ಅಪ್ಪ ಗ್ಯಾಸ್ ಸರಬರಾಜು ಮಾಡುತ್ತಿದ್ದ ಏರಿಯಾದಲ್ಲೇ ಐಷರಾಮಿ ಮನೆ ಖರೀದಿಸಿದ ರಿಂಕು ಸಿಂಗ್
Rinku Singh's New Luxurious Home: ಟೀಂ ಇಂಡಿಯಾದ ಯುವ ಕ್ರಿಕೆಟ್ ತಾರೆ ರಿಂಕು ಸಿಂಗ್ ಅವರು ಅಲಿಗಢದ ಓಝೋನ್ ಸಿಟಿಯಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಗೋಲ್ಡನ್ ಎಸ್ಟೇಟ್‌ನಲ್ಲಿರುವ 500 ಚದರ ಅಡಿ ವಿಸ್ತೀರ್ಣದ ಈ ಮನೆಯು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗೃಹಪ್ರವೇಶ ನೆರವೇರಿಸಿದ ರಿಂಕು, ತಮ್ಮ ಕುಟುಂಬದೊಂದಿಗೆ ಹೊಸ ಮನೆಯಲ್ಲಿ ನೆಲೆಸಿದ್ದಾರೆ. ಮನೆಯ ಬೆಲೆ 4 ರಿಂದ 7 ಕೋಟಿ ರೂಪಾಯಿಗಳ ನಡುವೆ ಇರಬಹುದು ಎಂದು ವರದಿಯಾಗಿದೆ.
ಟೀಂ ಇಂಡಿಯಾದ ಯುವ ಕ್ರಿಕೆಟಿಗ, ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್ ಅವರು ಅಲಿಗಢದ ಓಝೋನ್ ಸಿಟಿಯಲ್ಲಿರುವ ಗೋಲ್ಡನ್ ಎಸ್ಟೇಟ್‌ನಲ್ಲಿ ಹೊಸ ಐಷರಾಮಿ ಮನೆಯನ್ನು ಖರೀದಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋರಡುವ ಮೊದಲು, ರಿಂಕು ಸಿಂಗ್ ತಮ್ಮ ಕುಟುಂಬದೊಂದಿಗೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ರಿಂಕು ಸಿಂಗ್ ಖರೀದಿಸಿರುವ ಹೊಸ ಮನೆಯ ವಿಸ್ತೀರ್ಣ 500 ಚದರ ಅಡಿಯಷ್ಟಿದೆ ಎಂದು ವರದಿಯಾಗಿದೆ. ಇಂದು ನಡೆದ ಗೃಹ ಪ್ರವೇಶ ಸಮಾರಂಭದಲ್ಲಿ ಓಝೋನ್ ಸಿಟಿ ಅಧ್ಯಕ್ಷ ಪ್ರವೀಣ್ ಮಂಗಳಾ ಅವರು ರಿಂಕು ಅವರ ಹೊಸ ಮನೆಯ ಕೀಯನ್ನು ರಿಂಕು ಸಿಂಗ್, ತಂದೆ ಖಾಂಚಂದ್ ಮತ್ತು ಅವರ ತಾಯಿ ಬೀನಾ ದೇವಿ ಅವರಿಗೆ ಹಸ್ತಾಂತರಿಸಿದರು. ಇದಾದ ಬಳಿಕ ಪೂಜೆ ಸಲ್ಲಿಸಿ ಸಂಜೆ ರಿಬ್ಬನ್ ಕಟ್ ಮಾಡಿ ರಿಂಕು ಸಿಂಗ್ ತಮ್ಮ ಕುಟುಂಬ ಸಮೇತ ಹೊಸ ಮನೆಗೆ ಕಾಲಿರಿಸಿದರು.
ಏನೆಲ್ಲ ಸವಲತ್ತುಗಳಿವೆ?
ಓಝೋನ್ ಸಿಟಿಯಲ್ಲಿರುವ ಗೋಲ್ಡನ್ ಎಸ್ಟೇಟ್ ಅನ್ನು ಅಲಿಘರ್‌ನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸೊಸೈಟಿಗಳಲ್ಲಿ ಒಂದಾಗಿದೆ. ಇಲ್ಲಿ ಕೇವಲ 40 ಮನೆಗಳಿದ್ದು, ಚಿಕಾಗೋ, ಲಂಡನ್ ಮತ್ತು ಸಿಂಗಾಪುರದಂತಹ ದೇಶಗಳ ಐಷಾರಾಮಿ ಜೀವನಶೈಲಿಯಿಂದ ಪ್ರೇರಿತವಾಗಿ ಈ ಸೊಸೈಟಿಯನ್ನು ವಿನ್ಯಾಸಗೊಳಿಸಲಾಗಿದೆ. ಇಡೀ ಎಸ್ಟೇಟ್ 7 ಸ್ತರದ ಭದ್ರತೆಯನ್ನು ಹೊಂದಿದೆ.
ಇದಲ್ಲದೇ ಬ್ಯಾಡ್ಮಿಂಟನ್ ಅಂಕಣ, ಸ್ಕ್ವಾಷ್ ಅಂಕಣ, ಬಾಸ್ಕೆಟ್ ಬಾಲ್ ಅಂಕಣ ಸೇರಿದಂತೆ ಹಲವು ಸೌಲಭ್ಯಗಳ ಜೊತೆಗೆ 24 ಗಂಟೆಯೂ ಗಾಲ್ಫ್ ಆಡುವ ಸೌಲಭ್ಯ ಈ ಸೊಸೈಟಿಯಲ್ಲಿದೆ. ಇನ್ನು ರಿಂಕು ಸಿಂಗ್ ಖರೀದಿಸಿರುವ ಐಷಾರಾಮಿ ಮನೆಯಲ್ಲಿ ಐಷಾರಾಮಿ ಮಲಗುವ ಕೋಣೆ, ಸ್ಟೋರ್ ರೂಂ, ಪ್ಯಾಂಟ್ರಿ, ಅಡುಗೆಮನೆ, ಡೈನಿಂಗ್, ಡ್ರಾಯಿಂಗ್ ಮತ್ತು ಲಿವಿಂಗ್ ರೂಮ್ ಜೊತೆಗೆ ಲಾಂಜ್ ಇದೆ. ಇದಲ್ಲದೇ ಖಾಸಗಿ ಕೊಳ, ತಾರಸಿ, ಆಂಫಿಥಿಯೇಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
रिंकू सिंह का ओजोन वैली अलीगढ़ में नया मकान 🪔 रिंकू सिंह जिनके पिता ओजोन वैली में गैस सिलेंडर सप्लाई करते थे । आज वही ओजोन वैली में 3.50 करोड़ का मकान खरीदा है। हाल ही में KKR ने रिंकू सिंह को 13 करोड़ में रिटेन किया है।#rinkusingh #KKR pic.twitter.com/gp0JswToV2
— 𝐏𝐚𝐫𝐯𝐞𝐬𝐡 𝐜𝐡𝐚𝐮𝐝𝐡𝐚𝐫𝐲🇮🇳 (@MeRanaParvesh) November 3, 2024
ಮನೆಯ ಬೆಲೆ ಎಷ್ಟು?
ವಾಸ್ತವವಾಗಿ ರಿಂಕು ಸಿಂಗ್ ಟೀಂ ಇಂಡಿಯಾದೊಂದಿಗೆ ಟಿ20 ಸರಣಿಗಾಗಿ ಇಷ್ಟರಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದೆ. ಆದರೆ ಅದಕ್ಕೂ ಮುನ್ನ ಮನೆ ಖರೀದಿಯ ವ್ಯವಹಾರ ಮುಗಿಸಿರುವ ರಿಂಕು, ತಹಸಿಲ್ ನೋಂದಣಿ ಕಚೇರಿಗೆ ತೆರಳಿ ಮನೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಮನೆಯ ನಿಖರ ಬೆಲೆ ಹೇಳುವುದು ಕಷ್ಟ. ಆದರೆ ಮಾಧ್ಯಮ ವರದಿಗಳ ಪ್ರಕಾರ ರಿಂಕು ಈ ಮನೆಯನ್ನು 4 ರಿಂದ 7 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಿಂಕು ಅವರ ತಂದೆ ಒಂದು ಕಾಲದಲ್ಲಿ ಇದೇ ಓಝೋನ್ ಸಿಟಿಯಲ್ಲಿ ಗ್ಯಾಸ್ ಪೂರೈಕೆದಾರರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಆ ಸಿಟಿಯಲ್ಲೇ ಮಗ ಮನೆಯನ್ನು ಖರೀದಿಸಿದ್ದಾನೆ ಎಂದು ಅನೇಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
13 ಕೋಟಿಗೆ ರಿಂಕು ರಿಟೈನ್
ರಿಂಕು ಸಿಂಗ್ 2017 ರಿಂದ ಐಪಿಎಲ್‌ನ ಭಾಗವಾಗಿದ್ದಾರೆ. ಮೊದಲ ಬಾರಿಗೆ ಪಂಜಾಬ್ ಫ್ರಾಂಚೈಸಿ ಅವರನ್ನು 10 ಲಕ್ಷಕ್ಕೆ ಖರೀದಿಸಿತ್ತು. ಇದರ ನಂತರ, 2018 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 80 ಲಕ್ಷ ಪಾವತಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆ ಬಳಿಕ 2019 ರಿಂದ 2021 ರವರೆಗೆ ಅದೇ ಬೆಲೆಯಲ್ಲಿ ರಿಂಕು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ 2022 ರಲ್ಲಿ ಅವರ ವೇತನವನ್ನು 55 ಲಕ್ಷಕ್ಕೆ ಇಳಿಸಲಾಯಿತು. ಇದರ ಹೊರತಾಗಿಯೂ ಅವರು ಬೇರೆ ತಂಡಕ್ಕೆ ಹೋಗಲಿಲ್ಲ. ಆದರೆ 2023ರಲ್ಲಿ ಸತತ 5 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಕ್ರಿಕೆಟ್ ಲೋಕದ ಮನೆ ಮಾತಾದರು. ಇದಾದ ಬಳಿಕವಷ್ಟೇ ಅವರು ಟೀಂ ಇಂಡಿಯಾಕ್ಕೂ ಆಯ್ಕೆಯಾದರು. ಭಾರತ ತಂಡಕ್ಕೆ ಬಂದ ನಂತರವೂ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ಕೆಕೆಆರ್ ಮತ್ತೊಮ್ಮೆ ಅವರನ್ನು 13 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Wed, 6 November 24