Rajat Patidar: ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಇವರೇ..!
IPL 2026 RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡ 18.5 ಓವರ್‌ಗಳಲ್ಲಿ 206 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಆರ್‌ಸಿಬಿ 18.5 ಓವರ್‌ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಸಂಘಟಿತ ಪ್ರದರ್ಶನ ಮತ್ತು ವಿಶೇಷವಾಗಿ ಬೌಲರ್‌ಗಳ ಸಮಯೋಚಿತ ಲಯದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಬೌಲರ್‌ಗಳ ಭರ್ಜರಿ ಪ್ರದರ್ಶನದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, “ಭುವನೇಶ್ವರ್ ಕುಮಾರ್ ಮತ್ತು ಹೇಝಲ್ವುಡ್ ಪಂದ್ಯದ ಆರಂಭದಲ್ಲಿ ಹಾಕಿದ ಲೈನ್ ಮತ್ತು ಲೆಂತ್ ಅದ್ಭುತವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಸುಯಶ್ ಶರ್ಮಾ ರನ್ ವೇಗಕ್ಕೆ ಬ್ರೇಕ್ ಹಾಕಿದರು.
ಅದರಲ್ಲೂ ಮುಖ್ಯವಾಗಿ ಡೆತ್ ಓವರ್‌ಗಳಲ್ಲಿ ರಾಸಿಖ್ ಸಲಾಮ್, ಭುವಿ ಮತ್ತು ಹೇಝಲ್ವುಡ್ ನಿಖರವಾದ ಯಾರ್ಕರ್ ಎಸೆಯುವ ಮೂಲಕ ಎದುರಾಳಿಗಳನ್ನು 200-205 ರನ್ ಆಸುಪಾಸಿನಲ್ಲಿ ಕಟ್ಟಿಹಾಕಿದರು. ಇದುವೇ ಪಂದ್ಯದ ಟರ್ನಿಂಗ್ ಪಾಯಿಂಟ್. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ವೇಗಿಗಳಿಗೆ ಸಲ್ಲಬೇಕು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಈ ಭರ್ಜರಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಪಾಟಿದಾರ್, ಜೇಕಬ್ ಬೆಥೆಲ್ ಮತ್ತು ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದರು. ಆ ನಂತರ ದೇವದತ್ ಪಡಿಕ್ಕಲ್ ಅವರ ಆಟ ಅದ್ಭುತವಾಗಿತ್ತು. ಅವರ ಕ್ವಿಕ್‌ಫೈರ್ ಬ್ಯಾಟಿಂಗ್ ತಂಡಕ್ಕೆ ಅಗತ್ಯವಿತ್ತು. ಇಲ್ಲಿ ಕೊಹ್ಲಿ ಹಾಗೂ ಪಡಿಕ್ಕಲ್ ಪ್ರಚಂಡ ಬ್ಯಾಟಿಂಗ್ ಚೇಸಿಂಗ್ ಅನ್ನು ಸುಲಭವನ್ನಾಗಿಸಿತು ಎಂದು ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ಗೆಲುವಿನ ಹೊರತಾಗಿಯೂ ತಂಡದ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕಿದೆ. ಮಧ್ಯಮ ಓವರ್‌ಗಳಲ್ಲಿ ನಾವು ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡೆವು. ಇದು ಈ ಪಂದ್ಯದ ಪ್ರಮುಖ ಕಲಿಕೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನಾವು ಕೆಲಸ ಮಾಡಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲಿರುವುದನ್ನು ಹೊರತುಪಡಿಸಿದರೆ, ನಮ್ಮ ತಂಡವು ಇಂದು ಸಹ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಮ್ಯಾಚ್ಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇದನ್ನೂ ಓದಿ: IPL 2026: ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!
ಅಂದಹಾಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇನ್ನು ದ್ವಿತೀಯಾರ್ಧದಲ್ಲಿ ಆರ್‌ಸಿಬಿ ತಂಡ ಮೂರು ಗೆಲುವು ದಾಖಲಿಸಿದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ.




