IND vs SL: ಒಬ್ಬನ ಪಾದಾರ್ಪಣೆ.. 2+2 ಸೂತ್ರದೊಂದಿಗೆ ಕಣಕ್ಕಿಳಿಯಲಿದೆ ಶ್ರೀಲಂಕಾ
Sri Lanka Playing XI Colombo: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಗೆಲುವು ಅನಿವಾರ್ಯ. ಸರಣಿ ಸೋಲಿನ ಭೀತಿಯಲ್ಲಿರುವ ಲಂಕಾ ತಂಡ, ಕೊಲಂಬೊದಲ್ಲಿ ನಡೆಯುವ ಈ ಪಂದ್ಯವನ್ನು ಗೆಲ್ಲಲು ಹೊಸ ತಂತ್ರ ಹೆಣೆಯುತ್ತಿದೆ. ನಾಯಕ ಧನಂಜಯ ಡಿ ಸಿಲ್ವಾ, ಹೆಚ್ಚು ರನ್ ಗಳಿಸಿ, 20 ವಿಕೆಟ್ ಪಡೆಯುವ ಗುರಿ ಹೊಂದಿದ್ದಾರೆ. ಇಬ್ಬರು ಸೀಮರ್‌ಗಳು, ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸುಳಿವು ನೀಡಿ, ಕಮಿಲ್ ಮಿಶ್ರಾ ಪದಾರ್ಪಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ಆಗಸ್ಟ್ 23 ರ ಭಾನುವಾರದಿಂದ ಕೊಲಂಬೊದ ಐತಿಹಾಸಿಕ ಎಸ್‌ಎಸ್‌ಸಿ ಮೈದಾನದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದಿರುವ ಕಾರಣ ಆತಿಥೇಯ ಶ್ರೀಲಂಕಾ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಏಕೆಂದರೆ ಈ ಪಂದ್ಯವನ್ನು ಸೋತರೆ ಸರಣಿ ಲಂಕಾದ ಕೈತಪ್ಪಲಿದೆ. ಇತ್ತ ಪಂದ್ಯ ಡ್ರಾದಲ್ಲಿ ಅಂತ್ಯವಾದರೂ ಶ್ರೀಲಂಕಾ 1-0 ಅಂತರದಿಂದ ಸರಣಿ ಕಳೆದುಕೊಳ್ಳುತ್ತದೆ. ಹೀಗಾಗಿ ಲಂಕಾ ತಂಡ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಇದಕ್ಕೆ ಪೂರಕವಾಗಿ ಪಂದ್ಯಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ (Dhananjaya de Silva) ಆಡುವ ಹನ್ನೊಂದರ ಬಳಗದ ಬಗ್ಗೆ ಸುಳಿವು ನೀಡಿದ್ದಾರೆ.
ಹೆಚ್ಚು ರನ್ ಕಲೆಹಾಕಬೇಕು
ಮೊದಲಿಗೆ ತಂಡ ಗೆಲ್ಲಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ ಧನಂಜಯ ಡಿ ಸಿಲ್ವಾ, ‘ನಾವು ಗೆಲ್ಲಬೇಕೆಂದರೆ ಸ್ಕೋರ್ ಬೋರ್ಡ್‌ನಲ್ಲಿ ಹೆಚ್ಚು ರನ್ ಕಲೆಹಾಕಬೇಕು. ಭಾರತ (ಗಾಲೆಯಲ್ಲಿ) ಮಾಡಿದ್ದು ಅದನ್ನೇ. ಮೊದಲ ಎರಡು ದಿನಗಳಲ್ಲಿ ಟೀಂ ಇಂಡಿಯಾ ಉತ್ತಮವಾಗಿ ಬ್ಯಾಟಿಂಗ್ ಮಾಡಿ 460 ರನ್ ಕಲೆಹಾಕಿತ್ತು. ಹೀಗಾಗಿ ನಾವು ಕೂಡ ಎರಡನೇ ಟೆಸ್ಟ್ನಲ್ಲಿ ರನ್ ಕಲೆಹಾಕುವುದರ ಜೊತೆಗೆ ಎದುರಾಳಿ ತಂಡದ 20 ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಲಿದ್ದೇವೆ’.
ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ
ಮುಂದುವರೆದು ‘ನಾವು ಮೊದಲ ಪಂದ್ಯ ಸೋತು ಹಿನ್ನಡೆಯಲ್ಲಿದ್ದೇವೆ. ಹೀಗಾಗಿ ನಾವು ಈ ಪಂದ್ಯದಲ್ಲಿ ಆರಂಭದಿಂದಲೂ ಚೆನ್ನಾಗಿ ಆಡಬೇಕಾಗಿದೆ. ನಮಗೆ ಅನುಭವ ಕಡಿಮೆ ಇದ್ದರೂ, ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಟೆಸ್ಟ್ ಮತ್ತು ಎ ತಂಡದಲ್ಲಿ ಬಹಳಷ್ಟು ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಿಚ್ ಸಾಕಷ್ಟು ಒಣಗಿದ್ದು, ಮೊದಲ ಎರಡು ದಿನಗಳಲ್ಲಿ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ. ಹೀಗಾಗಿ ನಾವು ಇಬ್ಬರು ಸೀಮರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದ್ದೇವೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್; ಪಟ್ಟಿಯಲ್ಲಿ ಟೀಂ ಇಂಡಿಯಾ
ಕಮಿಲ್ ಮಿಶ್ರಾ ಪಾದಾರ್ಪಣೆ
ಹಾಗೆಯೇ ಕಮಿಲ್ ಮಿಶ್ರಾ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಕಳೆದ ವಾರ ಟಿ20ಯಲ್ಲಿ ಶತಕ ಬಾರಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ನೀವು ಅವರ ಪ್ರದರ್ಶನವನ್ನು ನೋಡಿದರೆ, ಅವರು ಉತ್ತಮ ಸ್ಕೋರ್ ಗಳಿಸಿದ್ದಾರೆ. ಇವರ ಜೊತೆಗೆ ನಾವು ಎಡಗೈ ವೇಗಿ ವಿಶ್ವ ಫೆರ್ನಾಂಡೊ ಅವರನ್ನು ಆಡಿಸುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದಿದ್ದಾರೆ.
ಎರಡನೇ ಟೆಸ್ಟ್‌ಗೆ ಶ್ರೀಲಂಕಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಕಮಿಲ್ ಮಿಶ್ರಾ, ಲಹಿರು ಉದಾರ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ, ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ/ ವಿಶ್ವ ಫೆರ್ನಾಂಡೊ, ಅಸಿತ ಫೆರ್ನಾಂಡೊ.




