ಪತಿಯನ್ನು ಪತ್ನಿ “ರೀ” ಎಂಬ ಶಬ್ದದಿಂದ ಕರೆಯುವುದು ಸರಿಯೇ?
ಸನಾತನ ಭಾರತೀಯ ಪದ್ಧತಿಯಲ್ಲಿ ಪತಿಯ ಹೆಸರನ್ನು ಪತ್ನಿಯಾದವಳು ಹೇಳುವುದು ರೂಢಿಯಲ್ಲಿಲ್ಲ. ಯಾಕೆ ಈ ಆಚರಣೆ ಎಂಬ ಪ್ರಶ್ನೆ ಇತ್ತೀಚಿಗಿನ ತಲೆಮಾರಿನಲ್ಲಿ ಮೂಡುತ್ತಿರುವುದು ಸಹಜ. ವಾಸ್ತವವಾಗಿ ನಮ್ಮಿಂದ ಹಿರಿಯರನ್ನು ಹೆಸರು ಹಿಡಿದು ಕರೆಯುವುದು ಉಚಿತವಲ್ಲ ಎಂದು ಶಾಸ್ತ್ರದಲ್ಲಿ ಹೇಳಿದೆ.
ಸನಾತನ ಭಾರತೀಯ ಪದ್ಧತಿಯಲ್ಲಿ ಪತಿಯ ಹೆಸರನ್ನು ಪತ್ನಿಯಾದವಳು ಹೇಳುವುದು ರೂಢಿಯಲ್ಲಿಲ್ಲ. ಯಾಕೆ ಈ ಆಚರಣೆ ಎಂಬ ಪ್ರಶ್ನೆ ಇತ್ತೀಚಿಗಿನ ತಲೆಮಾರಿನಲ್ಲಿ ಮೂಡುತ್ತಿರುವುದು ಸಹಜ. ವಾಸ್ತವವಾಗಿ ನಮ್ಮಿಂದ ಹಿರಿಯರನ್ನು ಹೆಸರು ಹಿಡಿದು ಕರೆಯುವುದು ಉಚಿತವಲ್ಲ ಎಂದು ಶಾಸ್ತ್ರದಲ್ಲಿ ಹೇಳಿದೆ. ಅದೇ ಪದ್ಧತಿಯಲ್ಲಿ ಪತ್ನಿಯಾದವಳು ಪತಿಯ ಹೆಸರನ್ನು ಹೇಳುವುದರಿಂದ ಪತಿಯ ಆಯುಷ್ಯ ಪ್ರಮಾಣ ಕಡಿಮೆ ಆಗುತ್ತದೆ ಎಂಬ ಉಲ್ಲೇಖವೂ ಇದೆ. ಈ ಕಾರಣಗಳಿಂದ ಧರ್ಮ ಶ್ರದ್ಧೆಯುಳ್ಳವರು ಪತಿಯ ಹೆಸರನ್ನು ಸಂಬೋಧಿಸುವುದಿಲ್ಲ. ಇದರ ಬದಲಾಗಿ ಹಿಂದಿನ ಕಾಲದಲ್ಲಿ “ಆರ್ಯಪುತ್ರ” “ಆರ್ಯ” “ಭೋಃ” ಎಂಬಿತ್ಯಾದಿ ಪದಗಳಿಂದ ಕರೆಯುವುದು ರೂಢಿಯಲ್ಲಿತ್ತು. ಆದರೆ ಇತ್ತೀಚಿಗಿನ ಕಾಲಮಾನದಲ್ಲಿ ಪತ್ನಿಯಾದವಳು ತನ್ನ ಪತಿಯನ್ನು “ರೀ” ಎಂಬ ಪದದಿಂದ ಕರೆಯಲು ಆರಂಭಿಸಿದ್ದಾಳೆ. ಈ ರೀತಿಯ ಸಂಬೋಧನೆ ಆರಂಭ ಪ್ರಾಯಃ ನಾಟಕಗಳು ಪ್ರವರ್ಧಮಾನದಲ್ಲಿರುವಾಗ ಬಂದಿರಬಹುದು ಮತ್ತು ಸಿನಿಮಾರಂಗದಿಂದ ಇನ್ನೂ ಪ್ರಖರತೆಯನ್ನು ಪಡೆಯಿತು ಎಂದು ಹೇಳಬಹುದು.
ನಾವು ಪ್ರತೀ ದಿನ ಬಳಸುವ “ರೀ” ಎಂಬ ಶಬ್ದವು ಸಂಸ್ಕೃತದ “ರೇ” ಎಂಬ ಶಬ್ದದ ಅಪಭ್ರಂಶ ರೂಪವಾಗಿದೆ. ಸಂಸ್ಕ್ರತ ನಾಟಕಗಳಲ್ಲಿ “ರೇ” ಎಂಬ ಶಬ್ದವನ್ನು ಕೆಳಮಟ್ಟದ ಪಾತ್ರಗಳಿಗೆ ಮಾತ್ರ ಬಳಸಲಾಗಿದೆ. ವ್ಯಾಕರಣ ಶಾಸ್ತ್ರದಲ್ಲಿ ಹೇಳುವಂತೆ “ರೇ” ಎನ್ನುವ ಶಬ್ದವು “ನೀಚಾದೇಃ ಸಂಬೋಧನೆ” ಅಂದರೆ ರೇ ಎಂಬ ಶಬ್ದವು ನೀಚ ಪಾತ್ರಗಳಿಗೆ (ಕೆಳಮಟ್ಟದ ಅಥವಾ ಅವಿದ್ಯಾವಂತ ಅಥವಾ ತಪ್ಪಿಸ್ಥರಿಗೆ) ಬಳಸುವ ಪದವಾಗಿದೆ. ಇಂತಹ ಪದವನ್ನು ಸನಾತನ ಭಾರತದ ಆಚರಣೆಗಳ ಮೇಲೆ ಶ್ರದ್ಧೆಯಿರುವ ನಾವುಗಳು (ಸದ್ಗ್ರಹಿಣಿಯರು) ಸದಾ ಗೌರವಿಸುವ ಪತಿಯನ್ನು ಸಂಬೋಧಿಸಲು ಬಳಸುವುದು ಸರಿಯೇ ಎಂದು ಯೋಚಿಸಿ? ಅಧಮ (ಶುಭಸಂದರ್ಭಕ್ಕೆ ಕೂಡದ) ಪದಗಳಿಂದ ನಮ್ಮನ್ನು ನಾವು ಅನುರಾಗದಿಂದ ಹಂಚಿಕೊಂಡ ವ್ಯಕ್ತಿಯನ್ನು ಕರೆಯಲು ಬಳಸಿದರೆ ನಿಜವಾಗಿಯೂ ನಾವು ಮೂರ್ಖರಲ್ಲವೇ? ಅಲ್ಲದೇ ಶ್ರೇಷ್ಠ ವ್ಯಕ್ತಿಗಳನ್ನು ಉಚಿತವಲ್ಲದ ಪದದಿಂದ ಕರೆಯುವುದು ಧರ್ಮ ಸಮ್ಮತವೂ ಅಲ್ಲ ಹಾಗೆಯೇ ಅಮಂಗಲವೂ ಹೌದು.
ಇದನ್ನೂ ಓದಿ: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?
ಅದಕ್ಕೆ ಶಾಸ್ತ್ರದಲ್ಲಿ ಹೇಳಿರುವುದು “ಯಃ ಶಬ್ದಃ ಸುಷ್ಟು ಪ್ರಯುಕ್ತಃ ಸ್ವರ್ಗೇ ಲೋಕೇ ಕಾಮಧುಕ್ ಭವತಿ” ಎಂದು . ತಾತ್ಪರ್ಯ ಹೀಗಿದೆ ಯಾವ ಶಬ್ದವನ್ನು ಯಾವ ರೀತಿ ಎಲ್ಲಿ ಬಳಸಬೇಕು ಎಂದು ಯೋಚಿಸಿ ಸರಿಯಾದ ರೀತಿಯಲ್ಲಿ ಅದರ ಪ್ರಯೋಗ ಮಾಡಿದಲ್ಲಿ ಸ್ವರ್ಗದಲ್ಲಿ ತಮ್ಮ ಇಚ್ಛೆಯನ್ನು ಅಥವಾ ಕಾಮಧೇನುವಿನ ಸವಿಯಾದ ಹಾಲನ್ನು ಬಳಸುವ ಯೋಗವುಂಟಾಗುತ್ತದೆ ಎಂದು. ಮೇಲಿನ ವಾಕ್ಯದ ಸಂದೇಶವಿಷ್ಟೇ ಶಬ್ದವನ್ನು ಸರಿಯಾದ ರೀತಿಯಲ್ಲಿ ಯೋಗ್ಯತೆಗೆ ಅನುಗುಣವಾಗಿ ಬಳಸಿದರೆ ಇಹದಲ್ಲೂ ಪರದಲ್ಲೂ ಕ್ಷೇಮ ಎಂದು.
ಹಾಗಾದರೆ ಈಗ ಯೋಚಿಸಿ ನಾವು ನಮ್ಮ ಪತಿಯನ್ನು “ರೀ” ಎಂಬ ಶಬ್ದದಿಂದ ಕರೆದು ಅಧಮನನ್ನಾಗಿ (ನಮ್ಮಿಂದ ಕೆಳಗಿನ ವ್ಯಕ್ತಿಯಾಗಿ) ಬಿಂಬಸಬೇಕೇ? ಅದರ ಬದಲು ಆರ್ಯಾ, ಹೋಯ್, ಜ್ಯೇಷ್ಠ ಅಥವಾ ನಮಗಿಷ್ಟವಾಗುವ ಉಚಿತವಾದ ಪದಗಳಿಂದ ಕರೆದು ಭಾರತೀಯತೆಯನ್ನು ಮೆರೆಯೋಣ ಅಲ್ಲವೇ?
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು
Published On - 5:42 pm, Tue, 11 July 23