AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ 3 ಎಸೆತಗಳಲ್ಲೇ ಹ್ಯಾಟ್ರಿಕ್: ಹೊಸ ವಿಶ್ವ ದಾಖಲೆ ಬರೆದ ಲಿಂಗೇಶ್!

TNPL 2026: ತಮಿಳುನಾಡು ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಡಾ ಕೊವೈ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. 184 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ತಿರುಚಿ ಗ್ರಾಂಡ್ ಚೋಳಾಸ್ ತಂಡ, ಕೊವೈ ಕಿಂಗ್ಸ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 15.4 ಓವರ್‌ಗಳಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಯಿತು

ಮೊದಲ 3 ಎಸೆತಗಳಲ್ಲೇ ಹ್ಯಾಟ್ರಿಕ್: ಹೊಸ ವಿಶ್ವ ದಾಖಲೆ ಬರೆದ ಲಿಂಗೇಶ್!
Deeban LingeshImage Credit source: TNPL
ಝಾಹಿರ್ ಯೂಸುಫ್
|

Updated on: Aug 27, 2026 | 12:30 PM

Share

ಟಿ20 ಕ್ರಿಕೆಟ್​ನಲ್ಲಿ ದಾಖಲೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಆದರೆ, ಪಂದ್ಯವೊಂದರ ಆರಂಭದಲ್ಲೇ ಇಡೀ ಪಂದ್ಯದ ಚಿತ್ರಣವನ್ನು ಬದಲಾಯಿಸಿ, ವಿಶ್ವ ದಾಖಲೆಯ ಪುಟ ಸೇರುವುದು ಸಾಮಾನ್ಯದ ಮಾತಲ್ಲ! ಕ್ರಿಕೆಟ್ ಇತಿಹಾಸದಲ್ಲಿ ನಾವು ನೂರಾರು ಹ್ಯಾಟ್ರಿಕ್ ಸಾಧನೆಗಳನ್ನು ನೋಡಿದ್ದೇವೆ. ಆದರೆ, ಇನ್ನಿಂಗ್ಸ್‌ನ ತೀರಾ ಮೊದಲ ಮೂರು ಎಸೆತಗಳಲ್ಲೇ ಬ್ಯಾಕ್-ಟು-ಬ್ಯಾಕ್ ವಿಕೆಟ್ ಉರುಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಕೀರ್ತಿ ವಿಡಾ ಕೊವೈ ಕಿಂಗ್ಸ್ ತಂಡದ ಆಲ್‌ರೌಂಡರ್ ಕೆ. ದೀಪನ್ ಲಿಂಗೇಶ್ ಅವರಿಗೆ ಸಲ್ಲುತ್ತದೆ.

ಲಿಂಗೇಶ್ ಮಿಂಚಿನ ದಾಳಿ:

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿಎನ್‌ಪಿಎಲ್ 10ನೇ ಆವೃತ್ತಿಯ ‘ಕ್ವಾಲಿಫೈಯರ್ 2’ ಹೈ-ವೋಲ್ಟೇಜ್ ಪಂದ್ಯದಲ್ಲಿ ಈ ಮೈಲಿಗಲ್ಲು ಸ್ಥಾಪಿತವಾಗಿದೆ. ಮೊದಲು ಬ್ಯಾಟ್ ಮಾಡಿದ್ದ ವಿಡಾ ಕೊವೈ ಕಿಂಗ್ಸ್ ತಂಡ ಎಸ್‌ ಲೋಕೇಶ್ವರ್ (66 ರನ್) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 183 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.

ಈ ಗುರಿ ಬೆನ್ನಟ್ಟಲು ಸಜ್ಜಾಗಿದ್ದ ‘ತಿರುಚಿ ಗ್ರಾಂಡ್ ಚೋಳಾಸ್’ ತಂಡಕ್ಕೆ ದೀಪನ್ ಲಿಂಗೇಶ್ ಆರಂಭದಲ್ಲೇ ಚೇತರಿಸಿಕೊಳ್ಳಲಾಗದ ಆಘಾತ ನೀಡಿದರು.

ಮೂರು ಎಸೆತ, ಮೂರು ವಿಕೆಟ್!

ತಿರುಚಿ ಗ್ರಾಂಡ್ ಚೋಳಾಸ್ ತಂಡದ ಇನ್ನಿಂಗ್ಸ್ ಆರಂಭಿಸಲು ನಾಯಕ ಜಯರಮನ್ ಸುರೇಶ್ ಕುಮಾರ್ ಅವರೊಂದಿಗೆ ರಾಜ್​ಕುಮಾರ್ ಆಗಮಿಸಿದ್ದರು. ಆದರೆ ಮೊದಲ ಎಸೆತದಲ್ಲೇ ರಾಜ್​ಕುಮಾರ್​ಗೆ (0) ಲಿಂಗೇಶ್ ಪೆವಿಲಿಯನ್ ಹಾದಿ ತೋರಿಸಿದರು. ಆ ಬಳಿಕ ಬಂದ ಶ್ಯಾಮ್ ಸುಂದರ್ (0) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ಜಗದೀಸನ್ ಕೌಶಿಕ್ (0) ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು.

ಹೊಸ ವಿಶ್ವ ದಾಖಲೆ:

ಟಿ20 ಲೀಗ್ ಕ್ರಿಕೆಟ್​ ಇತಿಹಾಸದಲ್ಲೇ ಇನ್ನಿಂಗ್ಸ್​​ವೊಂದರ ಮೊದಲ ಮೂರು ಎಸೆತಗಳಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಅಪರೂಪದ ವಿಶ್ವ ದಾಖಲೆಯನ್ನು ದೀಪನ್ ಲಿಂಗೇಶ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಇಂತಹದೊಂದು ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಇನಿಂಗ್ಸ್​ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಪಡೆದ ವಿಶ್ವದ 3ನೇ ಬೌಲರ್​ ಎನಿಸಿಕೊಂಡಿದ್ದಾರೆ.

    • ಶಾರುಖ್ ಕುದ್ದೂಸ್ (ಕುವೈತ್): ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತಮ್ಮ ಪಾದಾರ್ಪಣೆಯ ಪಂದ್ಯದ ಮೊದಲ ಓವರ್‌ನ, ಮೊದಲ ಮೂರು ಎಸೆತಗಳಲ್ಲೇ 3 ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧಿಸಿದ ಜಗತ್ತಿನ ಏಕೈಕ ಬೌಲರ್ ಶಾರುಖ್ ಕುದ್ದೂಸ್. 2022ರಲ್ಲಿ ಬಹ್ರೇನ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಸತತವಾಗಿ ಮೂರು ಎಲ್‌ಬಿಡಬ್ಲ್ಯೂ ವಿಕೆಟ್ ಪಡೆಯುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದರು.
    • ಗೆಡೆ ಪ್ರಿಯಂದಾನ (ಇಂಡೋನೇಷ್ಯಾ): 2025ರ ಡಿಸೆಂಬರ್‌ನಲ್ಲಿ ಕಾಂಬೋಡಿಯಾ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನಿಂಗ್ಸ್‌ನ ಮೊದಲ 3 ಎಸೆತಗಳಲ್ಲೇ ಹ್ಯಾಟ್ರಿಕ್ ಪಡೆದು ಇಂಡೋನೇಷ್ಯಾದ ಗೆಡೆ ಪ್ರಿಯಂದಾನ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಇನಿಂಗ್ಸ್​ವೊಂದರ ಮೊದಲ ಮೂರು ಎಸೆತದಲ್ಲಿ ವಿಕೆಟ್ ಉರುಳಿಸುವ ಮೂಲಕ ದೀಪನ್ ಲಿಂಗೇಶ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Follow Us