IPL 2026: ಸಿಎಸ್ಕೆಗೆ ಮರ್ಮಾಘಾತ; ಧೋನಿ ಜೊತೆಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್ಗೆ ಇಂಜುರಿ
IPL 2026, CSK's Double Injury Blow: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2026ರ ಐಪಿಎಲ್ ಅಭಿಯಾನಕ್ಕೂ ಮುನ್ನ ದೊಡ್ಡ ಆಘಾತ ಎದುರಾಗಿದೆ. ಎಂಎಸ್ ಧೋನಿ ಗಾಯದಿಂದ ಹೊರಬಿದ್ದ ಬೆನ್ನಲ್ಲೇ, ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಕೂಡ ಇಂಜುರಿ ಸಮಸ್ಯೆಗೆ ಸಿಲುಕಿದ್ದಾರೆ. ಸೈಡ್ ಸ್ಟ್ರೈನ್‌ನಿಂದ ಬಳಲುತ್ತಿರುವ ಬ್ರೆವಿಸ್, ತಂಡದ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ. ಇದರಿಂದ ಸಿಎಸ್ಕೆ ಮೊದಲ ಪಂದ್ಯಗಳಲ್ಲಿ ಸ್ಟಾರ್ ಆಟಗಾರರಿಲ್ಲದೆ ಆಡಬೇಕಾಗಿದೆ.

2026 ರ ಐಪಿಎಲ್‌ನಲ್ಲಿ (IPL 2026) ತನ್ನ ಅಭಿಯಾನವನ್ನು ಆರಂಭಿಸುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸಂಕಷ್ಟಗಳು ಒಂದೊಂದಾಗಿಯೇ ಹೆಚ್ಚಾಗುತ್ತಿವೆ. ಮಾಜಿ ನಾಯಕ ಎಂಎಸ್ ಧೋನಿ (MS Dhoni) ಗಾಯದಿಂದಾಗಿ ಮುಂದಿನ ಕೆಲವು ವಾರಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಈ ಆಘಾತದಿಂದ ಹೊರಬರುವ ಮುನ್ನವೇ ಸಿಎಸ್ಕೆ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಇಂಜುರಿ ಮರ್ಮಾಘಾತ ನೀಡಿದೆ. ವರದಿಗಳ ಪ್ರಕಾರ, 22 ವರ್ಷದ ದಕ್ಷಿಣ ಆಫ್ರಿಕಾದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಕೂಡ ಫಿಟ್‌ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರು ಕೂಡ ತಂಡದ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಬ್ರೆವಿಸ್‌ಗೆ ಇಂಜುರಿ
ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್‌ನಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 30 ರ ಭಾನುವಾರ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಧೋನಿ ಮತ್ತು ಬ್ರೆವಿಸ್ ಇಬ್ಬರೂ ಇಲ್ಲದೆ ಆಡಬೇಕಾಗುತ್ತದೆ. ಇದರ ಜೊತೆಗೆ ತಂಡದ ಎರಡನೇ ಪಂದ್ಯದಲ್ಲೂ ಈ ಇಬ್ಬರು ಆಡುವುದು ಅನುಮಾನವಾಗಿದೆ.
ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ಬ್ರೆವಿಸ್ ಅವರ ಗಾಯವು ಸಿಎಸ್‌ಕೆ ತಂಡದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಅವರನ್ನು ಸೀಸನ್ ಮಧ್ಯದಲ್ಲಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗೆ ಬದಲಿ ಆಟಗಾರನಾಗಿ ಬಂದಿದ್ದ ಬ್ರೆವಿಸ್ ಕೇವಲ ಆರು ಪಂದ್ಯಗಳಲ್ಲಿ 180 ಸ್ಟ್ರೈಕ್ ರೇಟ್ನಲ್ಲಿ 17 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳ ಸಹಾಯದಿಂದ 225 ರನ್ ಬಾರಿಸಿದ್ದರು. ಈಗ, ತಂಡವು ಅವರಿಲ್ಲದೆ ಮೈದಾನಕ್ಕೆ ಇಳಿಯಬೇಕಾಗುತ್ತದೆ, ಇವರ ಜೊತೆಗೆ ಧೋನಿ ಕೂಡ ಇಲ್ಲದಿರುವುದು ಸಿಎಸ್ಕೆ ದೊಡ್ಡ ತಲೆನೋವಾಗಿದೆ.
MI vs KKR IPL 2026 Live Score: ಕೆಕೆಆರ್ಗೆ ಸ್ಫೋಟಕ ಆರಂಭ
ಸಿಎಸ್‌ಕೆ ತಂಡಕ್ಕೆ ಗಾಯಗಳ ಸಮಸ್ಯೆ
ಆದಾಗ್ಯೂ ಬ್ರೆವಿಸ್ ಗಾಯದ ಬಗ್ಗೆ ಸಿಎಸ್‌ಕೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಒಂದು ದಿನದ ಹಿಂದೆಯಷ್ಟೇ, ಚೆನ್ನೈ ತಂಡವು ಕಾಲಿನ ಗಾಯದಿಂದಾಗಿ ಧೋನಿ ಸುಮಾರು ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ನೀಡಿತ್ತು. ಆದರೀಗ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಧೋನಿ ಲೀಗ್ ಹಂತದ ಮೊದಲ ಆರು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಇಬ್ಬರು ಸ್ಟಾರ್ ಆಟಗಾರರ ಜೊತೆಗೆ, ವೇಗದ ಬೌಲರ್ ನಾಥನ್ ಎಲಿಸ್ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಸಿಎಸ್ಕೆ ಸ್ಪೆನ್ಸರ್ ಜಾನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
