VIDEO: ಅಭಿಮಾನಿಯೊಂದಿಗೆ ಹೊಡೆದಾಟಕ್ಕಿಳಿದ ಪಾಕಿಸ್ತಾನ್ ಆಟಗಾರ
Khushdil Shah Fight: ಪಾಕಿಸ್ತಾನ್ ಆಟಗಾರ ಖುಷ್ದಿಲ್ ಶಾ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಝಕಾರಿ ಫೌಲ್ಕ್ಸ್ ಅವರನ್ನು ಭುಜದಿಂದ ಗುದ್ದುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ ಈ ಅನುಚಿತ ವರ್ತನೆಗೆ ಖುಷ್ದಿಲ್ ಶಾಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿತ್ತು. ಇದೀಗ ಅಭಿಮಾನಿಗಳೊಂದಿಗೆ ಜಗಳಕ್ಕಿಳಿದು ಖುಷ್ದಿಲ್ ಮತ್ತೆ ಸುದ್ದಿಯಾಗಿದ್ದಾರೆ.

ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ (Pakistan vs New Zealand) ನಡುವಣ ಮೂರನೇ ಏಕದಿನ ಪಂದ್ಯದ ಬಳಿಕ ಅಹಿತಕರ ಘಟನೆಯೊಂದು ನಡೆದಿದೆ. ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 43 ರನ್ಗಳಿಂದ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರು ಪಾಕಿಸ್ತಾನ್ ತಂಡವನ್ನು ನಿಂದಿಸಿದ್ದಾರೆ. ಈ ನಿಂದನೆ ಕೇಳುತ್ತಿದ್ದಂತೆ ಕೋಪಗೊಂಡ ಪಾಕ್ ಆಟಗಾರ ಖುಷ್ಷಿಲ್ ಶಾ (Khushdil Shah) ಅಭಿಮಾನಿಯನ್ನು ಹೊಡೆಯಲು ಗ್ಯಾಲರಿಯತ್ತ ನುಗ್ಗಿದ್ದಾರೆ. ಅಲ್ಲದೆ ಫ್ಯಾನ್ಸ್ ಜೊತೆಗೆ ಹೊಡೆದಾಟಕ್ಕೆ ಇಳಿದಿದ್ದಾರೆ ಎಂದು ವರದಿಯಾಗಿದೆ. ಇದೀಗ ಈ ಘಟನೆಯ ಹಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ನಡೆದಿದ್ದೇನು?
ನ್ಯೂಝಿಲೆಂಡ್ ವಿರುದ್ಧದ ಮೂರನೇ ಪಂದ್ಯದ ಮುಕ್ತಾಯದ ಬಳಿಕ ಪಾಕಿಸ್ತಾನ್ ಆಟಗಾರರು ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಕೆಲ ಅಭಿಮಾನಿಗಳು ಪಾಕ್ ಆಟಗಾರರನ್ನು ನಿಂದಿಸುತ್ತಾ ಕೆಣಕಿದ್ದಾರೆ. ಇದರಿಂದ ಕುಪಿತಗೊಂಡ ಖುಷ್ದಿಲ್ ಶಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಈ ವಾಗ್ವಾದ ತಾರಕ್ಕೇರುತ್ತಿದ್ದಂತೆ ಪಾಕ್ ಆಟಗಾರ ಬೌಂಡರಿ ರೇಲಿಂಗ್ ಹಾರಿ ಗ್ಯಾಲರಿಯತ್ತ ನುಗ್ಗಿದ್ದಾರೆ. ಈ ವೇಳೆ ಅವರನ್ನು ಭದ್ರತಾ ಸಿಬ್ಬಂದಿಗಳು ತಡೆಯಲು ಪಯತ್ನಿಸುತ್ತಿರುವುದು ಫೋಟೋದಲ್ಲಿ ಕಾಣಬಹುದು. ಇದೀಗ ಈ ಘಟನೆಯ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖುಷ್ದಿಲ್ ಶಾ ಜಗಳದ ಸನ್ನಿವೇಶದ ವಿಡಿಯೋ:
ಪಾಕಿಸ್ತಾನ್ ವೈಟ್ ವಾಶ್:
ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಸೋತಿದ್ದ ಪಾಕಿಸ್ತಾನ್ ತಂಡವು ಏಕದಿನ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿದೆ. ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 73 ರನ್ಗಳ ಜಯ ಸಾಧಿಸಿತ್ತು.
ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕ್ ಪಡೆ 84 ರನ್ಗಳಿಂದ ಪರಾಜಯಗೊಂಡಿತ್ತು. ಹಾಗೆಯೇ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 264 ರನ್ ಕಲೆಹಾಕಿದರೆ, ಪಾಕಿಸ್ತಾನ್ ತಂಡ 40 ಓವರ್ಗಳಲ್ಲಿ 221 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಮೂರನೇ ಪಂದ್ಯದಲ್ಲಿ ನ್ಯೂಝಿಲೆಂಡ್ 43 ರನ್ಗಳ ಜಯ ಸಾಧಿಸಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಇಮಾಮ್-ಉಲ್-ಹಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಫಹೀಮ್ ಅಶ್ರಫ್ , ಮೊಹಮ್ಮದ್ ವಾಸಿಮ್ ಜೂನಿಯರ್ , ನಸೀಮ್ ಶಾ , ಸುಫಿಯಾನ್ ಮುಖೀಮ್ , ಅಕಿಫ್ ಜಾವೇದ್.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ
ನ್ಯೂಝಿಲೆಂಡ್ ಪ್ಲೇಯಿಂಗ್ 11: ರೈಸ್ ಮಾರಿಯು , ನಿಕ್ ಕೆಲ್ಲಿ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಿಮ್ ಸೀಫರ್ಟ್ , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಮುಹಮ್ಮದ್ ಅಬ್ಬಾಸ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಓರೋಕ್.