Hardik Pandya: ಅವರನ್ನ ಬಾಯಿ ಬಿಟ್ಕೊಂಡು ನೋಡುತ್ತಿರುತ್ತಾರೆ..!
IPL 2026 MI vs KKR: ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 19.1 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (78) ಹಾಗೂ ರಯಾನ್ ರಿಕೆಲ್ಟನ್ (81) ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 19.1 ಓವರ್ಗಳಲ್ಲಿ 224 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ವೈಖರಿಯನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ಹಿಟ್ಮ್ಯಾನ್ನ ಸಿಡಿಲಬ್ಬರದ ಬ್ಯಾಟಿಂಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲಿ ಗೆಲ್ಲಲು ನಾವು 13 ವರ್ಷಗಳಿಂದ ಕಾಯುತ್ತಿದ್ದೆವು. ಇದೀಗ ಈ ಕಾಯುವಿಕೆ ಕೊನೆಗೊಂಡಿರುವುದು ಸಂತಸದ ವಿಷಯ. ಅದು ಸಹ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆದ್ದಿರುವುದು ಖುಷಿಯ ವಿಚಾರ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪವರ್ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿಯೇ ನಮಗೆ ಈ ಪಿಚ್ ಬ್ಯಾಟಿಂಗ್ ಸ್ನೇಹಿ ಎಂಬುದು ನಮಗೆ ತಿಳಿದಿತ್ತು. ಇದಾಗ್ಯೂ ನಾವು ಕೆಕೆಆರ್ 240, 250 ರನ್ಗಳಿಸದಂತೆ ತಡೆಯುವುದು ನಮ್ಮ ಉದ್ಧೇಶವಾಗಿತ್ತು. ಏಕೆಂದರೆ 240 ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದರೆ ಚೇಸ್ ಮಾಡುವುದು ಸುಲಭವಲ್ಲ.
ಅದರಂತೆ ನಮ್ಮ ಬೌಲರ್ಗಳು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 220 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೊತ್ತವನ್ನು ಚೇಸ್ ಮಾಡಬಹುದು ಎಂಬ ನಂಬಿಕೆಯಿತ್ತು. ಇದಕ್ಕಾಗಿ ನಾವು ಉತ್ತಮ ಆರಂಭ ಪಡೆಯಬೇಕಿತ್ತು. ಅಂತಹದೊಂದು ಆರಂಭವನ್ನು ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಒದಗಿಸಿದ್ದರು.
ರೋಹಿತ್ ಶರ್ಮಾ ಕೆಲ ಅತ್ಯುತ್ತಮ ಹೊಡೆತಗಳನ್ನು ಬಾರಿಸಿದ್ದರು. ಇದೇ ವೇಳೆ ರಿಕೆಲ್ಟನ್ ಕೂಡ ಅದ್ಭುತವಾಗಿ ಆಡಿದ್ದರು. ನಾನು ಕೆಲ ಬ್ಯಾಟ್ಸ್‌ಮನ್‌ಗಳು ಅದ್ಭುತ ಹೊಡೆತಗಳನ್ನು ಬಾರಿಸುವುದನ್ನುನೋಡಿದ್ದೇನೆ. ಆದರೆ ರೋಹಿತ್ ಶರ್ಮಾ ಅವರ ಶಾಟ್ಗಳನ್ನು ನೋಡುವಾಗ, ಎಲ್ಲರೂ ಬಾಯಿ ಬಿಟ್ಟುಕೊಂಡಿರುತ್ತಾರೆ. ಅಂತಹದೊಂದು ಅಸಾಧಾರಣ ಬ್ಯಾಟಿಂಗ್.
ರೋಹಿತ್ ಶರ್ಮಾನ ಬ್ಯಾಟಿಂಗ್ ನೋಡಿದ್ರೇನೇ ಗೊತ್ತಾಗುತ್ತದೆ. ಅವರು ಎಂತಹ ಆಟಗಾರ ಎಂಬುದು. ಅವರು ಪ್ರದರ್ಶನವನ್ನು ಅಸಾಧಾರಣ, ಅದ್ಭುತ ಎನ್ನುವುದಕ್ಕಿಂತ ಕಡಿಮೆ ಏನೂ ಇಲ್ಲ. ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ನನಗಂತು ತುಂಬಾ ಖುಷಿಯಾಗಿದೆ.
ಹಾಗೆಯೇ ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಈ ಸೀಸನ್ ಆರಂಭಕ್ಕೂ ಮುನ್ನವೇ ನಾನು ಅವನಿಗೆ ಹೇಳಿದ್ದೆ, ‘ಫ್ರಾಂಚೈಸಿಗಳನ್ನು ಬದಲಿಸುವುದು ಸಾಕು. ನಿಮ್ಮ ವೃತ್ತಿಜೀವನದ ಉಳಿದ ಭಾಗ ಇಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು. ಇದೀಗ ಮುಂಬೈ ಇಂಡಿಯನ್ಸ್ನಲ್ಲಿ ಸಿಕ್ಕ ಅವಕಾಶವನ್ನು ಶಾರ್ದೂಲ್ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: VIDEO: ಪಾಕಿಸ್ತಾನ್ ಸೂಪರ್ ಲೀಗ್ನ ‘ಕಳ್ಳಾಟ’ ಬಯಲು
ಒಟ್ಟಾರೆಯಾಗಿ ಹೇಳುವುದಾದರೆ 13 ವರ್ಷಗಳ ಬಳಿಕ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಗೆದ್ದಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
