Garuda Purana: ಜೀವನದಲ್ಲಿ ನೀಡಲೇಬೇಕಾದ ದಾನಗಳೆಷ್ಟು? ಆ ಕುರಿತಾಗಿ ಗರುಡ ಪುರಾಣದಲ್ಲಿ ಏನು ಹೇಳಿದೆ?
ನಮ್ಮ ಕಲ್ಪನೆಗೆ ನಿಲುಕದಿದ್ದಲ್ಲಿ ಅಂತಹ ವ್ಯವಸ್ಥೆಯನ್ನು ಸುಳ್ಳು ಎನ್ನುವುದು ಸರಿಯಲ್ಲ. ಹೇಗೆ ಭದ್ರವಾಗಿ ಕಿಟಕಿ ಬಾಗಿಲು ಮುಚ್ಚಿ ಹಲವು ದಿನ ವಾಸವಿಲ್ಲದ ಮನೆಯೊಳಗೆ ದೂಳು ತುಂಬಿಕೊಳ್ಳುತ್ತದೋ ಅದೇ ರೀತಿ ನಮಗೂ ನಮ್ಮ ಜೀವನದಲ್ಲಿ ತಿಳಿಯದೆಯೇ ಆಗುವ ಪ್ರಕ್ರಿಯೆಗಳು ಹಲವಾರು ಇವೆ.
ಮಾನವನು ತನ್ಮ ಜನ್ಮದಿಂದ ಆರಂಭಿಸಿ ಪ್ರತಿಯೊಂದು ಕ್ಷಣದಲ್ಲೂ ಕ್ರಿಯೆಯನ್ನು ಮಾಡುತ್ತಲೇ ಇರುತ್ತಾನೆ. ಅದು ಸಾತ್ವಿಕ ರಾಜಸ ತಾಮಸ ಎಂಬ ಮೂರು ಗುಣಗಳನ್ನು ಆಧರಿರುತ್ತದೆ. ಆ ಕ್ರಿಯೆಗೆ ಯೋಗ್ಯವಾದ ಫಲವನ್ನು ನಾವು ಪ್ರತೀ ಕ್ಷಣವೂ ಅನುಭವಿಸುತ್ತಿರುತ್ತೇವೆ. ಅದು ಕೆಲವು ಸಲ ಕೆಲವರಿಗೆ ಅನುಭವಕ್ಕೆ ಬರುತ್ತದೆ ಇನ್ನು ಕೆಲವು ಸಲ ಬರುವುದಿಲ್ಲ ಹಾಗೆಯೇ ಇನ್ನೂ ಕೆಲವರಿಗೆ ಹಾಗೊಂಡು ವ್ಯವಸ್ಥೆಯಿದೆ ಎನ್ನುವ ಕಲ್ಪನೆಯೂ ಇರುವುದಿಲ್ಲ. ನಮ್ಮ ಕಲ್ಪನೆಗೆ ನಿಲುಕದಿದ್ದಲ್ಲಿ ಅಂತಹ ವ್ಯವಸ್ಥೆಯನ್ನು ಸುಳ್ಳು ಎನ್ನುವುದು ಸರಿಯಲ್ಲ. ಹೇಗೆ ಭದ್ರವಾಗಿ ಕಿಟಕಿ ಬಾಗಿಲು ಮುಚ್ಚಿ ಹಲವು ದಿನ ವಾಸವಿಲ್ಲದ ಮನೆಯೊಳಗೆ ದೂಳು ತುಂಬಿಕೊಳ್ಳುತ್ತದೋ ಅದೇ ರೀತಿ ನಮಗೂ ನಮ್ಮ ಜೀವನದಲ್ಲಿ ತಿಳಿಯದೆಯೇ ಆಗುವ ಪ್ರಕ್ರಿಯೆಗಳು ಹಲವಾರು ಇವೆ. ಅಂತಹ ಅಗೋಚರ ಕರ್ಮಕ್ಕನುಗುಣವಾಗಿ ಮತ್ತು ತಿಳಿದು ಮಾಡಿರುವ ಕರ್ಮಕ್ಕನುಗುಣವಾಗಿ ಪಾಪಗಳು ಹಾಗೂ ಪುಣ್ಯಗಳು ನಮ್ಮನ್ನು ಆವರಿಸುತ್ತಲೇ ಇರುತ್ತವೆ.
ಇಂತಹ ಪಾಪಗಳ ನಿವಾರಣೆಗೆ ಮನುಷ್ಯನು ಜೀವನದಲ್ಲಿ ಕೆಲವು ದಾನಗಳನ್ನು ಕೊಡಲೇಬೇಕು. ಅದು ಮುಖ್ಯವಾದ ಎರಡು ಸಂದರ್ಭದಲ್ಲಿ ಒಂದು ಗ್ರಹಣ ಕಾಲದಲ್ಲಿ ಮತ್ತೊಂದು ಮರಣದ ಸಮಯದಲ್ಲಿ ಅದನ್ನು ಗರುಡ ಪುರಾಣದಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ .
ಆತುರೇ ಚ ಉಪರಾಗೇ ಚ ದ್ವಯಂ ದಾನಂ ವಿಶಿಷ್ಯತೇ |
ಅತಃ ಅವಶ್ಯಂ ಪ್ರದಾತವ್ಯಂ ಅಷ್ಟ ದಾನಂ ತಿಲಾದಿಕಂ ||”
ಗ್ರಹಣ ಕಾಲದಲ್ಲಿ ಮತ್ತು ಮರಣ ಕಾಲದಲ್ಲಿ ಎಂಟು ದಾನಗಳನ್ನು ಕೊಡಬೇಕು. ಗ್ರಹಣ ಕಾಲದಲ್ಲಿ ಮನೆಯ ಹಿರಿಯನು ಸಾಧ್ಯವಿದ್ದಲ್ಲಿ ಎಂಟು ದಾನಗಳನ್ನು ಅಥವಾ ಈ ಕೆಳಗೆ ಹೇಳಲ್ಪಡುವ ದಾನಗಳಲ್ಲಿ ಕನಿಷ್ಠ ಎರಡು ದಾನಗಳನ್ನಾದರೂ ಕೊಡಲೇಬೇಕು. ಮನೆಯ ಎಲ್ಲಾ ಜನರ ತಲೆಗೆ ನಿಭಾಯಿಸಿ ಸರ್ವಾರಿಷ್ಟ ನಿವಾರಣೆ ಆಗಲಿ ಎಂದು ಪ್ರಾರ್ಥಿಸಿ ಕೊಡಬೇಕು ಎಂದು ಗರುಡ ಪುರಾಣ ಹೇಳುತ್ತದೆ. ಆದರೆ ಮರಣ ಕಾಲದಲ್ಲಿ ಅರ್ಥಾತ್ ಮರಣಹೊಂದಿದ ಸಮಯದಲ್ಲಿ ಅವರ ಮಕ್ಕಳು ಕೆಳಗೆ ಹೇಳಲ್ಪಟ್ಟ ಅಷ್ಟೂ ದಾನಗಳನ್ನು ಕೊಡಬೇಕು. ಆ ರೀತಿಯಾದ ದಾನವನ್ನು ಕೊಡುವುದರಿಂದ ನಮ್ಮ ಪಿತೃಗಳಿಗೆ ಸ್ವರ್ಗವೇ ಮೊದಲಾದ ಉತ್ತಮ ಲೋಕ ಪ್ರಾಪ್ತವಾಗುತ್ತದೆ ಅಲ್ಲದೇ ನಮ್ಮ ಮುಂದಿನ ಸಂತತಿ ಕ್ಷೇಮವಾಗಿರುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಿದೆ.
ಆ ದಾನಗಳು ಯಾವುವು ಎಂದರೆ ಗರುಡ ಪುರಾಣದಲ್ಲಿ ಹೀಗೆ ಹೇಳಿದ್ದಾರೆ :
ತಿಲಾ ಲೋಹಂ ಹಿರಣ್ಯಂ ಚ ಕಾರ್ಪಾಸೋ ಲವಣಂ ತಥಾ |
ಸಪ್ತ ಧಾನ್ಯಂ ಕ್ಷಿತಿಃ ಗಾವಃ ಏಕೈಕಂ ಪಾವನಂ ಸ್ಮೃತಂ” ||”
1. ತಿಲ ಅಂದರೆ ಎಳ್ಳು 2. ಲೋಹ ಅಂದರೆ ಕಬ್ಬಿಣ 3. ಹಿರಣ್ಯ ಅಂದರೆ ಹಣ ಅಥವಾ ಚಿನ್ನ 4. ಕಾರ್ಪಾಸ ಅಂದರೆ ಹತ್ತಿಯಿಂದ ತಯಾರಿಸಿದ ಬಟ್ಟೆ 5. ಲವಣಂ ಅಂದರೆ ಉಪ್ಪು 6. ಸಪ್ತ ಧಾನ್ಯ ಅಂದರೆ ಅಡುಗೆಗೆ ಬಳಸುವ ಏಳು ಧಾನ್ಯಗಳು 7. ಕ್ಷಿತಿ ಅಂದರೆ ಭೂಮಿ ಅಥವಾ ತೆಂಗಿನಗಿಡ 8. ಗಾವಃ ಅಂದರೆ ಗೋವು ಅಥವಾ ನಾರಿಕೇಲಫಲ.
ಈ ರೀತಿ ಪ್ರಧಾನವಾಗಿ ಎಂಟು ವಿಧದ ದಾನಗಳನ್ನು ಗರುಡ ಪುರಾಣದಲ್ಲಿ ಹೇಳಿದ್ದಾರೆ. ಎಳ್ಳಿನಿಂದ ಪಾಪದ ನಾಶವಾಗುತ್ತದೆ. ಅಂತಯೇ ನಂತರದ ದಾನಗಳಿಗೆ ಮಹತ್ತರವಾದ ಫಲವು ಪುರಾಣದಲ್ಲಿ ಹೇಳಲ್ಪಟ್ಟಿದೆ. ಗರುಡ ಪುರಾಣದ ಪ್ರಕಾರ ಮಾನವನು ತನ್ನ ಮೈಯ ಕೊಳೆಯನ್ನು ಹೋಗಲಾಡಿಸಲು ಪ್ರತೀ ದಿನ ಸ್ನಾನ ಮಾಡುವಂತೆ ಹಾಗೆಯೇ ಹಸಿವನ್ನು ನೀಗಿಸಲು ಪ್ರತೀ ಹೊತ್ತು ಆಹಾರ ಸ್ವೀಕರಿಸುವಂತೆ ತಾನು ಮಾಡುವ ಪಾಪ ಕರ್ಮದ ಫಲ ಕರಗಲು ಮತ್ತು ಪುಣ್ಯ ಕರ್ಮದ ಫಲ ಅನುಭವಕ್ಕೆ ಬರಲು ಪ್ರತೀ ಗ್ರಹಣದಲ್ಲೂ ತಮ್ಮ ಅನುಕೂಲಕ್ಕೆ ತಕ್ಕಂತೆ ಮೇಲೆ ಹೇಳಿದ ದಾನವನ್ನು ಕೊಡಬೇಕು. ಹಾಗೆಯೇ ಮರಣದಲ್ಲಿ ಮೃತನಾದ ವ್ಯಕ್ತಿಯ ಮನೆಯವರು ಶ್ರದ್ಧೆಯಿಂದ ಮೇಲೆ ಹೇಳಿದ ಎಂಟೂ ದಾನಗಳನ್ನು ಕೊಡಬೇಕು ಎಂಬುದು ಪುರಾಣದ ಮಾತು. ಮಾಡಿದರೆ ಕ್ಷೇಮವಿದೆ ಎಂಬುದು ನಿಶ್ಚಿತ. ದಾನ ಮಾಡುವುದು ನಮಗೆ ಬೇಡದೇ ಇರುವ ವಸ್ತುವನ್ನಲ್ಲ . ಅಂತಹ ದಾನಕ್ಕೆ ಫಲವೂ ಕಡಿಮೆ. ಉತ್ತಮ ಆಚಾರವುಳ್ಳ ವ್ಯಕ್ತಿಗೆ ಒಳ್ಳೆಯ ರೀತಿಯ ದಾನ ಮಾಡಿರಿ ಅದರಿಂದ ಪಾಪ ನಾಶವಾಗಿ ದಾರಿದ್ರ್ಯ ದೂರವಾಗುತ್ತದೆ ಎಂಬುದು ಗರುಡ ಪುರಾಣದ ಅಭಿಪ್ರಾಯ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು