ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಸಿಗುವ ಹಣವೆಷ್ಟು? ಭಾರತಕ್ಕೆ ಸಿಕ್ಕಿದ್ದೇಷ್ಟು?
Women's T20 World Cup 2026 Prize Money: 2026ರ ಮಹಿಳಾ ಟಿ20 ವಿಶ್ವಕಪ್ ಫೈನಲ್ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಐಸಿಸಿ ಈ ವರ್ಷ ಬಹುಮಾನದ ಮೊತ್ತವನ್ನು 82 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ವಿಜೇತರಿಗೆ 22 ಕೋಟಿ ರೂ., ರನ್ನರ್‌ಅಪ್‌ಗೆ 11 ಕೋಟಿ ರೂ. ಸಿಗಲಿದೆ. ಸೆಮಿಫೈನಲಿಸ್ಟ್‌ಗಳಿಗೆ ತಲಾ 6.29 ಕೋಟಿ ರೂ. ಮತ್ತು ಗುಂಪು ಹಂತದ ಪ್ರತಿ ಗೆಲುವಿಗೆ 29 ಲಕ್ಷ ರೂ. ದೊರೆಯಲಿದೆ.

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಪಂದ್ಯಾವಳಿಯ ಎರಡು ಬಲಿಷ್ಠ ಮತ್ತು ಇಲ್ಲಿಯವರೆಗೆ ಅಜೇಯ ತಂಡಗಳಾಗಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ಟ್ರೋಫಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆದುಕೊಂಡರೆ, ಇತ್ತ ಎರಡನೇ ಸೆಮಿಫೈನಲ್‌ನಲ್ಲಿ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಉಭಯ ತಂಡಗಳ ನಡುವಿನ ಈ ಐತಿಹಾಸಿಕ ಫೈನಲ್ ಪಂದ್ಯವು ಜುಲೈ 5 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಮೇಲೆ ಭಾರಿ ಹಣದ ಮಳೆಯೂ ಹರಿಯಲಿದೆ. ಹಾಗೆ ಸೋತ ತಂಡಕ್ಕೂ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ.
ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು?
ಮಹಿಳಾ ಕ್ರಿಕೆಟ್ ಅನ್ನು ಮತ್ತಷ್ಟು ಉತ್ತೇಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ವರ್ಷ ಬಹುಮಾನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಒಟ್ಟು ಬಹುಮಾನದ ಹಣವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಯುಎಇಯಲ್ಲಿ ನಡೆದ ಕಳೆದ ಮಹಿಳಾ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 74 ಕೋಟಿ ರೂ.ಗಳಾಗಿತ್ತು. ಇದೀಗ ಈ ಅವೃತ್ತಿಗೆ ಬಹುಮಾನದ ಮೊತ್ತವನ್ನು 82 ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಅದರಂತೆ ಈ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ 12 ತಂಡಗಳು ಕನಿಷ್ಠ 2.06 ಕೋಟಿ ರೂಪಾಯಿಗಳ ಖಚಿತ ಬಹುಮಾನ ಹಣವನ್ನು ಪಡೆಯುತ್ತವೆ. ಉಳಿದಂತೆ ಚಾಂಪಿಯನ್ ಹಾಗೂ ರನ್ನರ್ಅಪ್ ತಂಡಕ್ಕೆ ಎಷ್ಟು ಸಿಗಲಿದೆ. ಹಾಗೆಯೇ ಲೀಗ್ ಹಂತದಲ್ಲೇ ಹೊರಬಿದ್ದ ಟೀಂ ಇಂಡಿಯಾಕ್ಕೆ ಎಷ್ಟು ಹಣ ಸಿಗಲಿದೆ ಎಂಬುದನ್ನ ನೋಡುವುದಾದರೆ..
- ವಿಜೇತ ತಂಡಕ್ಕೆ ಸುಮಾರು 22 ಕೋಟಿ ರೂ. ಬಹುಮಾನ ಸಿಗಲಿದೆ.
- ರನ್ನರ್ ಅಪ್ ತಂಡಕ್ಕೆ ಸುಮಾರು 11 ಕೋಟಿ ರೂ. ಬಹುಮಾನ ಸಿಗಲಿದೆ.
- ಸೆಮಿಫೈನಲ್ ಆಡಿದ ತಂಡಗಳಿಗೆ ತಲಾ 6.29 ಕೋಟಿ ರೂ. ಬಹುಮಾನ ಸಿಗಲಿದೆ.
- ಉಳಿದಂತೆ ಗುಂಪು ಹಂತದಲ್ಲಿ ಗೆದ್ದ ಪ್ರತಿ ಪಂದ್ಯಗಳಿಗೆ 29 ಲಕ್ಷ ರೂ.ಬಹುಮಾನ ಸಿಗಲಿದೆ.
- ಅದರಂತೆ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಗೆದ್ದ ಭಾರತ ತಂಡಕ್ಕೆ ಸುಮಾರು 90 ಲಕ್ಷ ರೂ. ಬಹುಮಾನ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Fri, 3 July 26




