Bheemana Amavasya: ಭೀಮನ ಅಮಾವಾಸ್ಯೆ ವ್ರತವನ್ನು ಅವಿವಾಹಿತರು ಏಕೆ ಹಾಗೂ ಹೇಗೆ ಆಚರಿಸಬೇಕು?
ಈ ವ್ರತ ಕೇವಲ ವಿವಾಹಿತರಿಗೆ ಮಾತ್ರ ಎಂದೇನಿಲ್ಲ. ಅವಿವಾಹಿತರು ತಮಗೆ ಉತ್ತಮ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತ, ಕೈಗೆ ಕಂಕಣ ಕಟ್ಟಿಕೊಂಡು ಭಕ್ತಿಯಿಂದ ವ್ರತ ಆಚರಿಸಬಹುದು.
ಪತಿಯೇ ಪರದೈವ ಎನ್ನುವ ಸಂಸ್ಕೃತಿ ನಮ್ಮದು. ಕಾಯಾ, ವಾಚಾ, ಮನಸಾ ಜೊತೆಯಲ್ಲಿರುತ್ತೇನೆಂದು ಅಭಯ ನೀಡಿ ಪತ್ನಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ತೋರುವ ಪತಿಯ ಆರೋಗ್ಯ, ಆಯುಷ್ಯ ವೃದ್ಧಿಗೆ ಹಿಂದು ಸಂಪ್ರದಾಯದಲ್ಲಿ ಹಲವು ವ್ರತಗಳ ಆಚರಣೆ ರೂಢಿಯಲ್ಲಿದೆ. ಅವೆಲ್ಲವುಗಳಲ್ಲಿ ಬಹುಮುಖ್ಯವಾದುದು ಭೀಮನ ಅಮಾವಾಸ್ಯೆ ವ್ರತ. ಪ್ರತಿವರ್ಷ ಆಷಾಢ ಮಾಸದ ಕೊನೆಯ ದಿನ ಅಂದರೆ ಅಮಾವಾಸ್ಯೆಯಂದು ಆಚರಿಸಲ್ಪಡುವ ಈ ಹಬ್ಬವನ್ನು ಕರ್ನಾಟಕದಾದ್ಯಂತ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ಭೀಮನ ಅಮಾವಾಸ್ಯೆ: ತಿಳಿಯಬೇಕಾದ 10 ಸಂಗತಿ ಮದುವೆಯಾದ ಮಹಿಳೆಯರು ತಮ್ಮ ಪತಿಯ ಆಯುಷ್ಯ ವೃದ್ಧಿಸಲಿ, ಆರೋಗ್ಯ ಸಿದ್ಧಿಸಲಿ ಎಂದು ದೇವರನ್ನು ಬೇಡಿ ವ್ರತ ಆಚರಿಸಿದರೆ, ಅವಿವಾಹಿತ ಯುವತಿಯರು ಉತ್ತಮ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತ, ಹೊಸ ಬದುಕಿನ ಕನಸು ಕಾಣುತ್ತ ಈ ಹಬ್ಬವನ್ನು ಆಚರಿಸುತ್ತಾರೆ.
ಪೌರಾಣಿಕ ಹಿನ್ನೆಲೆ ಪುರಾಣಗಳ ಪ್ರಕಾರ, ಮರಣ ಹೊಂದಿದ್ದ ಪತಿಯ ಪ್ರಾಣವನ್ನು ಹಿಂದಿರುಗಿಸಿಕೊಡುವಂತೆ ಸತಿಯೊಬ್ಬಳು ಪಾರ್ವತಿ-ಪರಮೇಶ್ವರನನ್ನು ಪ್ರಾರ್ಥಿಸುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿ ಶಿವ ಆಕೆಯ ಪತಿಯನ್ನು ಬದುಕಿಸಿಕೊಡುತ್ತಾನಂತೆ. ಆಕೆ ಶಿವನನ್ನು ಕುರಿತು ಕಠಿಣ ತಪಸ್ಸು ಕೈಗೊಂಡ ದಿನ ‘ಆಷಾಢ ಅಮಾವಾಸ್ಯೆ’. ಆದ್ದರಿಂದ ಈ ದಿನವೇ ಈ ವ್ರತಾಚರಣೆ. ಹೀಗೆ ಶಿವನಿಂದ ದೀರ್ಘಾಯುಷ್ಯ ಆರೋಗ್ಯವನ್ನು ಪಡೆದ ಕಾರಣಕ್ಕೆ, ಈ ದಿನ ಶಿವನನ್ನು ಪೂಜಿಸಿ ಪತಿಯರ ದೀರ್ಘಾಯುಷ್ಯಕ್ಕೆ ಪತ್ನಿಯರು ಪ್ರಾರ್ಥಿಸುತ್ತಾರೆ. ಶಿವ ಮತ್ತು ಪಾರ್ವತಿಯರು ಇದೇ ದಿನ ಮದುವೆಯಾಗಿ ಆದರ್ಶ ಸತಿ-ಪತಿಯಾಗಿ ಬದುಕಿದರು ಎಂಬ ಪ್ರತೀತಿಯೂ ಇರುವುದರಿಂದ ಈ ದಿನ ಮಹತ್ವದ್ದೆನ್ನಿಸಿದೆ.
ಪತಿ ಸಂಜೀವಿನಿ ವ್ರತ ಈ ವ್ರತವನ್ನು ಜ್ಯೋತಿರ್ಭೀಮೇಶ್ವರ ವ್ರತ ಎಂದೂ, ಪತಿ ಸಂಜೀವಿನ ವ್ರತ ಎಂದೂ ಕರೆಯಲಾಗುತ್ತದೆ. ಈ ವ್ರತವನ್ನು ಒಮ್ಮೆ ಆರಂಭಿಸಿದರೆ 16 ವರ್ಷಗಳ ಕಾಲ ನಿರಂತರವಾಗಿ ಮಾಡಬೇಕು. ವ್ರತ ಸಂಪೂರ್ಣವಾದ ವರ್ಷ ಬಡವ-ಬಲ್ಲಿಗರಿಗೆ ಅನ್ನದಾನ ಮಾಡಬೇಕು. ಇದರಿಂದ ಪುಣ್ಯ ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಇದೆ.
ಆಷಾಢದ ವಿರಹ ವೇದನೆಗೆ ಪೂರ್ಣವಿರಾಮ! ಆಷಾಢ ಮಾಸವೆಂದರೆ ಅದು ವಿರಹ ವೇದನೆಯ ಕಾಲ. ತವರಿಗೆ ಹೋದ ಪತ್ನಿ ಹಿಂತಿರುಗಿ ಬಂದು ತನ್ನ ಪತಿಯ ತೆಕ್ಕೆ ಸೇರುವ ದಿನ. ಆದ್ದರಿಂದ ಈ ದಿನ ಪತಿ-ಪತ್ನಿಯನ್ನು ಮತ್ತೆ ಒಂದು ಮಾಡುವ ದಿನವಾಗಿರುವುದರಿಂದ ಮತ್ತಷ್ಟು ಮಹತ್ವ ಪಡೆದಿದೆ. ಶ್ರಾವಣ ಮಾಸ ಆರಂಭವಾಗಿ ಒಂದೊಂದೇ ಹಬ್ಬಗಳು ಆರಂಭವಾಗುತ್ತವೆ. ಮತ್ತೆ ಸಂಭ್ರಮಕ್ಕೆ ಮನಸ್ಸು ತೆರೆದುಕೊಳ್ಳುವ ಕಾಲ ಶುರು!
ಪೂಜೆಯ ವಿಧಾನ ಅಕ್ಕಿ, ತೆಂಗಿನಕಾಯಿ, ಅರಿಶಿಣ-ಕುಂಕುಮವನ್ನು ಒಂದು ತಟ್ಟೆಯಲ್ಲಿ ಇಟ್ಟು, ಅದರ ಮೇಲೆ ತುಪ್ಪದ ದೀಪ ಹಚ್ಚಿದ ಎರಡು ದೀಪದ ಕಂಬ ಇಡಿ. ನಂತರ ಶಿವ-ಪಾರ್ವತಿಯರನ್ನು ಆರಾಧಿಸುತ್ತ, ಭಕ್ತಿಯಿಂದ ಪೂಜೆ ಮಾಡಿ. ಒಂಬತ್ತು ಗಂಟಿನ ಗೌರಿ ದಾರದ ಜೊತೆಗೆ ಉಳಿದ ಪೂಜಾ ಸಾಮಗ್ರಿ(ದಿನವೂ ಬಳಸುವ)ಗಳನ್ನು ಬಳಸಿ ಪೂಜೆ ಮಾಡಿ. ಪೂಜೆ ಮುಗಿದ ನಂತರ ಗೌರಿ ದಾರವನ್ನು ಕಂಕಣದಂತೆ ಕೈಗೆ ಕಟ್ಟಿಕೊಳ್ಳಿ. ಹೀಗೆ ಕಂಕಣ ಕಟ್ಟಿಕೊಂಡು, ಪತಿಯ ಪಾದಗಳಿಗೆ ನಮಸ್ಕರಿಸಿ, ಪಾದಪೂಜೆ ಮಾಡಿ ಆಶೀರ್ವಾದ ತೆಗೆದುಕೊಳ್ಳಬೇಕು.
ಶಿವನ ಪೂಜೆ ಯಾವುದೇ ಹಬ್ಬವಿರಿಲಿ, ಶುಭ ಕಾರ್ಯಕ್ರಮವಿರಲಿ, ವಿಘ್ನನಾಶಕ ವಿನಾಯಕನನ್ನು ಪೂಜಿಸುವುದು ವಾಡಿಕೆ. ಭೀಮನ ಅಮಾವಾಸ್ಯೆ ಹಬ್ಬದಲ್ಲಿ ನಂತರ ಶಿವನನ್ನು ಪೂಜಿಸಲಾಗುತ್ತದೆ. ಭೀಮೇಶ್ವರ ಅಂದರೆ ಶಿವನನ್ನು ಪೂಜಿಸಿ ಗಣೇಶ ಅಷ್ಟೋತ್ತರ, ಶಿವ ಅಷ್ಟೋತ್ತರ ಪಠಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಕ್ತಿ ಇರಬೇಕು. ಭೀಮನ ಅಮಾವಾದ್ಯೆ ಎಂದರೆ ಪಾಂಡವರಲ್ಲೊಬ್ಬನಾದ ಭೀಮನ ಹಬ್ಬವಲ್ಲ. ಇದು ಭೀಮೇಶ್ವರ ಅಂದರೆ ಈಶ್ವರನ ಹಬ್ಬ.
ಅವರವರ ಅನುಕೂಲಕ್ಕೆ ತಕ್ಕಂತೆ ಆಚರಣೆ ಯಾವುದೇ ವ್ರತವಿರಲಿ, ಹಬ್ಬವಿರಲಿ, ಆಡಂಬರಕ್ಕಿಂತ ಹೆಚ್ಚು ಭಕ್ತಿ ಮುಖ್ಯ. ಅವರವರ ಅನುಕೂಲಕ್ಕೆ ತಕ್ಕಂತೆ ಆಚರಣೆ ನಡೆಯುತ್ತದೆ. ಅದ್ಧೂರಿ ಮಂಟಪ ನಿರ್ಮಿಸಿ ಈ ವ್ರತ ಮಾಡುವವರೂ ಇದ್ದಾರೆ. ಮಂಗಳ ಸ್ನಾನ, ಗೋಧಿ ಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನೇ ನೈವೇದ್ಯಕ್ಕಾಗಿ ಬಳಸುವುದು ಶ್ರೇಷ್ಠ. ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡಬು(ಸಿಹಿ ಇಲ್ಲದ), ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ. ಸೋದರಿ ಆ ಸಮಯದಲ್ಲಿ ಅವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ. ಇದು ಹಬ್ಬದ ವೈಶಿಷ್ಟ್ಯ.
ಅವಿವಾಹಿತರು ಹೇಗೆ ಆಚರಿಸಬೇಕು? ಈ ವ್ರತ ಕೇವಲ ವಿವಾಹಿತರಿಗೆ ಮಾತ್ರ ಎಂದೇನಿಲ್ಲ. ಅವಿವಾಹಿತರು ತಮಗೆ ಉತ್ತಮ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತ, ಕೈಗೆ ಕಂಕಣ ಕಟ್ಟಿಕೊಂಡು ಭಕ್ತಿಯಿಂದ ವ್ರತ ಆಚರಿಸಬಹುದು. ಭೀಮನ ಅಮಾವಾಸ್ಯೆ, ಜ್ಯೋತಿರ್ಭೀಮೇಶ್ವರ ವ್ರತ, ಪತಿ ಸಂಜೀವಿನಿ ವ್ರತ ಸೇರಿದಂತೆ ಹಲವು ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಇದನ್ನೇ ಅಳಿಯನ ಅಮಾವಾಸ್ಯೆ, ಕೊಡೆ ಅಮಾವಾಸ್ಯೆ ಎಂಬಿತ್ಯಾದಿ ಹೆಸರಿನಿಂದ ಕರೆಯುತ್ತಾರೆ. ಮದುವೆಯಾದ ಮೊದಲ ವರುಷ ಅಳಿಯನನ್ನು ಪತ್ನಿಯ ತವರು ಮನೆಗೆ ಕರೆಸಿ ಸತ್ಕರಿಸುವ ಪದ್ಧತಿಯೂ ಇದೆ.
ಇದನ್ನೂ ಓದಿ: Bheemana Amavasya: ಭೀಮನ ಅಮಾವಾಸ್ಯೆಯ ಹಿಂದಿದೆ ರೋಚಕ ಇತಿಹಾಸ; ಇದನ್ನು ಕೊಡೆ ಅಮಾವಾಸ್ಯೆ ಎಂದು ಕರೆಯುವುದೇಕೆ?