AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ಪ್ರವಾಹ: 9 ದಿನಗಳ ನರಕಯಾತನೆ ಬಳಿಕ ಸುರಂಗದಿಂದ ಜೀವಂತವಾಗಿ ಹೊರಬಂದ ಇಬ್ಬರು ಕಾರ್ಮಿಕರು

ನೇಪಾಳದಲ್ಲಿ ಭೀಕರ ಹಿಮನದಿ ಪ್ರವಾಹದ ನಡುವೆ ಪವಾಡಸದೃಶ ಘಟನೆ ನಡೆದಿದೆ. ತ್ರಿಶೂಲಿ ಜಲವಿದ್ಯುತ್ ಸುರಂಗದಲ್ಲಿ 9 ದಿನಗಳ ಕಾಲ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣಾ ಪಡೆಗಳು ಜೀವಂತವಾಗಿ ರಕ್ಷಿಸಿವೆ. ಈ ರಕ್ಷಣಾ ಕಾರ್ಯಾಚರಣೆಯು ಪ್ರವಾಹದಲ್ಲಿ ಸಿಲುಕಿರುವ ನೂರಾರು ಇತರ ಕಾರ್ಮಿಕರ ಬದುಕುಳಿಯುವ ಭರವಸೆಯನ್ನು ಹೆಚ್ಚಿಸಿದೆ. ಸುರಂಗಗಳ ಆಳಕ್ಕೆ ಗಾಳಿ ಮತ್ತು ಆಮ್ಲಜನಕ ಪೂರೈಕೆ ಮಾಡುವ ಮೂಲಕ ರಕ್ಷಣಾ ಪ್ರಯತ್ನಗಳು ಮುಂದುವರಿದಿವೆ.

ನೇಪಾಳ ಪ್ರವಾಹ: 9 ದಿನಗಳ ನರಕಯಾತನೆ ಬಳಿಕ ಸುರಂಗದಿಂದ ಜೀವಂತವಾಗಿ ಹೊರಬಂದ ಇಬ್ಬರು ಕಾರ್ಮಿಕರು
ನೇಪಾಳ ಪ್ರವಾಹ Image Credit source: Asharq al Awsat
ನಯನಾ ರಾಜೀವ್
|

Updated on: Sep 04, 2026 | 10:28 AM

Share

ಕಠ್ಮಂಡು, ಸೆಪ್ಟೆಂಬರ್ 04: ನೇಪಾಳದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಸಂಭವಿಸಿದ ಒಂಬತ್ತು ದಿನಗಳ ಬಳಿಕ ಪವಾಡವೊಂದು ನಡೆದಿದ್ದು, ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣಾ ಪಡೆಗಳು ಜೀವಂತವಾಗಿ ರಕ್ಷಿಸಿವೆ. ಈ ಪವಾಡಸದೃಶ ಪಾರುಗಾಣಿಕೆ ಬೆನ್ನಲ್ಲೇ ಸುರಂಗದ ಆಳದಿಂದ ಮತ್ತಷ್ಟು ಜನರ ಕೂಗು ಕೇಳಿಬರುತ್ತಿದ್ದು, ವಿವಿಧ ಸುರಂಗಗಳಲ್ಲಿ ಸಿಲುಕಿರುವ ನೂರಾರು ಕಾರ್ಮಿಕರೂ ಬದುಕುಳಿದಿರಬಹುದು ಎಂಬ ಆಶಾಕಿರಣ ಮೂಡಿದೆ.

ರಕ್ಷಿಸಲ್ಪಟ್ಟ ಇಬ್ಬರು ನೌಕರರನ್ನು ನೇಪಾಳ ವಿದ್ಯುತ್ ಪ್ರಾಧಿಕಾರದ ಮೆಕ್ಯಾನಿಕಲ್ ಫೋರ್‌ಮ್ಯಾನ್ ಸಂಜಯ್ ಶಾ (30) ಮತ್ತು ಪ್ರಾಜೆಕ್ಟ್ ಮೇಲ್ವಿಚಾರಕ ಕಬೀರ್ ಮಹಾರ್ಜನ್ (45) ಎಂದು ಗುರುತಿಸಲಾಗಿದೆ. ಸಂಪೂರ್ಣ ಕೆಸರು ಮತ್ತು ಮಣ್ಣಿನಲ್ಲಿ ಹೂತುಹೋಗಿದ್ದ ಸುರಂಗದ ಮುಂಭಾಗವನ್ನು ತೆರವುಗೊಳಿಸಿ ಇಬ್ಬರನ್ನೂ ಸುರಕ್ಷಿತವಾಗಿ ಹೊರತರಲಾಗಿದ್ದು, ರಕ್ಷಣಾ ಸಿಬ್ಬಂದಿ ಅವರನ್ನು ಭುಜದ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ. ತಮ್ಮವರು ಜೀವಂತವಾಗಿ ಮರಳಿ ಬಂದಿದ್ದನ್ನು ಕಂಡು ಕುಟುಂಬಸ್ಥರ ನಿಟ್ಟುಸಿರು ಬಿಟ್ಟಿದ್ದಾರೆ.

ಆಗಸ್ಟ್ 26 ರಂದು ಪ್ರವಾಹದ ನೀರು ತ್ರಿಶೂಲಿ ನದಿ ಪಾತ್ರದ ಜಲವಿದ್ಯುತ್ ಸ್ಥಾವರಗಳನ್ನು ಸಂಪೂರ್ಣ ಆವರಿಸಿಕೊಂಡ ಪರಿಣಾಮ, ಸುಮಾರು 12 ವಿವಿಧ ಯೋಜನೆಗಳ 900ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದರು. ಇದರಲ್ಲಿ ಅಂದಾಜು 500 ಮಂದಿ ಕಾರ್ಮಿಕರು ವಿವಿಧ ಯೋಜನಾ ಸುರಂಗಗಳಲ್ಲೇ ಸಿಲುಕಿಕೊಂಡಿರುವ ಭೀತಿ ವ್ಯಕ್ತವಾಗಿದೆ. ಸದ್ಯ ತ್ರಿಶೂಲಿ-3ಎ ಸುರಂಗದ ಆಳದಿಂದ ಮತ್ತಷ್ಟು ಜನರ ಧ್ವನಿಗಳು ಕೇಳಿಬರುತ್ತಿದ್ದು, ಸಿಲುಕಿರುವವರಿಗೆ ಉಸಿರುಗಟ್ಟದಂತೆ ಎಂಜಿನಿಯರ್‌ಗಳು ಪೈಪ್‌ಗಳ ಮೂಲಕ ನಿರಂತರವಾಗಿ ಗಾಳಿ ಮತ್ತು ಆಮ್ಲಜನಕವನ್ನು ಪಂಪ್ ಮಾಡುತ್ತಿದ್ದಾರೆ.

ಮತ್ತಷ್ಟು ಓದಿ: ನೇಪಾಳದ ಪ್ರವಾಹ: 17 ಮಂದಿ ಕರ್ನಾಟಕದ ಚಾರಣಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್

ಹಿಮನದಿ ಒಡೆದು ಸಂಭವಿಸಿದ ಈ ಮಹಾದುರಂತದಲ್ಲಿ ಈವರೆಗೆ ಸಾವನ್ನಪ್ಪಿದವರ ಅಧಿಕೃತ ಸಂಖ್ಯೆ 1,259 ಕ್ಕೆ ಏರಿಕೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಇತ್ತ ಗಡಿಯಾಚೆಗಿನ ಟಿಬೆಟ್ ಭಾಗದಲ್ಲೂ 21 ಮಂದಿ ಮೃತಪಟ್ಟು, 541 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳ ಸೇನೆ ಮತ್ತು ವಿಪತ್ತು ನಿರ್ವಹಣಾ ಪಡೆಗಳು ಅತ್ಯಾಧುನಿಕ ರಕ್ಷಣಾ ಉಪಕರಣಗಳೊಂದಿಗೆ ಅರ್ಧ ಡಜನ್‌ಗೂ ಹೆಚ್ಚು ಸುರಂಗಗಳಲ್ಲಿ ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿವೆ.

ಪೋಸ್ಟ್​

ರಾಸುವಾಗಢಿ, ಲಂಗ್‌ಟಾಂಗ್, ಚಿಲಿಮೆ ಮತ್ತು ಅಪ್ಪರ್ ತ್ರಿಶೂಲಿ-1 ಸೇರಿದಂತೆ ಹಲವು ಪ್ರಮುಖ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರೆದಿದೆ. ಸುರಂಗಗಳ ಒಳಗೆ ನೀರು ನುಗ್ಗದ ಸುರಕ್ಷಿತ ‘ಡ್ರೈ ಚೇಂಬರ್’ಗಳಿದ್ದು, ಅಲ್ಲಿ ಆಹಾರ ಮತ್ತು ನೀರು ಸಂಗ್ರಹವಿರಬಹುದಾದ ಕಾರಣ ಹಲವರು ಜೀವಂತವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುರ್ಗಮ ಹಿಮಾಲಯ ಕಣಿವೆಗಳಲ್ಲಿ ಸಿಲುಕಿರುವವರನ್ನು ಹೊರತರಲು ನೇಪಾಳ ಸೇನೆಯೊಂದಿಗೆ ಭಾರತೀಯ ರಕ್ಷಣಾ ತಜ್ಞರು ಮತ್ತು ಚೀನಾದ ವಿಶೇಷ ತಂಡಗಳು ಥರ್ಮಲ್ ಕ್ಯಾಮೆರಾ, ಹೈಡ್ರಾಲಿಕ್ ಕಟ್ಟರ್‌ಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More