ಮಾಧ್ಯಮ ಲೋಕದ ಪಯಣದ ಅನುಭವ ಕಥನ: ಜಿ ಎನ್ ರಂಗನಾಥ ರಾವ್ ಅವರ ಹೊಸ ಪುಸ್ತಕ ‘ಆ ಪತ್ರಿಕೋದ್ಯಮ’

ಅನುಭವಿ ಪತ್ರಕರ್ತನೊಬ್ಬನ ಮಾಧ್ಯಮ ಲೋಕದ ಪಯಣವನ್ನು ಮೆಲುಕು ಹಾಕುವ ಕೃತಿ ‘ಆ ಪತ್ರಿಕೋದ್ಯಮ’. ಇತ್ತೀಚೆಗಷ್ಟೇ ಲೋಕಾರ್ಪಣೆಯಾಗಿರುವ ಈ ಕೃತಿಯ ಲೇಖಕರು ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್.

ಮಾಧ್ಯಮ ಲೋಕದ ಪಯಣದ ಅನುಭವ ಕಥನ: ಜಿ ಎನ್ ರಂಗನಾಥ ರಾವ್ ಅವರ ಹೊಸ ಪುಸ್ತಕ ‘ಆ ಪತ್ರಿಕೋದ್ಯಮ’
ಹೊಸ ಪುಸ್ತಕ ಆ ಪತ್ರಿಕೋದ್ಯಮ, ಜಿ ಎನ್ ರಂಗನಾಥ ರಾವ್
ಗಂಗಾಧರ್​ ಬ. ಸಾಬೋಜಿ

|

Sep 08, 2022 | 8:06 AM

ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್ (gn ranganath rao) ತಮ್ಮ ಮೌಲಿಕ ಬರಹಗಳಿಂದ ಕನ್ನಡನಾಡಿನಲ್ಲಿ ಚಿರಪರಿಚಿತರಾದವರು. ಇವರು ಬರೆದ ಹಲವು ಪುಸ್ತಕಗಳನ್ನು ಪತ್ರಿಕೋದ್ಯಮದ ವಿದ್ಯಾರ್ಥಿಗಳು ಆಸ್ಥೆಯಿಂದ ಓದುತ್ತಾರೆ. ರಂಗನಾಥರಾವ್ ಅವರ ಹೊಸ ಪುಸ್ತಕ ‘ಆ ಪತ್ರಿಕೋದ್ಯಮ’ ಇದೀಗ ಪ್ರಕಟವಾಗಿದೆ. ಮಾಧ್ಯಮ ಲೋಕದ ಪಯಣವನ್ನು ಮೆಲುಕು ಹಾಕುವ ಈ ಕೃತಿಯ ಮೂಲಕ ಜಿ.ಎನ್. ರಂಗನಾಥ ರಾವ್ ಅವರು ತಮ್ಮ ಪತ್ರಿಕೋದ್ಯಮ ವೃತ್ತಿ ಜೀವನದ ಕೆಲವು ಅನುಭವಗಳು, ಅದಕ್ಕಿರುವ ವಿಶಿಷ್ಟ ಆಯಾಮ ಮತ್ತು ಅಂದಿನ ಪತ್ರಿಕಾ ವ್ಯವಸಾಯ ಹಾಗೂ ಆ ಕಾಲಘಟ್ಟದಲ್ಲಿನ ಸಮಾಜದ ನೋಟ, ಪತ್ರಿಕಾ ನೀತಿಗಳನ್ನು ಬಹಳ ಸುಂದರವಾಗಿ ಮತ್ತು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪುಸ್ತಕ ಓದುತ್ತಿರುವವರಿಗೆ ಒಮ್ಮೆ ಎಂಬತ್ತರ ದಶಕದಲ್ಲಿ ಸುತ್ತಾಡಿದ ಅನುಭವವಾಗುತ್ತದೆ.

ಇದು ಆತ್ಮಕಥೆಯೇ?

ಜಿ.ಎನ್. ರಂಗನಾಥ ರಾವ್ ಅವರು ಈ ಪುಸ್ತಕ ಬರೆಯಲು ಆರಂಭಿಸಿದಾಗಿನಿಂದ ಹಲವರು ‘ಇದು ನಿಮ್ಮ ಆತ್ಮಕಥೆಯೇ’ ಎಂದು ಕೇಳಿದ್ದರಂತೆ. ಈ ಪ್ರಶ್ನೆಗೆ ಉತ್ತರಿಸಿರುವ ರಂಗನಾಥ ರಾವ್, ‘ಅವರು ಹಾಗೆ ಭಾವಿಸಿದ್ದರಲ್ಲಿ ತಪ್ಪೇನೂ ಇಲ್ಲ. ಆ ರೀತಿ ನೋಡಿದರೆ ಈ ಕಥನ ಶುರುವಾಗುವುದು ‘ನಾನು’ವಿನಿಂದಲೇ. ಆತ್ಮಕಥೆಗಳು ಸಾಮಾನ್ಯವಾಗಿ ‘ನಾನು’ ಮತ್ತು ‘ಅಹಂ’ ಕೇಂದ್ರಿತವಾಗಿರುತ್ತವೆ. ನಾನು ಪತ್ರಿಕಾ ವ್ಯವಸಾಯಕ್ಕೆ ಅಡಿ ಇರಿಸಿದ್ದು ನನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ. ಇದು ಆತ್ಮಕಥೆ ಆಗಬೇಕಾದರೆ ನನ್ನ ವೃತ್ತಿ ಜೀವನದ ಹಿಂದಿನ ಇಪ್ಪತ್ಮೂರು ವರ್ಷಗಳ ಬದೂಕು ಸೇರಬೇಕಾಗುತ್ತದೆ.  ಅದು ಇಲ್ಲಿಲ್ಲ. ಹೀಗಾಗಿ ಇದು ನನ್ನ ಆತ್ಮಕಥೆಯಲ್ಲ. ಒಂದು ವೇಳೆ ಹಾಗೆ ಭಾವಿಸುವುದಾದಲ್ಲಿ ಇದನ್ನು ‘ಹೀಗೊಂದು ಲೋಕಾತ್ಮ ಕಥೆ’ ಎಂದೂ ತಿಳಿಯಬಹುದು ಎಂದು ಹೇಳಿದ್ದಾರೆ.

ಜಿ.ಎನ್. ರಂಗನಾಥ ರಾವ್ ಅವರ ವೃತ್ತಿ ಜೀವನದ ಸುಂದರ ಪುಟಗಳನ್ನು ಇಲ್ಲಿ ಅಕ್ಷರ ರೂಪಕ್ಕಿಳಿಸಲಾಗಿದೆ. ಕೇವಲ ಪತ್ರಿಕೋದ್ಯಮಿಗಳೇ ಅಥವಾ ಪತ್ರಕರ್ತರು ಮಾತ್ರ ಓದಬೇಕೆಂದೇನಿಲ್ಲ. ಪುಸ್ತಕ ಪ್ರಿಯರು ಹೀಗೆ ಪ್ರತಿಯೊಬ್ಬರು ಕೂಡ ಆ ಪತ್ರಿಕೋದ್ಯಮವನ್ನು ಓದಬಹುದು. ಅದರಲ್ಲಿಯೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ಪುಸ್ತಕ ಒಂದು ಉತ್ತಮ ಮಾರ್ಗದರ್ಶನ.

ಜಿ.ಎನ್.ರಂಗನಾಥ ರಾವ್ ಬಗ್ಗೆ

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಹುಟ್ಟಿದ್ದು 1942 ರಲ್ಲಿ, ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹಲವು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ‘ನವರಂಗ’ ಕಾವ್ಯನಾಮದಿಂದ ಬರವಣಿಗೆ ಮಾಡಿದ್ದಾರೆ.

ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿದ್ದಾರೆ. ಜೊತೆಗೆ ಸಾಹಿತ್ಯ ವಿಮರ್ಶಕರೂ ಹೌದು. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಅವರು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಮಹತ್ವದ ಕೃತಿ ರಚನೆ ಮಾಡಿದ್ದಾರೆ. ಲೇಖಕರು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ’ನೇಸರ ನೋಡು ನೇಸರ ನೋಡು’ ಎಂಬ ಅಂಕಣ ಬರೆಯುತ್ತಿದ್ದರು. ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಪುಸ್ತಕದ ವಿವರ:

ಪುಸ್ತಕದ ಹೆಸರು: ಆ ಪತ್ರಿಕೋದ್ಯಮ, ಲೇಖಕರು: ಜಿ.ಎನ್. ರಂಗನಾಥ ರಾವ್, ಪ್ರಕಾಶಕರು: ಬಹುರೂಪಿ, ಬೆಲೆ: 300, ಪುಟಗಳ ಸಂಖ್ಯೆ: 224

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada