ಇಂಡೋನೇಷ್ಯಾದ ಭೀಕರ ಪ್ರವಾಹಕ್ಕೆ 60ಕ್ಕೂ ಹೆಚ್ಚು ಸಾವು

ಇಂಡೋನೇಷ್ಯಾದ ಭೀಕರ ಪ್ರವಾಹಕ್ಕೆ 60ಕ್ಕೂ ಹೆಚ್ಚು ಸಾವು

ಜಕಾರ್ತ: ಇಂಡೋನೇಷ್ಯಾದಲ್ಲಿ ರಣ ಭೀಕರ ಪ್ರವಾಹದ ಆರ್ಭಟ ಜೋರಾಗಿದೆ. ರಕ್ಕಸ ಪ್ರವಾಹ ಸಿಕ್ಕಿದ್ದನ್ನೆಲ್ಲಾ ಬಡಿದು ಬಾಯಿಗೆ ಹಾಕಿಕೊಳ್ಳುತ್ತಾ ಮುನ್ನುಗುತ್ತಿದೆ. ನೀರಿನ ಆರ್ಭಟಕ್ಕೆ ಮನೆಗಳು ಕೊಚ್ಚಿ ಹೋಗುತ್ತಿವೆ. ಆಕಾಶದೆತ್ತರದಿಂದ ನೋಡಿದ್ರೆ ನಗರಕ್ಕೆ ನಗರವೇ ನೀರಿನಲ್ಲಿ ಮುಳುಗಿರುವ ಬೀಕರ ದೃಶ್ಯ ಕಣ್ಣಮುಂದೆ ಬರುತ್ತೆ.

ಭೀಕರ ಪ್ರವಾಹಕ್ಕೆ 60ಕ್ಕೂ ಹೆಚ್ಚು ಜನ ಸಾವು!
ಹೊಸ ವರ್ಷದ ಸಂಭ್ರಮದಲ್ಲಿದ್ದ ಇಂಡೋನೇಷ್ಯಾದ ಜನರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಪ್ರವಾಹದ ಆರ್ಭಟಕ್ಕೆ ಜನ ವಿಲವಿಲ ಒದ್ದಾಡುತ್ತಿದ್ದಾರೆ. ಹೌದು, ಇಂಡೋನೇಷ್ಯಾದ ರಾಜಧಾನಿ ಜಕಾರ್ತ ಜನರ ಜೀವನ ಪ್ರವಾಹದ ಹೊಡೆತಕ್ಕೆ ಮುಳುಗಿ ಹೋಗಿದೆ. ಎಡಬಿಡದೆ ಸುರಿದ ಮಳೆಗೆ ಜಕಾರ್ತ ಸೇರಿದಂತೆ ಅನೇಕ ಪ್ರದೇಶದಲ್ಲಿ ನೆರೆ ಉಂಟಾಗಿದೆ ಅದರಲ್ಲೂ ಜಕಾರ್ತ ನಲುಗಿಹೋಗಿದೆ.

60ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡ್ರೆ, ಸುಮಾರು 1 ಲಕ್ಷದ 70 ಸಾವಿರ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಆಕಾಶವೇ ಹರಿದು ಹೋಗುವಂತೆ ಸುರಿದ ಮಳೆಯಿಂದ ಇಂಡೋನೇಷ್ಯಾದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇದರ ಪರಿಣಾಮ ಜಕಾರ್ತ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಸಂತ್ರಸ್ತರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅದ್ರಲ್ಲೂ ಮನೆಗಳು ವಾಹನ ಕೊಚ್ಚಿ ಹೋಗುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.

ಪ್ರವಾಹದಿಂದಾಗಿ ಮಳೆ ನಿಲ್ಲಿಸಲು ಹೊಸ ಪ್ಲ್ಯಾನ್:
ನಾವು ಮಳೆ ಬರ್ಲಿ ಎಂದು ಮೋಡ ಬಿತ್ತನೆ ಮಾಡಿದ್ರೆ, ಇಂಡೋನೇಷ್ಯಾದಲ್ಲಿ ಮಳೆ ನಿಲ್ಲಿಸಲು ಇದೇ ತರಹದ ಹೊಸ ಪ್ಲ್ಯಾನ್ ಮಾಡಿದ್ದಾರೆ. ಮಳೆ ನಿಲ್ಲಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಮಾತ್ರ ಮತ್ತ ಜಾವಾ ಪ್ರದೇಶದಲ್ಲಿ ದಟ್ಟವಾದ ಮೋಡಗಳ ಮೇಲೆ ವಿಮಾನದ ಮೂಲಕ ಸೋಡಿಯಂ ಕ್ಲೋರೈಡ್ ಸಿಪಂಡಿಸಿ ಮಳೆ ಕಂಟ್ರೋಲ್ ಮಾಡಲಾಗುತ್ತಿದೆ.

ಕೆಸರು ಮನೆಗಳಲ್ಲಿ ಸಂತ್ರಸ್ತರ ಪರದಾಟ!
ಇನ್ನು ಕಳೆದ 3-4 ದಿನಗಳಿಂದ ಆರ್ಭಟಿಸುತ್ತಿದ್ದ ಮಳೆರಾಯನ ಆರ್ಭಟ ಕಮ್ಮಿಯಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಪ್ರವಾಹ ತಗ್ಗಿದೆ. ಮನೆಗಳಲ್ಲಿ ಹಾವು ಚೇಳು ಸೇರಿರುವ ಆತಂಕ ಎದುರಾಗಿದೆ. ಅಲ್ಲದೇ ಪ್ರವಾಹ ಇಳಿದ ಪ್ರದೇಶಕ್ಕೆ ಜನ ವಾಪಾಸ್‌ ಆಗುತ್ತಿದ್ದು, ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ.

Click on your DTH Provider to Add TV9 Kannada