ಟೀಮ್ ಇಂಡಿಯಾದ ಹೊಸ ಆಶಾಕಿರಣ: ಯಾರು ಈ ಮಾನವ್ ಸುತಾರ್?
India vs Afghanistan Test: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ಶುರುವಾಗಿದೆ. ಮುಲ್ಲನ್ಪುರ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಮಾನವ್ ಸುತಾರ್ ಪಾದಾರ್ಪಣೆ ಮಾಡಿದ್ದಾರೆ.

ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮತ್ತೊಬ್ಬ ಆಟಗಾರನ ಎಂಟ್ರಿಯಾಗಿದೆ. ಈ ಬಾರಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಆಟಗಾರನ ಹೆಸರು ಮಾನವ್ ಸುತಾರ್ (Manav Suthar). ವಯಸ್ಸು ಕೇವಲ 23. ಇತ್ತ ಟೀಮ್ ಇಂಡಿಯಾದಲ್ಲಿ ಯುವ ಆಟಗಾರನ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆ ಯಾರು ಈ ಮಾನವ್ ಸುತಾರ್ ಎಂಬ ಹುಡುಕಾಟ ಕೂಡ ಶುರುವಾಗಿದೆ. ಅಷ್ಟಕ್ಕೂ ಯಾರು ಈ ಸುತಾರ್?
ಮಾನವ್ ಸುತಾರ್, ರಾಜಸ್ಥಾನದ ಶ್ರೀ ಗಂಗಾನಗರದ ನಿವಾಸಿ. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸುತಾರ್, ಸ್ಥಳೀಯ ಕ್ರಿಕೆಟ್‌ನಲ್ಲಿ ಭಾರೀ ಹೆಸರು ಮಾಡಿದ್ದರು. ಅದರಲ್ಲೂ ಬಾಲ್ಯದಿಂದಲೇ ‘ಸ್ಪಾಟ್ ಬೌಲಿಂಗ್’ (ಒಂದೇ ಜಾಗಕ್ಕೆ ಚೆಂಡು ಹಾಕುವುದು) ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಈ ಗಮನ ಸೆಳೆಯುವಿಕೆಯೊಂದಿಗೆ 2022 ರಲ್ಲಿ ರಾಜಸ್ಥಾನ್ ರಣಜಿ ತಂಡದಲ್ಲಿ ಸ್ಥಾನ ಪಡೆದ ಮಾನವ್ ಸುತಾರ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ಇದೀಗ ಭಾರತದ ಭರವಸೆಯ ಯುವ ಸ್ಪಿನ್ ಆಲ್‌ರೌಂಡರ್ ಆಗಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಎಂಟ್ರಿ ಕೊಡುವ ಮುನ್ನ ಸುತಾರ್ ಸಾಧಿಸಿದ ಸಾಧನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
- ರಣಜಿ ಟ್ರೋಫಿ ದಾಖಲೆ: 2022-23ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಕೇವಲ 6 ಪಂದ್ಯಗಳಿಂದ 39 ವಿಕೆಟ್ ಕಬಳಿಸಿ ರಾಜಸ್ಥಾನದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
- ಇಂಡಿಯಾ ‘ಎ’ ಪರ ಸಾಧನೆ: 2023ರ ಎಮರ್ಜಿಂಗ್ ಏಷ್ಯಾ ಕಪ್‌ನಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಸುತಾರ್ ಎರಡನೇ ಗರಿಷ್ಠ ವಿಕೆಟ್ ಟೇಕರ್ (10 ವಿಕೆಟ್) ಆಗಿದ್ದರು. ಇತ್ತೀಚೆಗೆ ಆಸ್ಟ್ರೇಲಿಯಾ ‘ಎ’ ವಿರುದ್ಧದ ಪಂದ್ಯದಲ್ಲಿ 107 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ದರು.
- ಪ್ರಥಮ ದರ್ಜೆ ಕ್ರಿಕೆಟ್: ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ 29 ಪಂದ್ಯಗಳನ್ನಾಡಿರುವ ಮಾನಸ್ ಸುತಾರ್ ಒಟ್ಟು 129 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ | 945 ರನ್‌ಗಳನ್ನು ಕಲೆಹಾಕಿದ್ದಾರೆ.
- ಲಿಸ್ಟ್ ‘ಎ’: 25 ಲಿಸ್ಟ್ ಎ ಪಂದ್ಯಗಳನ್ನಾಡಿರುವ ಸುತಾರ್ ಈವರೆಗೆ ಪಡೆದಿರುವುದು 34 ವಿಕೆಟ್‌ಗಳು. ಹಾಗೆಯೇ ಬ್ಯಾಟ್ ಮೂಲಕ 350 ರನ್‌ಗಳ ಕೊಡುಗೆ ನೀಡಿದ್ದಾರೆ.
ಸುತಾರ್ ಸ್ಪೆಷಲ್ ಏನು?
ಮೊದಲೇ ಹೇಳಿದಂತೆ ಮಾನವ್ ಸುತಾರ್ ಸ್ಪಿನ್ ಆಲ್‌ರೌಂಡರ್. ಈಗಾಲೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರೇ ಸುತಾರ್ ಬೌಲಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ.
ಚೆಂಡಿಗೆ ಅವರು ನೀಡುವ ‘ರೆವಲ್ಯೂಷನ್’ (ತಿರುವು) ಮತ್ತು ಡ್ರಿಫ್ಟ್ ಎದುರಾಳಿ ಬ್ಯಾಟರ್‌ಗಳನ್ನು ಸುಲಭವಾಗಿ ವಂಚಿಸುತ್ತದೆ. ಹೀಗಾಗಿ ಅವರು ಟೀಮ್ ಇಂಡಿಯಾದ ಮುಂದಿನ ಸ್ಪಿನ್ ಅಸ್ತ್ರವಾಗಲಿದ್ದಾರೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
ಇಂದಿನ ಯುವ ಬೌಲರ್‌ಗಳು ಟಿ20 ಶೈಲಿಗೆ ಹೊಂದಿಕೊಂಡು ವೇಗವಾಗಿ ಬೌಲಿಂಗ್ ಮಾಡಲು ಇಷ್ಟಪಟ್ಟರೆ, ಮಾನವ್ ಮಾತ್ರ ಗಂಟೆಗಟ್ಟಲೆ ಒಂದೇ ಜಾಗಕ್ಕೆ ಚೆಂಡು ಹಾಕುವ (ಸ್ಪಾಟ್ ಬೌಲಿಂಗ್) ಹಳೆಯ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.
ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಎಕಾನಮಿ ರೇಟ್ 3 ಕ್ಕಿಂತ ಕಡಿಮೆ ಇದೆ ಎಂದರೆ ಅವರ ನಿಯಂತ್ರಣ ಎಷ್ಟು ಅದ್ಭುತವಾಗಿದೆ ಎಂದು ತಿಳಿಯುತ್ತದೆ.
ಸ್ಪಿನ್ ಆಲ್‌ರೌಂಡರ್ ಆಗಿದ್ದರೂ ಸುತಾರ್, ಕೇವಲ ಕೊನೆಯಲ್ಲಿ ಬಂದು ಬ್ಯಾಟ್ ಬೀಸುವ ಆಟಗಾರನಲ್ಲ. ತಂಡ ಸಂಕಷ್ಟದಲ್ಲಿದ್ದಾಗ ಮಾಗಿದ ಬ್ಯಾಟರ್‌ನಂತೆ ಆಡಬಲ್ಲರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈಗಾಗಲೇ 120 ರನ್‌ಗಳ ಭರ್ಜರಿ ಶತಕ ಮತ್ತು 6 ಅರ್ಧಶತಕಗಳನ್ನು ಬಾರಿಸಿ ತಮ್ಮ ಬ್ಯಾಟಿಂಗ್ ಕ್ಲಾಸ್ ಪ್ರದರ್ಶಿಸಿದ್ದಾರೆ.
ಒಂದೇ ಇನಿಂಗ್ಸ್ನಲ್ಲಿ 8 ವಿಕೆಟ್:
ರಣಜಿ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಕೇವಲ 33 ರನ್ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಅದ್ಭುತ ಪ್ರದರ್ಶನದೊಂದಿಗೆ ಮಾನವ್ ಸುತಾರ್ ಎಲ್ಲರ ಗಮನ ಸೆಳೆದಿದ್ದರು.
ಮಾನವ್ ಅವರ ಈ ಪ್ರತಿಭೆಯನ್ನು ಗುರುತಿಸಿದ ಅಶ್ವಿನ್, ಅವರನ್ನು ಚೆನ್ನೈನಲ್ಲಿರುವ ತಮ್ಮ ಕ್ರಿಕೆಟ್ ಅಕಾಡೆಮಿಗೆ ಕರೆಸಿಕೊಂಡು ವಿಶೇಷ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಕೆಎಲ್ ರಾಹುಲ್ ‘ಅನ್‌ಸೋಲ್ಡ್’ ಆಗಲು ಇದುವೇ ಅಸಲಿ ಕಾರಣ!
ಸದ್ಯ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಅವರ ನಂತರ ಆ ಜಾಗವನ್ನು ತುಂಬಬಲ್ಲ ಅತ್ಯಂತ ಯೋಗ್ಯ ಎಡಗೈ ಸ್ಪಿನ್ ಆಲ್‌ರೌಂಡರ್ ಆಗಿ ಮಾನವ್ ಸುತಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮಾನವ್ ಸುತಾರ್ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
Published On - 9:44 am, Sat, 6 June 26




