ಪ್ರಯೋಗಗಳ ಕಾಲ ಮುಗಿಯಿತು: ಸ್ಪಷ್ಟ ಗುರಿ ತಿಳಿಸಿದ ಶುಭ್ಮನ್ ಗಿಲ್
2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಟೀಮ್ ಇಂಡಿಯಾದ ಸಿದ್ಧತೆಗಳು ಈಗ ಹೊಸ ಆಯಾಮವನ್ನು ಪಡೆದುಕೊಂಡಿವೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯು ಭಾರತ ತಂಡಕ್ಕೆ ಹಲವು ಪಾಠಗಳನ್ನು ಕಲಿಸಿದ್ದು, ಮುಂಬರುವ ದಿನಗಳಲ್ಲಿ ತಂಡದ ಕಾರ್ಯತಂತ್ರ ಹೇಗಿರಲಿದೆ ಎಂಬುದಕ್ಕೆ ನಾಯಕ ಶುಭ್ಮನ್ ಗಿಲ್ ಅವರ ಇತ್ತೀಚಿನ ಹೇಳಿಕೆ ಸ್ಪಷ್ಟ ದಿಕ್ಸೂಚಿಯಾಗಿದೆ.

“ಮುಂದಿನ ಸರಣಿಯಿಂದ ಲಭ್ಯವಿರುವ ಎಲ್ಲಾ ಪ್ರಮುಖ ಆಟಗಾರರು ತಂಡಕ್ಕೆ ಮರಳಲಿದ್ದಾರೆ ಎಂದು ಆಶಿಸುತ್ತೇನೆ. ಮುಂಬರುವ ವಿಶ್ವಕಪ್ನಲ್ಲಿ ನಾವು ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ಬಯಸುತ್ತೇವೆಯೋ, ಅದೇ ಕಾಂಬಿನೇಷನ್ನೊಂದಿಗೆ ಇನ್ಮುಂದೆ ಆಡಲು ನಾವು ಉತ್ಸುಕರಾಗಿದ್ದೇವೆ.” ಇದು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ಮುಕ್ತಾಯದ ನಂತರ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಆಡಿದ ಈ ಮಾತುಗಳು.
ಶುಭ್ಮನ್ ಗಿಲ್ ಅವರ ಈ ಮಾತು ಸದ್ಯ ಭಾರತೀಯ ಕ್ರಿಕೆಟ್ ತಂಡದ ಮುಂದಿರುವ ಸ್ಪಷ್ಟ ಗುರಿಯನ್ನು ಸಾರುತ್ತಿವೆ. 2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ತಂಡದಲ್ಲಿ ಇನ್ನು ಮುಂದೆ ಯಾವುದೇ ಅನಗತ್ಯ ಪ್ರಯೋಗಗಳಿಗೆ ಅವಕಾಶವಿಲ್ಲ ಎಂಬ ಬಲವಾದ ಸಂದೇಶವನ್ನು ಗಿಲ್ ರವಾನಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡರೂ, ಕೊನೆಯ ಪಂದ್ಯದಲ್ಲಿ ಎದುರಾದ 5 ವಿಕೆಟ್ಗಳ ಸೋಲು ತಂಡದ ಆಡಳಿತಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಕಾರಣ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಮುಂಚೂಣಿ ಬೌಲರ್ಗಳು ಈ ಸರಣಿಗೆ ಲಭ್ಯವಿರಲಿಲ್ಲ. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಮತ್ತು ಪ್ರಸಿದ್ಧ್ ಕೃಷ್ಣ ಅವರ ಗಾಯದ ಸಮಸ್ಯೆಗಳು ತಂಡವನ್ನು ಮತ್ತಷ್ಟು ಕಾಡಿದವು.
ಅಂತಿಮ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಭರ್ಜರಿ ಶತಕ ಹಾಗೂ ರೋಹಿತ್ ಶರ್ಮಾ ಅವರ 92 ರನ್ಗಳ ನೆರವಿನಿಂದ ಭಾರತ 351 ರನ್ಗಳ ಬೃಹತ್ ಮೊತ್ತ ಪೇರಿಸಿದರೂ, ಅನುಭವವಿಲ್ಲದ ಬೌಲಿಂಗ್ ಪಡೆ ಈ ಮೊತ್ತವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಇಡೀ ಸರಣಿಯಲ್ಲಿ ಭಾರತೀಯ ಆಟಗಾರರು ಬರೋಬ್ಬರಿ ಏಳು ಕ್ಯಾಚ್ಗಳನ್ನು ಕೈಚೆಲ್ಲಿದ್ದು ಮತ್ತು ಡೆತ್ ಓವರ್ಗಳಲ್ಲಿ ದುಬಾರಿಯಾಗಿದ್ದು ನಾಯಕ ಗಿಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಪ್ರಯೋಗ ಮುಗಿಯಿತು!
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶುಭ್ಮನ್ ಗಿಲ್, ಅನ್ಶುಲ್ ಕಂಬೋಜ್ ಮತ್ತು ಆಖಿಬ್ ನಬಿಯಂತಹ ಯುವ ಆಟಗಾರರಿಗೆ ವೆಸ್ಟ್ ಇಂಡೀಸ್ ಸರಣಿ ಉತ್ತಮ ವೇದಿಕೆಯಾಯಿತು ನಿಜ. ಆದರೆ, ವಿಶ್ವಕಪ್ನಂತಹ ಮಹತ್ವದ ಟೂರ್ನಿಗೆ ಸಿದ್ಧರಾಗಲು ಇನ್ನು ನಮಗೆ ಪ್ರಮುಖ ಆಟಗಾರರ ಅಗತ್ಯವಿದೆ ಎಂಬುದನ್ನು ಟೀಮ್ ಇಂಡಿಯಾ ನಾಯಕ ಒಪ್ಪಿಕೊಂಡಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಹಿರಿಯ ಆಟಗಾರರು ಫಾರ್ಮ್ನಲ್ಲಿದ್ದರೂ, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ತಕ್ಷಣದ ಸುಧಾರಣೆಯಾಗಬೇಕಿದೆ. ಹೀಗಾಗಿ ಇನ್ಮುಂದೆ ಯಾವುದೇ ಪ್ರಯೋಗ ಇರುವುದಿಲ್ಲ. ವಿಶ್ವಕಪ್ ಗಮನದಲ್ಲಿಟ್ಟು ಪ್ರಮುಖ ಆಟಗಾರರೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ ಎಂದು ಶುಭ್ಮನ್ ಗಿಲ್ ತಿಳಿಸಿದ್ದಾರೆ.
ಕಿವೀಸ್ ನಾಡಿನಲ್ಲಿ ಸರಣಿ:
ಭಾರತ ತಂಡದ ಮುಂದಿನ ಪ್ರಮುಖ ಸವಾಲು ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿ. ಈ ಸರಣಿಯ ವೇಳೆಗೆ ಎಲ್ಲಾ ಸ್ಟಾರ್ ಆಟಗಾರರು ತಂಡಕ್ಕೆ ಮರಳಲಿದ್ದು, ವಿಶ್ವಕಪ್ನ ಕೋರ್ ಟೀಮ್ ಎಂದೇ ಪರಿಗಣಿಸಲಾಗುವ ಅಂತಿಮ 11ರ ಬಳಗವೇ ಇಲ್ಲಿಂದ ಸತತವಾಗಿ ಆಡಲಿದೆ.
ವಿಶ್ವಕಪ್ ಟ್ರೋಫಿ ಗೆಲ್ಲುವ ಭಾರತದ ಕನಸು ನನಸಾಗಬೇಕಾದರೆ, ಇನ್ಮುಂದೆ ಪ್ರತಿ ಪಂದ್ಯವೂ ಅತ್ಯಂತ ನಿರ್ಣಾಯಕ. ಗಿಲ್ ನಾಯಕತ್ವದ ಭಾರತ ತಂಡ ಇನ್ನು ಕೇವಲ ಗೆಲುವಿಗಾಗಿ ಮಾತ್ರವಲ್ಲದೆ, ವಿಶ್ವಕಪ್ಗೆ ಬೇಕಾದ ಪರಿಪೂರ್ಣ ಸಂಯೋಜನೆಯನ್ನು ಗಟ್ಟಿಗೊಳಿಸಲು ಮೈದಾನಕ್ಕಿಳಿಯಲಿದೆ.
ಇದನ್ನೂ ಓದಿ: ಕರ್ನಾಟಕ ರಣಜಿ ತಂಡ ಪ್ರಕಟ: ಯುವ ದಾಂಡಿಗನಿಗೆ ನಾಯಕತ್ವ
ಒಟ್ಟಾರೆಯಾಗಿ ಹೇಳುವುದಾದರೆ, ವೆಸ್ಟ್ ಇಂಡೀಸ್ ಸರಣಿಯ ಈ ಅನುಭವವು ಭಾರತ ತಂಡಕ್ಕೆ ಒದಗಿಬಂದ ಸಕಾಲಿಕ ಎಚ್ಚರಿಕೆಯಾಗಿದೆ. ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಸರಣಿ ಸಹಕಾರಿಯಾಗಿದ್ದರೂ, ಜಾಗತಿಕ ಮಟ್ಟದ ಟೂರ್ನಿಯನ್ನು ಗೆಲ್ಲಲು ಪೂರ್ಣ ಪ್ರಮಾಣದ ಮತ್ತು ಅನುಭವಿ ತಂಡದ ಅಗತ್ಯವಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ನಾಯಕ ಶುಭ್ಮನ್ ಗಿಲ್ ಅವರ ಆಲೋಚನೆ ಕೂಡ ಸ್ಪಷ್ಟವಾಗಿದ್ದು, ಇನ್ನು ಮುಂದೆ ಕೇವಲ ಪ್ರಯೋಗಗಳಲ್ಲ, ಬದಲಿಗೆ ಮುಂಬರುವ ವಿಶ್ವಕಪ್ಗಾಗಿ ಅತ್ಯಂತ ಬಲಿಷ್ಠ ಹಾಗೂ ಸ್ಥಿರವಾದ ಆಟಗಾರರ ಸಂಯೋಜನೆಯನ್ನು ಸಿದ್ಧಪಡಿಸುವುದೇ ಟೀಮ್ ಇಂಡಿಯಾದ ಏಕೈಕ ಗುರಿಯಾಗಿದೆ.




