ಭಾರತದ ಪುರಾತನ ಗಿಡಮೂಲಿಕೆ ಅಶ್ವಗಂಧ ನಿಷೇಧಿಸಿದ ಡೆನ್ಮಾರ್ಕ್: ಕಾರಣಗಳನ್ನು ಕೇಳಿದ್ರೆ ಶಾಕ್ ಆಗ್ತೀರಿ!

ಅಶ್ವಗಂಧ ಭಾರತದ ಪುರಾತನ ಗಿಡಮೂಲಿಕೆಗಳಲ್ಲಿ ಒಂದು. ಅನೇಕ ರೋಗಗಳಿಗೆ ಇದು ರಾಮಬಾಣ ಎಂದೇ ಏಷ್ಯಾ ಮತ್ತು ಆಫ್ರಿಕಾದ ಜನರು ನಂಬಿದ್ದಾರೆ. ಅಶ್ವಗಂಧ ಮೂಲಿಕೆಯೇ ಆಗಿದ್ದರೂ ಇದನ್ನು ಔಷಧಿಗಳ ರೂಪದಲ್ಲಿ ವಿಶ್ವದಾದ್ಯಂತ ಮಾರಾಟ ಮಾಡಲಾಗುತ್ತಿದೆ. ಸಿರಪ್, ಕ್ಯಾಪ್ಸೂಲ್ ಹಾಗೂ ಪುಡಿ ಮಾದರಿಯಲ್ಲೂ ಆಯುರ್ವೇದದ ಈ ಔಷಧಿ ವಿಶ್ವದ ಹಲವು ಕಡೆ ಬಳಕೆಯಾಗುತ್ತಿದೆ. ಕೋಟ್ಯಂತರ ಮಂದಿ ಬಳಸುತ್ತಿದ್ದಾರೆ ಕೂಡ. ಆದರೆ ಈಗ ತಲಾತಲಾಂತರದಿಂದ ಜನ ನಂಬಿದ್ದ ಅಶ್ವಗಂಧವನ್ನೇ ಡೆನ್ಮಾರ್ಕ್ ಸರ್ಕಾರ ನಿಷೇಧಿಸಿದೆ. ಇದಕ್ಕೆ ಕಾರಣಗಳೇನು? ಆಯುಷ್ ಸಚಿವಾಲಯ ಹೇಳಿದ್ದೇನು ಎಂಬುದು ಇಲ್ಲಿದೆ.

ಭಾರತದ ಪುರಾತನ ಗಿಡಮೂಲಿಕೆ ಅಶ್ವಗಂಧ ನಿಷೇಧಿಸಿದ ಡೆನ್ಮಾರ್ಕ್: ಕಾರಣಗಳನ್ನು ಕೇಳಿದ್ರೆ ಶಾಕ್ ಆಗ್ತೀರಿ!
ಅಶ್ವಗಂಧ
Follow us
|

Updated on: Jul 06, 2024 | 3:03 PM

ಭಾರತೀಯ ಆಯುರ್ವೇದ ಪರಂಪರೆಯಲ್ಲಿ ಹಾಗೂ ಚಿಕಿತ್ಸಾ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದ ಅಶ್ವಗಂಧವನ್ನು ಡೆನ್ಮಾರ್ಕ್ ಸರ್ಕಾರ ನಿಷೇಧಿಸಿದೆ. 2020ರ ಮೇ ತಿಂಗಳಲ್ಲಿ ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ಕೊಟ್ಟ ವರದಿಯ ಆಧಾರದ ಮೇಲೆ ಈ ನಿರ್ಧಾರ ಹೊರಬಿದ್ದಿದೆ. ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪದಲ್ಲಿ ಅಶ್ವಗಂಧವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ವರದಿಯಿಂದಾಗಿ ಇದೀಗ ಸ್ವಿಡನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಫ್ರಾನ್ಸ್, ಟರ್ಕಿ ಹಾಗೂ ಯುರೋಪಿಯನ್ ಯೂನಿಯನ್‌ನಲ್ಲಿಯೂ ಕಳವಳ ವ್ಯಕ್ತವಾಗಿದೆ.

ಡೆನ್ಮಾರ್ಕ್ ವರದಿಯಲ್ಲಿ ಏನಿದೆ?

ಲೈಂಗಿಕ ಹಾರ್ಮೋನು ಮತ್ತು ಸಂತಾನೋತ್ಪತ್ತಿಯ ಮೇಲೆ ಅಶ್ವಗಂಧ ನಕರಾತ್ಮಕ ಪರಿಣಾಮ ಬೀರುತ್ತದೆ. ಅಶ್ವಗಂಧ ಗರ್ಭಪಾತಕ್ಕೂ ಕಾರಣವಾಗಲಿದೆ ಎಂದು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ, ಅಶ್ವಗಂಧವು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಥೈರಾಯ್ಡ್ ಗ್ರಂಥಿ ಮೇಲೆ ಹಾಗೂ ಲಿವರ್ ಸಮಸ್ಯೆ ಉಂಟುಮಾಡಬಹುದು ಎಂದು ಆರೋಪ ಮಾಡಲಾಗಿದೆ.

ಆಯುಷ್ ಸಚಿವಾಲಯ ಹೇಳಿದ್ದೇನು?

ಡೆನ್ಮಾರ್ಕ್​ನ ನಿರ್ಧಾರಕ್ಕೆ ಮತ್ತು ‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಗೆ ಭಾರತದ ಆಯುಷ್ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ವರದಿಯನ್ನು ಮರುಪರಿಶೀಲಿಸುವ ಅಗತ್ಯ ಇದೆ ಎಂದು ಆಯುಷ್ ಸಚಿವಾಲಯ ಹೇಳಿದೆ. ಅಶ್ವಗಂಧದ ಸುರಕ್ಷತೆ ಬಗ್ಗೆ 400 ಪುಟಗಳ ದಾಖಲೆಗಳಿವೆ. ವರದಿಯಲ್ಲಿ ವೈಜ್ಞಾನಿಕ ಕೊರತೆ ಇರುವುದು ಎದ್ದು ಕಾಣಿಸುತ್ತಿದೆ ಎಂದು ಡೆನ್ಮಾರ್ಕ್ ಮಾಡಿರುವ ಆರೋಪವನ್ನು ಆಯುಷ್ ಸಚಿವಾಲಯ ತಳ್ಳಿ ಹಾಕಿದೆ.

ಅಶ್ವಗಂಧದ ರಫ್ತಿನಲ್ಲಿ ಭಾರತವೇ ಮುಂದು

ಆಯುಷ್ ಸಚಿವಾಲಯದ ಪ್ರಕಾರ, ಭಾರತ ವಿಶ್ವದ ಅತಿದೊಡ್ಡ ಅಶ್ವಗಂಧ ಉತ್ಪಾದಕ ದೇಶ. ಒಂದು ವರ್ಷಕ್ಕೆ 4 ಸಾವಿರ ಟನ್ ಅಶ್ವಗಂಧದ ಬೇರುಗಳನ್ನು ಉತ್ಪಾದನೆ ಮಾಡುತ್ತದೆ. ವಿವಿಧ ದೇಶಗಳಿಗೆ ಅಶ್ವಗಂಧ ಪೂರೈಕೆ ಮಾಡುವ ಪೈಕಿ ಭಾರತದ್ದೇ ಶೇಕಡಾ 42ರಷ್ಟು ಕೊಡುಗೆ ಇದೆ. ಹೀಗಿರುವಾಗ ಡೆನ್ಮಾರ್ಕ್ ದೇಶದ ನಿರ್ಧಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಟೆಕ್ನಾಲಜಿ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್’ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ‘ಸೈಂಟಿಫಿಕ್ ಜರ್ನಲ್ ಆಫ್ ಆಯುರ್ವೇದ ಆ್ಯಂಡ್ ಇಂಟಿಗ್ರೇಟಿವ್ ಮೆಡಿಸಿನ್’ ಕೂಡ ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ಸರ್ಕಾರ ಬದಲಾವಣೆ; ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಮೇಲಿನ ಪರಿಣಾಮಗಳೇನು?

ವರದಿಯ ವೈಜ್ಞಾನಿಕತೆಯನ್ನು ಪರಿಶೀಲಿಸಲು ಆಯುಷ್ ಸಚಿವಾಲಯವು ಪದ್ಮಭೂಷಣ ಪ್ರೊ ಡಾ ಶಿವಕುಮಾರ ಸರಿನ್, ಡಾ ರಾಜೇಶ್ ಖಡ್ಗವತ್, ಡಾ ಭೂಷಣ್ ಪಟವರ್ಧನ್ ಮತ್ತಿತರರ ಸಮಿತಿಯನ್ನು ರಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ