AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್ 2026: ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ಟೀಮ್ ಇಂಡಿಯಾ

ಹಾಕಿ ಅಂಗಳದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತದ ಪಾರುಪತ್ಯ ಮುಂದುವರೆದಿದೆ. ಈ ಬಾರಿ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್​ ಫೈನಲ್​ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಪದಕ ಖಚಿತವಾಗಿದೆ. ಅಂದರೆ ಫೈನಲ್​ನಲ್ಲಿ ಗೆದ್ದರೆ ಚಿನ್ನದ ಪದಕ, ಸೋತರೆ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಲಿದ್ದಾರೆ.

ಏಷ್ಯನ್ ಗೇಮ್ಸ್ 2026: ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ಟೀಮ್ ಇಂಡಿಯಾ
Team India Image Credit source: Asian Games
ಝಾಹಿರ್ ಯೂಸುಫ್
|

Updated on:Oct 01, 2026 | 3:07 PM

Share

ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2026 ರ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ಧ 4-3 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಭಾರತ ಫೈನಲ್ ಪ್ರವೇಶಿಸಿದೆ. ಈ ಫೈನಲ್ ಪ್ರವೇಶದೊಂದಿಗೆ ಭಾರತ ತಂಡ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವತ್ತ ಹೆಜ್ಜೆಯನ್ನಿಟ್ಟಿದೆ.

ಜಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಮೊದಲಾರ್ಧದಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆದರೆ, ದ್ವಿತೀಯಾರ್ಧದಲ್ಲಿ ಪಾಕಿಸ್ತಾನ್ ಭರ್ಜರಿ ಕಂಬ್ಯಾಕ್ ಮಾಡಿತು.

ಭಾರತದ ಆರಂಭಿಕ ಮುನ್ನಡೆ:

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ಭರ್ಜರಿ ಆಟ ಪ್ರದರ್ಶಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಬ್ಯಾಕ್ ಟು ಬ್ಯಾಕ್ ಸಿಕ್ಕ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಪರ ಸುಖ್‌ಜೀತ್ ಸಿಂಗ್ ಆಕರ್ಷಕ ಫೀಲ್ಡ್ ಗೋಲ್ ಬಾರಿಸುವ ಮೂಲಕ ಮುನ್ನಡೆಯನ್ನು 3-0 ಕ್ಕೆ ಏರಿಸಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿದರು.

ಪಾಕಿಸ್ತಾನದ ಕಂಬ್ಯಾಕ್:

ಪಂದ್ಯ ಕೈ ತಪ್ಪಿ ಹೋಗುತ್ತಿದೆ ಎನ್ನುವಾಗ ತೀವ್ರ ಹೋರಾಟ ನಡೆಸಿದ ಪಾಕಿಸ್ತಾನ್, ದ್ವಿತೀಯಾರ್ಧದಲ್ಲಿ ಭಾರತದ ರಕ್ಷಣಾ ಕೋಟೆಯನ್ನು ಭೇದಿಸಿತು. ಪಾಕ್ ಪರ ಅಬು ಬಕರ್ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸಿದರು. ಬಳಿಕ ಆಕ್ರಮಣಕಾರಿ ಆಟ ಮುಂದುವರಿಸಿದ ಪಾಕಿಸ್ತಾನ್ ಸತತ ಗೋಲುಗಳನ್ನು ಬಾರಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾದರು.

ಗೆಲುವಿನ ಗೋಲು:

ಅಂತಿಮ ಕ್ವಾರ್ಟರ್‌ನ ಕೊನೆಯ ನಿಮಿಷಗಳು ತೀವ್ರ ರೋಚಕತೆಯಿಂದ ಕೂಡಿದ್ದವು. ತೀವ್ರ ಒತ್ತಡದ ನಡುವೆಯೂ ಅದ್ಭುತವಾಗಿ ಪುಟಿದೆದ್ದ ಭಾರತದ ಪರ ಅಭಿಷೇಕ್ 4ನೇ ಹಾಗೂ ನಿರ್ಣಾಯಕ ಗೋಲು ಬಾರಿಸಿ 4-3 ಅಂತರದ ರೋಚಕ ತಂದು ಕೊಟ್ಟರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ ಹಾಕಿಯಲ್ಲಿ ಫೈನಲ್​ಗೇರಿದೆ.

ಫೈನಲ್ ಎದುರಾಳಿ ಯಾರು?

ಫೈನಲ್ ತಲುಪಿರುವ ಭಾರತ ತಂಡವು ಅಕ್ಟೋಬರ್ 3, 2026 ರಂದು ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಮಲೇಷ್ಯಾ ಮತ್ತು ಸೌತ್ ಕೊರಿಯಾ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಅಂದರೆ ಫೈನಲ್​ಗೇರಿರುವ ಭಾರತ ತಂಡಕ್ಕೆ ಪದಕ ಖಚಿತವಾಗಿದೆ. ಅಂತಿಮ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಚಿನ್ನದ ಪದಕಕ್ಕೆ ಕೊರೊಳೊಡ್ಡಲಿದ್ದಾರೆ. ಒಂದು ವೇಳೆ ಸೋತರೆ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳಲಿದ್ದಾರೆ.

Published On - 3:06 pm, Thu, 1 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More