ಸ್ಮಾರ್ಟ್​ಫೋನ್​ ಉತ್ಪಾದನೆಯನ್ನು ಖಾಯಂ ಆಗಿ ನಿಲ್ಲಿಸಿದ ಕಂಪೆನಿ.. ಈ ಮೊಬೈಲ್​ ನಿಮ್ಮ ಬಳಿ ಇದ್ದರೆ ಏನು ಮಾಡಬೇಕು?

ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಉತ್ಪನ್ನಗಳ ಮಾರಾಟವೂ ಅದು ಖಾಲಿಯಾಗುವ ತನಕ ಮುಂದುವರೆಯಲಿದೆ. ಅಲ್ಲದೇ, ಈಗಾಗಲೇ ಎಲ್​ಜಿ ಸ್ಮಾರ್ಟ್​ಫೋನ್​ ಕೊಂಡುಕೊಂಡಿರುವ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ನಿಮ್ಮ ಮೊಬೈಲ್​ ಹಾಳಾದಲ್ಲಿ ಕೆಲ ವರ್ಷಗಳ ತನಕ ಅದನ್ನು ರಿಪೇರಿ ಮಾಡುವುದರಿಂದ ಹಿಡಿದು ಸೂಕ್ತ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದೆ.

  • TV9 Web Team
  • Published On - 15:45 PM, 5 Apr 2021
ಸ್ಮಾರ್ಟ್​ಫೋನ್​ ಉತ್ಪಾದನೆಯನ್ನು ಖಾಯಂ ಆಗಿ ನಿಲ್ಲಿಸಿದ ಕಂಪೆನಿ.. ಈ ಮೊಬೈಲ್​ ನಿಮ್ಮ ಬಳಿ ಇದ್ದರೆ ಏನು ಮಾಡಬೇಕು?
ಎಲ್​ಜಿ ಸ್ಮಾರ್ಟ್​ಫೋನ್​

ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ನೆಲೆಯೂರಿದ್ದ ಸಂಸ್ಥೆಯೊಂದು ಇದೀಗ ಏಕಾಏಕಿ ಸ್ಮಾರ್ಟ್​ ಫೋನ್​ ಉತ್ಪಾದನೆಯಿಂದ ಖಾಯಂ ಆಗಿ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ. ದಕ್ಷಿಣ ಕೊರಿಯಾ ಮೂಲದ ಎಲ್​ಜಿ ಸಂಸ್ಥೆ ಇನ್ನು ಮುಂದೆ ತಾನು ಸ್ಮಾರ್ಟ್​ಫೋನ್​ ಉತ್ಪಾದಿಸುವುದಿಲ್ಲವೆಂದು ಘೋಷಿಸಿದ್ದು, ಆ ಮೂಲಕ ಮೊಬೈಲ್ ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದಾಗಿ ಹೇಳಿಕೊಂಡಿದೆ. ಎಲ್​ಜಿ ಅನೇಕ ಮಾದರಿಯ ಮೊಬೈಲ್​ಗಳನ್ನು ಈಗಾಗಲೇ ಉತ್ಪಾದಿಸುತ್ತಾ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿತ್ತಾದರೂ ಪ್ರಬಲ ಪ್ರತಿಸ್ಪರ್ಧಿಗಳ ಮುಂದೆ ಅದರ ಸ್ಮಾರ್ಟ್​ಫೋನ್​ಗಳು ಮಂಕಾಗಿದ್ದವು. ಹೀಗಾಗಿ ಸತತ ನಷ್ಟವನ್ನು ಅನುಭವಿಸುತ್ತಿರುವ ಸಂಸ್ಥೆ ಇದೀಗ ಸ್ಮಾರ್ಟ್​ಫೋನ್ ಉದ್ಯಮಕ್ಕೆ ಬೆನ್ನು ಹಾಕುವ ನಿರ್ಣಯ ಕೈಗೊಂಡಿದೆ.

ಈ ಬಗ್ಗೆ ವಿವರಣೆ ನೀಡಿರುವ ಎಲ್​ಜಿ ಸಂಸ್ಥೆ, ನಾವು ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಲಾಭ ಗಳಿಸುತ್ತಿಲ್ಲ. ಇಲ್ಲಿದ್ದು ಸತತ ನಷ್ಟವನ್ನು ಅನುಭವಿಸುವುದಕ್ಕಿಂತ ನಾವು ಯಾವ ಕ್ಷೇತ್ರದಲ್ಲಿ ಶಕ್ತಿಶಾಲಿಯಾಗಿದ್ದೇವೋ ಅಲ್ಲಿ ಹೆಚ್ಚಿನ ಗಮನ ಹರಿಸಲು ಬಯಸುತ್ತೇವೆ. ಎಲೆಕ್ಟ್ರಿಕ್​ ವಾಹನಗಳ ಬಿಡಿಭಾಗ, ಗೃಹಪಯೋಗಿ ವಸ್ತುಗಳು ಹಾಗೂ ರೊಬೋಟಿಕ್ಸ್​ ವಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಾವು ಅಚ್ಚೊತ್ತಿದ್ದೇವೆ. ಇನ್ನುಮುಂದೆ ನಮ್ಮ ನೂತನ ಪ್ರಯೋಗಗಳು ಅಲ್ಲಿಯೇ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈಗ ಕೊಂಡಿರುವ ಸ್ಮಾರ್ಟ್​ಫೋನ್ ಹಾಳಾದರೆ ಏನು ಗತಿ?
ಸದ್ಯ ಎಲ್​ಜಿ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ ಜುಲೈ 2021ಕ್ಕೆ ಸ್ಮಾರ್ಟ್​ಫೋನ್ ಉತ್ಪಾದನೆಯನ್ನು ಅದು ಸಂಪೂರ್ಣ ಸ್ಥಗಿತಗೊಳಿಸಲಿದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಉತ್ಪನ್ನಗಳ ಮಾರಾಟವೂ ಅದು ಖಾಲಿಯಾಗುವ ತನಕ ಮುಂದುವರೆಯಲಿದೆ. ಅಲ್ಲದೇ, ಈಗಾಗಲೇ ಎಲ್​ಜಿ ಸ್ಮಾರ್ಟ್​ಫೋನ್​ ಕೊಂಡುಕೊಂಡಿರುವ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ನಿಮ್ಮ ಮೊಬೈಲ್​ ಹಾಳಾದಲ್ಲಿ ಕೆಲ ವರ್ಷಗಳ ತನಕ ಅದನ್ನು ರಿಪೇರಿ ಮಾಡುವುದರಿಂದ ಹಿಡಿದು ಸೂಕ್ತ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದೆ.

ಕಳೆದ ಆರು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದ ಎಲ್​ಜಿ ಸ್ಮಾರ್ಟ್​ಫೋನ್​ಗಳನ್ನು ಜನರು ಆದ್ಯತೆಯ ಆಯ್ಕೆಯಾಗಿ ಪರಿಗಣಿಸುತ್ತಲೇ ಇರಲಿಲ್ಲ. ಇಂತಹ ಸ್ಥಿತಿಯಲ್ಲಿದ್ದ ಸಂಸ್ಥೆ ಸ್ಮಾರ್ಟ್​ಫೋನ್​ ಉತ್ಪಾದನೆಯನ್ನು ನಿಲ್ಲಿಸುವ ಕುರಿತು ಸಂಸ್ಥೆಯ ಮುಖ್ಯಸ್ಥ ಕೆಲ ತಿಂಗಳ ಹಿಂದೆ ಸುಳಿವನ್ನೂ ನೀಡಿದ್ದರು. ಇದೀಗ ಅಧಿಕೃತವಾಗಿ ನಿರ್ಣಯ ಘೋಷಿಸಲಾಗಿದ್ದು ಎಲ್​ಜಿ ಸ್ಮಾರ್ಟ್​ಫೋನ್​ ಖಾಯಂ ಆಗಿ ಸ್ವಿಚ್ ಆಫ್ ಆಗಲಿದೆ.

ಇದನ್ನೂ ಓದಿ:
ಆರೋಗ್ಯ ಚೆನ್ನಾಗಿರಬೇಕಂದ್ರೆ ಸ್ಮಾರ್ಟ್​ಫೋನ್ ಬಳಕೆ ಬಿಟ್ಟುಬಿಡಿ; ಆದರೆ ಹೇಗೆ ಬಿಡೋದು? 

Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು

(LG Closes Down Smart phone business here is what will happen to existing LG Phone users in kannada)