ಬೇಗೂರಿನ ಅಪಾರ್ಟ್ಮೆಂಟ್ಗಳಲ್ಲಿ ಮಂಗಗಳ ಕಾಟಕ್ಕೆ ನಿವಾಸಿಗಳು ಸುಸ್ತೋ ಸುಸ್ತು, ಕ್ರಮ ಕೈಗೊಳ್ಳುವಂತೆ ಅಗ್ರಹ
ಮಂಗಗಳು ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ತಮ್ಮ ಚೇಷ್ಟೆಗಳಿಂದ ಮನುಷ್ಯರನ್ನು ಸತಾಯಿಸಿಬಿಡುತ್ತವೆ. ಸ್ವಲ್ಪ ಯಾಮಾರಿದ್ರೂ ಈ ಮಂಗಗಳು ಮನುಷ್ಯರ ಮೇಲೆ ದಾಳಿಗೆ ಮುಂದಾಗುತ್ತವೆ. ಇದೀಗ, ಬಿಬಿಎಂಪಿಯ ದಕ್ಷಿಣ ವಲಯದ ಬೇಗೂರು ವಾರ್ಡ್‌ನಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಅಪಾರ್ಟ್ಮೆಂಟ್ ನೊಳಗೆ ನುಗ್ಗುವುದಲ್ಲದೆ, ಮಕ್ಕಳು ಹಾಗೂ ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದು, ಇದು ಇಲ್ಲಿನ ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಮಂಗಗಳು ಮಾಡುವ ಚೇಷ್ಟೆಗಳನ್ನು ಕಂಡು ಒಂದು ಕ್ಷಣ ನಗು ಬಂದರೂ, ಅವುಗಳ ಕಿತಾಪತಿಗಳಿಗೆ ಸುಸ್ತಾಗಿ ಬಿಡುತ್ತೇವೆ. ಮೊಬೈಲ್ ಅಥವಾ ತಿನ್ನುವ ವಸ್ತುಗಳು ಕೈಯಲ್ಲಿದ್ದರೆ ಅದನ್ನು ಕಸಿದು, ಕೊಡುವ ತೊಂದರೆ ಅನುಭವಿಸುವವರಿಗೆ ಮಾತ್ರ ಗೊತ್ತು. ಇಂತಹದ್ದೆ ಪಾಡು ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ನಿವಾಸಿಗಳಾದ್ದಾಗಿದೆ. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯದ ಬೇಗೂರಿನ ಎಸ್‌ಎನ್‌ಎನ್ ರಾಜ್ ಸೆರಿನಿಟಿ ಬಳಿಯ ಅಪಾರ್ಟ್‌ಮೆಂಟ್ ಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ.
ಮಂಗಗಳು ಪಾರಿವಾಳದ ಬಲೆ ಹರಿದು ಬಾಲ್ಕನಿಯ ಬಾಗಿಲು ತೆರೆದು ಮನೆಗಳಿಗೆ ನುಗ್ಗುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಪ್ರತಿದಿನ ಸವಾಲಾಗಿ ಪರಿಣಮಿಸಿದೆ. ಅದಲ್ಲದೇ, ಸ್ಥಳೀಯ ನಿವಾಸಿಗಳು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಸ್ಥಳೀಯ ನಿವಾಸಿ ವಿನೀತ್ ಮೊಡನ್, ‘ಕಳೆದ ಕೆಲವು 1-2 ಮಂಗಳು ಆಗಾಗ್ಗೆ ಬರುತ್ತಿದ್ದವು. ಆದರೆ, ಕಳೆದ ಎರಡು ತಿಂಗಳಲ್ಲಿ 10 ಕ್ಕೂ ಹೆಚ್ಚು ಮಂಗಗಳ ಗುಂಪುಗಳೊಂದಿಗೆ ಬರುತ್ತಿದ್ದು, ಈ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಇಲ್ಲಿನ ನಿವಾಸಿಗಳಿಗೆ ಆತಂಕವನ್ನುಂಟು ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಮಂಗವೊಂದು ನನ್ನ ಸ್ಮಾರ್ಟ್‌ಫೋನ್’ನ್ನು ಕಸಿದುಕೊಂಡಿತ್ತು. ಮತ್ತೊಂದು ಫ್ಲಾಟ್‌ನಲ್ಲಿ, ಕೋತಿಯೊಂದು ಯುಟಿಲಿಟಿ ಪ್ರದೇಶಕ್ಕೆ ಪ್ರವೇಶಿಸಿ ಪ್ಲೇಟ್‌ಗಳನ್ನು ತೆಗೆದುಕೊಂಡು ಹೋಗಿದೆ’ ಎಂದಿದ್ದಾರೆ.
ಅದಲ್ಲದೇ, ‘ನಾಲ್ಕು ವರ್ಷದ ಮಗು ಮೇಲೆ ಕೂಡ ಕೋತಿಗಳು ಎರಡು ಬಾರಿ ದಾಳಿ ಮಾಡಿದೆ..ಇದರಿಂದ ಮಗು ಕೂಡ ಗಾಬರಿಗೊಂಡಿದೆ. ಬಿಬಿಎಂಪಿಯ ಅರಣ್ಯ ವಿಭಾಗಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ದೂರು ದಾಖಲಾಗಿದ್ದು, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿನೀತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ನಂತರ ಪ್ರತಿ ನಿಮಿಷಕ್ಕೆ 1 ರೂ. ಗೂಗಲ್ ಪೇ ಮಾಡ್ತಿದ್ದಾನೆ ಮಾಜಿ ಪ್ರಿಯಕರ, ಇದು ಪ್ರೀತಿ ಅಲ್ಲ ಹಿಂಸೆ
ಸ್ಥಳೀಯ ನಿವಾಸಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ರಾಜ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಎನ್. ತಿಳಿಸಿದ್ದಾರೆ. ನಗರದ ಅಂಚಿನಲ್ಲಿರುವ ಕಾಡುಗಳು ಕಣ್ಮರೆಯಾಗುತ್ತಿರುವುದೇ ನಗರ ಪ್ರದೇಶಕ್ಕೆ ಈ ಮಂಗಗಳು ಬರಲು ಪ್ರಮುಖ ಕಾರಣವಾಗಿದೆ. ಒಂದು ವೇಳೆ ವಾಸಿಸುವ ಪ್ರದೇಶಗಳಿಗೆ ಕಾಡು ಪ್ರಾಣಿಗಳು ಬಂದರೆ ಬಿಬಿಎಂಪಿ 080-22221188 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ರಕ್ಷಣಾ ತಂಡವನ್ನು ಸಂಪರ್ಕಿಸಬಹುದು. ನಾವು ದೂರನ್ನು ದಾಖಲಿಸುತ್ತೇವೆ ಹಾಗೂ ಆಯಾ ವಲಯದಲ್ಲಿರುವ ಅರಣ್ಯ ಅಧಿಕಾರಿಗಳೊಂದಿಗೆ ಸಂಪರ್ಕಿಸುತ್ತೇವೆ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ