AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್

Rohit Sharma Century at Lord's: ಇಂಗ್ಲೆಂಡ್ ವಿರುದ್ಧದ ಸರಣಿ ನಿರ್ಧಾರಕ ಪಂದ್ಯದಲ್ಲಿ ರೋಹಿತ್ ಶರ್ಮಾ ಲಾರ್ಡ್ಸ್‌ನಲ್ಲಿ ಐತಿಹಾಸಿಕ ಶತಕ ಬಾರಿಸಿ ಮಿಂಚಿದ್ದಾರೆ. ಇದು ಲಾರ್ಡ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಬಾರಿಸಿದ ಮೊದಲ ಏಕದಿನ ಶತಕವಾಗಿದ್ದು, 47 ವರ್ಷಗಳ ಬರವನ್ನು ನೀಗಿಸಿದೆ. ಈ ಮೂಲಕ ರೋಹಿತ್ ತಮ್ಮ ಫಾರ್ಮ್‌ಗೆ ಬಂದ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ, ತಂಡಕ್ಕೆ ಅದ್ಭುತ ಆರಂಭ ಒದಗಿಸಿದ್ದಾರೆ.

IND vs ENG: ಲಾರ್ಡ್ಸ್‌ನಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ರೋಹಿತ್
Rohit Sharma
ಪೃಥ್ವಿಶಂಕರ
|

Updated on:Jul 19, 2026 | 10:47 PM

Share

ಸರಣಿ ನಿರ್ಧಾರಕ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿರುವ 387 ರನ್​ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕರಿಬ್ಬರು ಅದ್ಭುತ ಆರಂಭವನ್ನು ಒದಗಿಸಿಕೊಟ್ಟರು. ಕಳೆದೆರಡು ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ( Rohit Sharma) ಈ ಪಂದ್ಯದಲ್ಲಿ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಲಾರ್ಡ್ಸ್‌ (Lord’s) ಅಂಗಳದಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದ 47 ವರ್ಷಗಳ ಶತಕದ ಬರವನ್ನು ನೀಗಿಸಿದ್ದಾರೆ. ಇದರ ಜೊತೆಗೆ ತನ್ನ ಫಾರ್ಮ್​ಗೆ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದವರಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.

147 ರನ್‌ಗಳ ಪಾಲುದಾರಿಕೆ

50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಸತತ ಎರಡು ಬೌಂಡರಿಗಳನ್ನು ಬಾರಿಸಿ ತಮ್ಮ ಅರ್ಧಶತಕವನ್ನು ಆಚರಿಸಿದರು. ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 6 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಅರ್ಧಶತಕದ ಬಳಿಕ ಗೇರ್ ಬದಲಿಸಿದ ರೋಹಿತ್, ಶುಭ್​ಮನ್ ಗಿಲ್ ಅವರೊಂದಿಗೆ 147 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ನಾಯಕ ಗಿಲ್ 77 ರನ್ ಗಳಿಸಿ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಅದರ ನಂತರವೂ ಬಿರುಗಾಳಿಯ ಬ್ಯಾಟಿಂಗ್‌ ಮುಂದುವರೆಸಿದ ರೋಹಿತ್ ಲಾರ್ಡ್ಸ್‌ನಲ್ಲಿ ಐತಿಹಾಸಿಕ ಶತಕ ಬಾರಿಸಿದರು.

ಏಕದಿನ ವೃತ್ತಿಜೀವನದ 34ನೇ ಶತಕ

ರೋಹಿತ್ ಶರ್ಮಾ ಕೇವಲ 84 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ ತಮ್ಮ ಏಕದಿನ ವೃತ್ತಿಜೀವನದ 34ನೇ ಶತಕವನ್ನು ಪೂರೈಸಿದರು. 120.24 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ ತಮ್ಮ ಸ್ಟ್ರೈಕ್ ರೇಟ್​ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ತಕ್ಕ ತಿರುಗೇಟು ನೀಡಿದರು. ಬೌಂಡರಿಯೊಂದಿಗೆ ಶತಕ ಪೂರೈಸಿದ ರೋಹಿತ್ ಶರ್ಮಾ ಲಾರ್ಡ್ಸ್‌ನಲ್ಲಿ ಏಕದಿನ ಪಂದ್ಯಗಳಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರು 39 ವರ್ಷ ಮತ್ತು 80 ದಿನಗಳಲ್ಲಿ ಈ ಸಾಧನೆ ಮಾಡಿದರು.

ದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕ

ಹಾಗೆಯೇ ಇಂಗ್ಲೆಂಡ್‌ನಲ್ಲಿ ರೋಹಿತ್ ತಮ್ಮ 8ನೇ ಏಕದಿನ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್, ಸಯೀದ್ ಅನ್ವರ್, ಎಬಿ ಡಿವಿಲಿಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ದಾಖಲೆಗಳನ್ನು ಮುರಿದರು. ವಿದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಈಗ ಅಗ್ರಸ್ಥಾನದಲ್ಲಿದ್ದಾರೆ. ಈ ಹಿಂದೆ, ಸಚಿನ್, ಅನ್ವರ್, ಎಬಿ ಮತ್ತು ಡಿ ಕಾಕ್ ವಿದೇಶಿ ನೆಲದಲ್ಲಿ ತಲಾ 7 ಶತಕಗಳನ್ನು ಬಾರಿಸಿದ್ದರು.

IND vs ENG: ಲಾರ್ಡ್ಸ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ರೋಹಿತ್, ಕೊಹ್ಲಿ

ರೋಹಿತ್​ಗೆ ಇದು 10 ನೇ ಶತಕ

ಇಂಗ್ಲಿಷ್ ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ ರೋಹಿತ್​ಗೆ ಇದು 10 ನೇ ಶತಕವಾಗಿದೆ. ಈ ಮೂಲಕ ರೋಹಿತ್, ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ದಾಖಲೆಯನ್ನು ಮುರಿದರು. ವಿವ್ ಇಂಗ್ಲೆಂಡ್‌ನಲ್ಲಿ ಒಟ್ಟು 9 ಶತಕಗಳನ್ನು ಬಾರಿಸಿದ್ದರು. ಇನ್ನು ಡಾನ್ ಬ್ರಾಡ್ಮನ್ 11 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗಾರ್ಡನ್ ಗ್ರೀನಿಡ್ಜ್, ಸ್ಟೀವ್ ವಾ, ರಾಹುಲ್ ದ್ರಾವಿಡ್ ಮತ್ತು ಸ್ಟೀವ್ ಸ್ಮಿತ್ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Sun, 19 July 26

Follow Us