ಕಾರ್ನೆಲ್ ವಿವಿ ಅತ್ಯಾಚಾರ-ವಿಡಿಯೋ ಲೀಕ್ ಪ್ರಕರಣ: ಅಮೆರಿಕ ಮಾಧ್ಯಮಗಳ ‘ಜಾಣ ಮೌನ’ಕ್ಕೆ ಭಾರತೀಯ ನೆಟ್ಟಿಗರ ಆಕ್ರೋಶ
ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ವಿಡಿಯೋ ಲೀಕ್ ಪ್ರಕರಣ ಜಾಗತಿಕ ಆಘಾತ ಮೂಡಿಸಿದೆ. ಆದರೆ, ಅಮೆರಿಕದ ಪ್ರಮುಖ ಮಾಧ್ಯಮಗಳು ಈ ಬಗ್ಗೆ ಮೌನ ವಹಿಸಿರುವುದು ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಸಣ್ಣ ಘಟನೆಗಳಿಗೂ ಮಹತ್ವ ನೀಡುವ ಪಾಶ್ಚಾತ್ಯ ಮಾಧ್ಯಮಗಳು ತಮ್ಮ ನೆಲದ ಈ ಗಂಭೀರ ಅಪರಾಧವನ್ನು ಕಡೆಗಣಿಸುತ್ತಿವೆ. ಇದು ದ್ವಿಮುಖ ನೀತಿಯ ಸ್ಪಷ್ಟ ಉದಾಹರಣೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 28: ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಸಂಸ್ಥೆಯಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ, ಆ ವೀಡಿಯೊವನ್ನು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಕರಣ ಜಾಗತಿಕ ಮಟ್ಟದಲ್ಲಿ ಭಾರಿ ಆಘಾತ ಮೂಡಿಸಿದೆ. ಈ ಘಟನೆ ನಡೆದಿದ್ದು 2024ರಲ್ಲಿ ಆದರೆ, ಇಂತಹ ಹೇಯ ಕೃತ್ಯ ನಡೆದಿದ್ದರೂ ಅಮೆರಿಕದ ಪ್ರಮುಖ ಮುಖ್ಯವಾಹಿನಿ ಮಾಧ್ಯಮಗಳು ಈ ಬಗ್ಗೆ ಮೌನ ವಹಿಸಿರುವುದು ಅಥವಾ ಅತ್ಯಂತ ಸಣ್ಣ ಸುದ್ದಿಯಾಗಿ ಬಿಂಬಿಸುತ್ತಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೂರಿನ ಪ್ರಕಾರ, ‘ಜೇನ್ ಡೋ’ ಎಂದು ಗುರುತಿಸಲಾದ 20 ವರ್ಷದ ಸಂತ್ರಸ್ತ ವಿದ್ಯಾರ್ಥಿನಿಯು 2024 ರ ಅಕ್ಟೋಬರ್ 19 ರಂದು ರಾತ್ರಿ ಇಥಾಕಾದಲ್ಲಿರುವ ‘ಚಿ ಫೈ’ ಫ್ರಟರ್ನಿಟಿ ಹೌಸ್‌ಗೆ ತನ್ನ ಸ್ನೇಹಿತನನ್ನು ಭೇಟಿಯಾಗಲು ತೆರಳಿದ್ದಳು. ಅಲ್ಲಿ ಇಬ್ಬರು ಫ್ರಟರ್ನಿಟಿ ಸದಸ್ಯರು ಆಕೆಗೆ ‘ಕೆಟಮೈನ್’ ಮತ್ತು ಮದ್ಯವನ್ನು ನೀಡಿದ್ದರು.
ಆಕೆ ಸಂಪೂರ್ಣವಾಗಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದಾಗ, ಆರೋಪಿಗಳಲ್ಲಿ ಒಬ್ಬನು “Chi Phi Actives” ಎಂಬ ಗ್ರೂಪ್ ಚಾಟ್‌ನಲ್ಲಿ ಅಶ್ಲೀಲ ಸಂದೇಶ ರವಾನಿಸಿ ಇತರರನ್ನು ಆಹ್ವಾನಿಸಿದ್ದಾನೆ. ಅದರ ನಂತರ ಫ್ರಟರ್ನಿಟಿಯ ಇತರ ಸದಸ್ಯರು ಕೊಠಡಿಗೆ ಆಗಮಿಸಿ ಮುಂಜಾನೆ 5.45 ರವರೆಗೆ ಸತತವಾಗಿ ಆಕೆಯ ಮೇಲೆ ಸರಣಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಭಾರತೀಯ ನೆಟ್ಟಿಗರ ನೇರ ಪ್ರಶ್ನೆ
ಭಾರತದಲ್ಲಿ ಮಹಿಳಾ ದೌರ್ಜನ್ಯ ಅಥವಾ ಸಣ್ಣ ಮಟ್ಟದ ಅಪರಾಧಗಳು ನಡೆದರೂ, ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮಾನವ ಹಕ್ಕುಗಳ ಬಿಕ್ಕಟ್ಟಿನಂತೆ ಬಿಂಬಿಸಿ ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಅಮೆರಿಕದ ಪ್ರಮುಖ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಈಗ ತಮ್ಮದೇ ನೆಲದಲ್ಲಿ ಇಷ್ಟೊಂದು ಅಮಾನುಷ ಘಟನೆ ನಡೆದಾಗ ಎಲ್ಲಿ ಹೋಗಿವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಮತ್ತಷ್ಟು ಓದಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವದಂತಿ: ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಪಂಜಾಬ್‌ನ ಎಲ್‌ಪಿಯು ಕ್ಯಾಂಪಸ್ ಧ್ವಂಸ
ಡಬಲ್ ಸ್ಟ್ಯಾಂಡರ್ಡ್ : ಭಾರತದಂತಹ ಏಷ್ಯನ್ ರಾಷ್ಟ್ರಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಉದ್ದುದ್ದ ಸಂಪಾದಕೀಯಗಳನ್ನು ಬರೆಯುವ ಪಾಶ್ಚಿಮಾತ್ಯ ಪತ್ರಕರ್ತರು, ತಮ್ಮದೇ ದೇಶದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೀಡಿಯೊ ವೈರಲ್ ಮಾಡಿದಾಗ ಸುದ್ದಿ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಬಳಕೆದಾರರು ಆರೋಪಿಸಿದ್ದಾರೆ.
ವಿಡಿಯೋ
A 20-year-old Cornell student says she went to the Chi Phi fraternity house in October 2024, was pressured into taking what she was told was ketamine, and was then sexually assaulted by seven fraternity members over several hours.
And this may be the most horrifying detail:… pic.twitter.com/MXVieu0fMb
— Warren (@swd2) September 27, 2026
ಕ್ಯಾಂಪಸ್ ಗೌಪ್ಯತೆಯ ಕಪಟತನ: ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಹೆಸರು ಹಾಳಾಗಬಾರದು ಎಂಬ ಕಾರಣಕ್ಕೆ ಅಮೆರಿಕನ್ ಸುದ್ದಿ ಸಂಸ್ಥೆಗಳು ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತರುತ್ತಿಲ್ಲ, ಅದೇ ಭಾರತದಲ್ಲಾದರೆ ಇಡೀ ದೇಶದ ಸುರಕ್ಷತಾ ವ್ಯವಸ್ಥೆಯನ್ನೇ ಶಂಕಿಸಲಾಗುತ್ತದೆ ಎಂದು ಆನ್‌ಲೈನ್‌ನಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ #CornellIncident, #WesternMediaBias ಎಂಬ ಹ್ಯಾಶ್‌ಟ್ಯಾಗ್‌ಗಳು ಮುನ್ನೆಲೆಗೆ ಬಂದಿದ್ದು, ಅಮೆರಿಕದ ಮಾಧ್ಯಮಗಳ ಪೂರ್ವಾಗ್ರಹ ಪೀಡಿತ ಪತ್ರಿಕೋದ್ಯಮವನ್ನು ಹಲವರು ಕಟುವಾಗಿ ಟೀಕಿಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ನ್ಯಾಯದ ವಿಚಾರದಲ್ಲಿ ಜಾಗತಿಕ ಮಾಧ್ಯಮಗಳು ಭೌಗೋಳಿಕ ಗಡಿಗಳನ್ನು ಮೀರಿ ನಿಷ್ಪಕ್ಷಪಾತವಾಗಿ ವರ್ತಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಘಟನೆ ನಡೆದ ಮೂರು ವಾರಗಳ ನಂತರ ಸಂತ್ರಸ್ತೆ ಕಾರ್ನೆಲ್ ವಿವಿ ಪೋಲಿಸರಿಗೆ ದೂರು ನೀಡಿದ್ದರು. ವಿಶ್ವವಿದ್ಯಾಲಯದ ಆಂತರಿಕ ಮಂಡಳಿಯು 12ಕ್ಕೂ ಹೆಚ್ಚು ವಿಚಾರಣೆಗಳನ್ನು ನಡೆಸಿತು. ಆದರೆ ಇದರ ಫಲಿತಾಂಶ ಅತ್ಯಂತ ಹಗುರವಾಗಿತ್ತು ಎಂದು ಸಂತ್ರಸ್ತೆಯ ವಕೀಲ ಥಾಮಸ್ ಜಿಯುಫ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಆರೋಪಿಗಳಲ್ಲಿ ಕೇವಲ ಇಬ್ಬರನ್ನು ಮಾತ್ರ ವಿವಿಯಿಂದ ವಜಾಗೊಳಿಸಲಾಯಿತು. ಬಾಕಿ ಉಳಿದ ಐವರಿಗೆ ತಾತ್ಕಾಲಿಕ ಅಮಾನತು (Suspension), ಜಾಗೃತಿ ಶಿಬಿರಗಳಲ್ಲಿ ಭಾಗವಹಿಸುವುದು ಮತ್ತು ‘ಪ್ರಬಂಧ’ ಬರೆಯುವಂತಹ ತೀರಾ ಸಣ್ಣ ಶಿಕ್ಷೆಗಳನ್ನು ನೀಡಲಾಗಿದೆ.
ಅಮೆರಿಕದ ಕ್ಯಾಂಪಸ್‌ಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಮಾಣ: ಅಮೆರಿಕನ್ ಅಸೋಸಿಯೇಷನ್ ಆಫ್ ಯೂನಿವರ್ಸಿಟೀಸ್ (AAU) ನಡೆಸಿದ ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಸುಮಾರು ಶೇ.13 ರಿಂದ ಶೇ.26 ರಷ್ಟು ವಿದ್ಯಾರ್ಥಿನಿಯರು ತಮ್ಮ ವ್ಯಾಸಂಗ ಅವಧಿಯಲ್ಲಿ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂಬ ಆಘಾತಕಾರಿ ಅಂಕಿಅಂಶಗಳಿವೆ.
ಟೈಟಲ್ IX ವಿವಾದ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಲೈಂಗಿಕ ಅಪರಾಧಗಳನ್ನು ವಿಚಾರಣೆ ಮಾಡಲು ‘ಟೈಟಲ್ 9’ ಎಂಬ ಆಂತರಿಕ ಸಮಿತಿಗಳಿರುತ್ತವೆ. ಆದರೆ, ಈ ಸಮಿತಿಗಳು ಪೊಲೀಸರಿಗೆ ಮಾಹಿತಿ ನೀಡದೆ ಆಂತರಿಕವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ವಿಶ್ವವಿದ್ಯಾಲಯಗಳ ಬ್ರ್ಯಾಂಡ್ ಮೌಲ್ಯ ಕಾಪಾಡಿಕೊಳ್ಳಲು ಯತ್ನಿಸುತ್ತವೆ ಎಂಬ ದೂರುಗಳು ಮೊದಲಿನಿಂದಲೂ ಇವೆ.
ಡಿಜಿಟಲ್ ಕ್ರೈಂ ಆತಂಕ: ಅತ್ಯಾಚಾರದ ವಿಡಿಯೋವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿರುವುದು ಸಂತ್ರಸ್ತೆಯ ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತೆಯ ಮೇಲಿನ ಗಂಭೀರ ದಾಳಿಯಾಗಿದ್ದು, ಅಮೆರಿಕದಾದ್ಯಂತ ಕಠಿಣ ಸೈಬರ್ ಕಾನೂನುಗಳನ್ನು ಜಾರಿಗೊಳಿಸುವಂತೆ ವಿದ್ಯಾರ್ಥಿ ಸಮುದಾಯದಿಂದ ಒತ್ತಡ ಹೆಚ್ಚುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




