮಾಡಿದ ಭೂತಾಳ ಪಾಂಡ್ಯ ಸ್ಥಾಪಿಸಿದನೆಂಬ ಪ್ರತೀತಿ ಇದೆ.

ಪ್ರಕೃತಿಯೇ ನಿರ್ಮಿಸಿದ ಮೂರು ಅಂತಸ್ತಿನ ದೇವಾಲಯ; ಬಾರ್ಕೂರಿನ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನದ ವೈಶಿಷ್ಟ್ಯ ಏನು?
ಪಡುಮುಂಡು ಕಲ್ಲು ಗಣಪತಿ ದೇವಾಲಯ
Skanda

| Edited By: Ayesha Banu

Dec 18, 2020 | 6:19 AM

ಉಡುಪಿ: ಆಧುನಿಕ ಯುಗದಲ್ಲಿ ಮನುಷ್ಯ ಎಷ್ಟೇ ಮುಂದುವರೆದರೂ ಪ್ರಕೃತಿಯ ಮುಂದೆ ತಲೆಬಾಗಲೇಬೇಕು. ತಾನು ನಿರ್ಮಿಸಿದ್ದೇ ಶ್ರೇಷ್ಠ ಎಂದು ಮನುಷ್ಯ ಬೀಗಿದರೆ ಪ್ರಕೃತಿ ಅದಕ್ಕೂ ಮಿಗಿಲಾದದ್ದನ್ನು ತೋರಿಸುತ್ತದೆ ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ. ಉಡುಪಿ ಜಿಲ್ಲೆಯ ಬಾರ್ಕೂರಿನ‌ ಸಮೀಪದಲ್ಲಿರುವ ಈ ದೇಗುಲ ಕಲ್ಲು ಗಣಪತಿ ಕ್ಷೇತ್ರ ಎಂದೇ ಪ್ರಸಿದ್ಧ.

ಮೂರು ಅಂತಸ್ತಿನ ಪ್ರಕೃತಿ ನಿರ್ಮಿತ ಕಲ್ಲುಬಂಡೆಗಳಿಂದ ಕೂಡಿದ ಗುಹಾಂತರ ದೇವಾಲಯ ಎನ್ನುವುದು ಇದರ ವೈಶಿಷ್ಟ್ಯ. ಬೃಹದಾಕಾರದ ಕಲ್ಲುಬಂಡೆಗಳ ನಡುವೆ ಶಿವ, ಪಾರ್ವತಿ, ಗಣಪತಿ ಇಲ್ಲಿ ವಿರಾಜಮಾನವಾಗಿ ನೆಲೆಸಿದ್ದಾರೆ. ಪಡುಮುಂಡು ಕಲ್ಲು ಗಣಪತಿ ದೇವಸ್ಥಾನವನ್ನು 12ನೇ ಶತಮಾನದಲ್ಲಿ ತುಳುನಾಡನ್ನು ಆಡಳಿತ ಮಾಡಿದ ಭೂತಾಳ ಪಾಂಡ್ಯ ಸ್ಥಾಪಿಸಿದನೆಂಬ ಪ್ರತೀತಿ ಇದೆ.

ಈ ಶಿಲಾಮಯ ದೇವಸ್ಥಾನ ಪ್ರಕೃತಿಯ ಮಡಿಲಲ್ಲಿ ಹಸಿರು ಹೊದಿಕೆಯ ನಡುವೆ, ಸುಂದರವಾಗಿ ಕಾಣುತ್ತದೆ. ಇದೇ ಕಾರಣಕ್ಕೆ ಭಕ್ತರನ್ನು ಆಕರ್ಷಿಸುವ ಈ ದೇವಸ್ಥಾನ ತುಳುನಾಡಿನ ರಾಜಧಾನಿ, 365 ದೇವಾಲಯಗಳ ನಗರಿ ಎಂದೇ ಹೆಸರಾದ ಬಾರ್ಕೂರಿನಿಂದ 6 ಕಿ.ಮೀ ದೂರದಲ್ಲಿದೆ.

ಹೊರಗಡೆಯಿಂದ ನೋಡಿದಾಗ ಕಾಣುವ ಬೃಹತ್ ಬಂಡೆ, ಅದನ್ನು ಆವರಿಸಿರುವ ನೀಳಗಾತ್ರದ ಮರಗಳು ಎಂತಹವರನ್ನೂ ಸೆಳೆದು ನಿಲ್ಲಿಸುತ್ತವೆ. ಗದ್ದೆಯ ಮಧ್ಯೆ ರಸ್ತೆಯಲ್ಲಿ ಸಾಗಿ ಮುಂದುವರಿದು ಈ ಕ್ಷೇತ್ರವನ್ನು ತಲುಪಬೇಕು. ದೇಗುಲದ ಸುಂದರ ಕಲ್ಲಿನ ಮೆಟ್ಟಿಲುಗಳು ನೋಡುಗರನ್ನು ಸ್ವಾಗತಿಸುತ್ತವೆ. ಸ್ವಲ್ಪ ಹೆಜ್ಜೆ ಇಟ್ಟು ಮುಂದುವರಿದು ಮೇಲೆ ನೋಡಿದರೆ ಎದೆ ಝಲ್ ಎನ್ನಿಸುವಂತೆ ಎರಡು ಬಂಡೆಗಳ ಮಧ್ಯೆ ಒಂದಕ್ಕೊಂದು ಅಂಟಿದಂತೆ ಸಿಲುಕಿ ನಿಂತಿರುವ ಬೃಹತ್ ಗಾತ್ರದ ಕಲ್ಲುಗಳು ತಲೆ ಮೇಲೆ ತೂಗುವುದು ಕಾಣಿಸುತ್ತದೆ.

ಒಳಹೊಗ್ಗುತ್ತಿರುವಂತೆ ಮನುಷ್ಯ ತೆರಳುವುದಕ್ಕೆ ಕಷ್ಟವಾಗಿರುವ ಆ ಕಲ್ಲಿನ ಒಳಗೆ ಅಷ್ಟು ಸುಂದರ ಗುಡಿ‌ ನಿರ್ಮಿಸಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಸಾಮಾನ್ಯವಾಗಿ ಬಹಳಷ್ಟು ಕಡೆ ಉದ್ಭವ ಗಣಪತಿ ಇರುವುದನ್ನು ಕಾಣಬಹುದು. ಆದರೆ ಇಲ್ಲಿ ಶಿವ ಪಾರ್ವತಿಯರೇ ಉದ್ಭವಗೊಂಡಿದ್ದಾರೆ ಎಂಬ ನಂಬಿಕೆಯಿದೆ.

ಭಕ್ತಿಭಾವದಲ್ಲಿ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತರೆ ಇಷ್ಟಾರ್ಥಗಳು ಈಡೇರುತ್ತವೆ. ಒಂದುವೇಳೆ ಮನಸ್ಸಿನಲ್ಲಿ ದುರುದ್ದೇಶವಿಟ್ಟುಕೊಂಡು ಲವರ್ಸ್ ಪಾರ್ಕ್, ಪ್ರವಾಸಿತಾಣ, ಚಿತ್ರೀಕರಣ ತಾಣ ಎಂದು ಬಂದರೆ ಸೋಲು ಖಚಿತ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ಕನ್ನಡದ ಸುಮಾರು ಚಿತ್ರಗಳನ್ನು ಚಿತ್ರೀಕರಿಸಿದ್ದರೂ ಅವೆಲ್ಲವೂ ನೆಲಕಚ್ಚಿವೆ ಎಂದು ಬಲ್ಲವರು ಹೇಳುತ್ತಾರೆ.

ಇಲ್ಲಿನ ಇತಿಹಾಸ ಅರಿಯಬೇಕು, ಪ್ರಕೃತಿ ಸೌಂದರ್ಯ ಸವಿಯಬೇಕು ಎಂಬ ಸದುದ್ದೇಶ ಹೊತ್ತು, ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಮನಸ್ಸಿದ್ದರೆ ಈ ಪ್ರಕೃತಿ ಮಡಿಲಿನಲ್ಲಿರುವ ಈ ದೇವಸ್ಥಾನಕ್ಕೆ ಒಮ್ಮೆಯಾದರೂ ನೀವು ಭೇಟಿ ನೀಡಲೇಬೇಕು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸುತ್ತಿದೆ ಪುರಾತನ ಕಲ್ಮೇಶ್ವರ ದೇವಾಲಯ!

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada