ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಭಾರತಕ್ಕೆ ಮುಖಭಂಗ! ಒಂದೂ ಪಂದ್ಯ ಗೆಲ್ಲದೆ ಟೂರ್ನಿಯಿಂದ ಔಟ್
2026ರ ಹಾಂಗ್ ಕಾಂಗ್ ಸೂಪರ್ ಸಿಕ್ಸಸ್‌ನಲ್ಲಿ ಭಾರತ ತಂಡ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿದೆ. ಕೃನಾಲ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಗುಂಪು ಹಂತದ ಎರಡೂ ಪಂದ್ಯಗಳಲ್ಲಿ ಸೋತು, ಒಂದೇ ಒಂದು ಗೆಲುವು ದಾಖಲಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಯುಎಇ ತಂಡ ಭಾರತ ಮತ್ತು ಪಾಕಿಸ್ತಾನವನ್ನು ಸೋಲಿಸಿ ಗ್ರೂಪ್ ಸಿ ಅಗ್ರಸ್ಥಾನ ಗಳಿಸಿತು. ಭಾರತ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

2026ರ ಹಾಂಗ್ ಕಾಂಗ್ ಸೂಪರ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. ಗುಂಪು ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ, ಒಂದೇ ಒಂದು ಗೆಲುವು ದಾಖಲಿಸದೆ ಟೂರ್ನಿಯಿಂದ ಹೊರಬಿದ್ದಿದೆ. 12 ತಂಡಗಳು ಭಾಗವಹಿಸಿರುವ ಈ ಟೂರ್ನಿಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಭಾರತ ತಂಡ ಪಾಕಿಸ್ತಾನ ಮತ್ತು ಯುಎಇ ಜೊತೆ ಗ್ರೂಪ್ ಸಿ ಯಲ್ಲಿ ಸ್ಥಾನ ಪಡೆದಿತ್ತು. ಆದರೆ, ಈ ಗುಂಪಿನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ ಯುಎಇ ತಂಡ ಎರಡೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದುಕೊಂಡಿದೆ. ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ.
ಭಾರತಕ್ಕೆ 6 ವಿಕೆಟ್‌ಗಳ ಸೋಲುಣಿಸಿದ ಯುಎಇ
2026ರ ಹಾಂಗ್ ಕಾಂಗ್ ಸೂಪರ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಎರಡನೇ ಪಂದ್ಯವನ್ನು ಅಕ್ಟೋಬರ್ 31ರಂದು ಯುಎಇ ವಿರುದ್ಧ ಆಡಿತು. ಮುಂದಿನ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಭಾರತ ದೊಡ್ಡ ಅಂತರದ ಗೆಲುವು ದಾಖಲಿಸುವ ಅಗತ್ಯವಿತ್ತು. ಆದರೆ, ಕೃನಾಲ್ ಪಾಂಡ್ಯ ನಾಯಕತ್ವದ ಭಾರತ ತಂಡ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 6 ಓವರ್‌ಗಳಲ್ಲಿ 94 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡ ಕೇವಲ 4.2 ಓವರ್‌ಗಳಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಪಂದ್ಯ ಮುಗಿಯಲು ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಭಾರತಕ್ಕೆ ಸೋಲಿನ ಆಘಾತ ನೀಡಿತು.
ನಟರಾಜನ್ ಅಬ್ಬರದಿಂದ 94 ರನ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ನಿತೀಶ್ ರಾಣಾ, ರಾಹುಲ್ ತೆವಾಟಿಯಾ ಮತ್ತು ಶಶಾಂಕ್ ಸಿಂಗ್ ಎರಡಂಕಿ ಮೊತ್ತ ದಾಖಲಿಸುವಲ್ಲಿಯೂ ವಿಫಲರಾದರು. ಆದರೆ, ರಾಹುಲ್ ತ್ರಿಪಾಠಿ ಕೇವಲ 7 ಎಸೆತಗಳಲ್ಲಿ 24 ರನ್ ಸಿಡಿಸಿದರೆ, ನಾಯಕ ಕೃನಾಲ್ ಪಾಂಡ್ಯ 8 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದರು. ಇನ್ನು ಬೌಲರ್ ಟಿ. ನಟರಾಜನ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ನಟರಾಜನ್ ಬರೋಬ್ಬರಿ 38 ರನ್ ಸಿಡಿಸಿದರು. ಅವರ ಈ ಸ್ಫೋಟಕ ಆಟದ ನೆರವಿನಿಂದ ಭಾರತ 6 ಓವರ್‌ಗಳಲ್ಲಿ 94 ರನ್ ಗಳಿಸಲು ಸಾಧ್ಯವಾಯಿತು.
ಕೇವಲ 4.2 ಓವರ್‌ಗಳಲ್ಲಿ ಗೆದ್ದ ಯುಎಇ
ಭಾರತ ನೀಡಿದ 95 ರನ್‌ಗಳ ಗುರಿ ಬೆನ್ನಟ್ಟಿದ ಯುಎಇ ತಂಡದ ಆರಂಭಿಕರು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಖಾಲಿದ್ ಶಾ ಮತ್ತು ಅನ್ಶಾನ್ ಟಂಡನ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ಯಾವುದೇ ಅವಕಾಶ ನೀಡಲಿಲ್ಲ. ಯುಎಇ ತಂಡ ಕೇವಲ 4.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 97 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸಿತು. ಯುಎಇ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಭಾರತ ಎರಡೂ ಪಂದ್ಯಗಳಲ್ಲೂ ಸೋಲು ಕಂಡಿತು.’
ಇದುವೇ ನನ್ನ ಏಕೈಕ ಗುರಿ: ಮನದಿಂಗಿತ ಬಿಟ್ಟಿಟ್ಟ ಕೃನಾಲ್ ಪಾಂಡ್ಯ
ಭಾರತ, ಪಾಕಿಸ್ತಾನವನ್ನು ಹಿಂದಿಕ್ಕಿದ ಯುಎಇ
ಗ್ರೂಪ್ ಸಿ ಯಲ್ಲಿ ಯುಎಇ ತಂಡ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಸೋಲಿಸಿ ಅಗ್ರಸ್ಥಾನ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಪಾಕಿಸ್ತಾನ 6 ವಿಕೆಟ್‌ಗಳಿಂದ ಸೋಲು ಕಂಡಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ತಂಡ ಭಾರತವನ್ನು 4 ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಯುಎಇ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ಒಂದು ಗೆಲುವು ಮತ್ತು ಒಂದು ಸೋಲು ದಾಖಲಿಸಿದ ಪಾಕಿಸ್ತಾನ ಎರಡನೇ ಸ್ಥಾನ ಪಡೆದರೆ, ಎರಡೂ ಪಂದ್ಯಗಳಲ್ಲಿ ಸೋತ ಭಾರತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಟೂರ್ನಿಯಿಂದ ಹೊರಬಿದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Sat, 31 October 26




