AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೊಬ್ಬ ಅನಾಥ ನನ್ನ ಮದುವೆಗೆ ಬರ್ತೀರಾ ಪ್ಲೀಸ್, ಅತಿಥಿಗಳಿಲ್ಲವೆಂದು ಮನವಿ ಮಾಡಿದ್ದ ಯುವಕ, ಮದುವೆಯನ್ನು ಹಬ್ಬವಾಗಿಸಿದ ಇಂಟರ್ನೆಟ್‌ ಬಳಗ

ತಾನೊಬ್ಬ ಅನಾಥನೆಂದು, ಮದುವೆಗೆ ಬನ್ನಿ ಎಂದು ಚೀನಾದ ಯುವಕ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ. ನೆಟ್ಟಿಗರು ಆತನ ಕರೆಯನ್ನು ಸ್ವೀಕರಿಸಿ, ಊಟ, ಅಲಂಕಾರ, ವಾಹನ, ಹಾಗೂ ಐಷಾರಾಮಿ ಮೇಬ್ಯಾಕ್‌ ಕಾರು ಸೇರಿದಂತೆ ಉಡುಗೊರೆಗಳನ್ನು ನೀಡಿ ಮದುವೆಯನ್ನು ಹಬ್ಬವನ್ನಾಗಿಸಿದರು. ಸಾವಿರಾರು ಜನರು ಭಾಗವಹಿಸಿದ್ದ ಈ ಮದುವೆ, ಅಪರಿಚಿತರ ಪ್ರೀತಿ ಮತ್ತು ಸಮುದಾಯದ ಬೆಂಬಲದ ಅದ್ಭುತ ಕಥೆಯಾಗಿ ವೈರಲ್ ಆಗಿದೆ.

ನಾನೊಬ್ಬ ಅನಾಥ ನನ್ನ ಮದುವೆಗೆ ಬರ್ತೀರಾ ಪ್ಲೀಸ್, ಅತಿಥಿಗಳಿಲ್ಲವೆಂದು ಮನವಿ ಮಾಡಿದ್ದ ಯುವಕ, ಮದುವೆಯನ್ನು ಹಬ್ಬವಾಗಿಸಿದ ಇಂಟರ್ನೆಟ್‌ ಬಳಗ
ಮದುವೆ
ನಯನಾ ರಾಜೀವ್
|

Updated on: Nov 03, 2026 | 9:41 AM

Share

ಬೀಜಿಂಗ್, ನವೆಂಬರ್ 03: ‘‘ನಾನೊಬ್ಬ ಅನಾಥ, ದಯವಿಟ್ಟು ನನ್ನ ಮದುವೆಗೆ ಬರ್ತೀರಾ’’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದ ಚೀನಾದ ವ್ಯಕ್ತಿಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಮದುವೆಗೆ ಹಾಜರಾಗುವುದಷ್ಟೇ ಅಲ್ಲದೆ, ಉಡುಗೊರೆಗಳನ್ನು ತರುವುದು, ಊಟ ತಯಾರಿಸುವುದು, ಅಲಂಕಾರ ಮಾಡುವುದು ಮತ್ತು ಮದುವೆಯ ವಾಹನಗಳ ವ್ಯವಸ್ಥೆ ಮಾಡುವ ಮೂಲಕ ಯುವಕನ ಸಂತೋಷದಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ವಧು-ವರರಿಗೆ ಐಷಾರಾಮಿ ಮೇಬ್ಯಾಕ್‌ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎಂಬ ವರದಿಯೂ ಇದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಯುವಕ

ಬಾಲ್ಯ ಸುಲಭವಾಗಿರಲಿಲ್ಲ. ಅವರು ಶಾಲೆಯಲ್ಲಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ತಾಯಿ ಮರುಮದುವೆಯಾದ ಕಾರಣ, ಆತ ಮತ್ತು ಆತನ ತಮ್ಮ ಪರಸ್ಪರ ಆಸರೆಯಾಗಿ ಬೆಳೆದರು. ಹಲವು ಕಷ್ಟಗಳನ್ನು ಎದುರಿಸಿದ ಇಬ್ಬರೂ ದುಡಿದು ಜೀವನ ಕಟ್ಟಿಕೊಂಡರು. ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಬೇಕು ಎಂಬ ಕನಸಿಗಾಗಿ ವರ ಹಣ ಕೂಡಿಟ್ಟಿದ್ದರು. ಮದುವೆಯ ಸಿದ್ಧತೆ ಆರಂಭವಾದಾಗ ಮಾತ್ರ ಆತನಿಗೆ ಒಂದು ಸಮಸ್ಯೆ ಎದುರಾಗಿತ್ತು. ಮದುವೆಗೆ ಆಹ್ವಾನಿಸಲು ಹೆಚ್ಚು ಸಂಬಂಧಿಕರು ಇರಲಿಲ್ಲ. ಹೀಗಾಗಿ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಲು ಜನರೇ ಇಲ್ಲವೇನೋ ಎಂಬ ಚಿಂತೆ ಆತನನ್ನು ಕಾಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ: ಹರಿದುಬಂದ ನೆರವು

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯುವಕ ಸಾಮಾಜಿಕ ಜಾಲತಾಣದ ಮೊರೆ ಹೋದ. ತನ್ನ ಜೀವನದ ಕಥೆಯನ್ನು ವಿಡಿಯೋ ಮೂಲಕ ಹಂಚಿಕೊಂಡು, ಅಪರಿಚಿತರನ್ನೇ ಮದುವೆಗೆ ಆಹ್ವಾನಿಸಿದ. ಆತನ ಮನದಾಳದ ಮನವಿಗೆ ನೆಟ್ಟಿಗರು ಭಾವನಾತ್ಮಕವಾಗಿ ಸ್ಪಂದಿಸಿದರು. ಅನೇಕರು ಮದುವೆಗೆ ಬರುವುದಾಗಿ ತಿಳಿಸಿದರು. ಕೆಲವರು ಉಡುಗೊರೆಗಳನ್ನು ತರುವುದಾಗಿ ಹೇಳಿದರೆ, ಇನ್ನೂ ಕೆಲವರು ಮದುವೆಯ ಸಿದ್ಧತೆಗಳಲ್ಲಿ ನೆರವಾಗಲು ಮುಂದಾದರು. ಹೀಗೆ ಆನ್‌ಲೈನ್‌ನಲ್ಲಿ ಆರಂಭವಾದ ಒಂದು ಸಣ್ಣ ಆಹ್ವಾನ ದೊಡ್ಡ ಸಮುದಾಯದ ಸಂಭ್ರಮವಾಗಿ ಬದಲಾಯಿತು.

ಇದನ್ನೂ ಓದಿ:

Video: ಕೀ ಪ್ಯಾಡ್ ಮೊಬೈಲ್ ಗಿಫ್ಟ್ ಕೊಟ್ಟ ತಂದೆ, ಖುಷಿಯಲ್ಲಿ ತೇಲಾಡಿದ ಮಗಳು

ಅಡುಗೆ, ಅಲಂಕಾರದಿಂದ ಮೇಬ್ಯಾಕ್‌ ಕಾರಿನವರೆಗೆ

ಮದುವೆಗೆ ಬಂದ ಅಪರಿಚಿತರು ಕೇವಲ ಅತಿಥಿಗಳಾಗಿ ಉಳಿಯಲಿಲ್ಲ. ಕೆಲವರು ಅಡುಗೆ ಮಾಡಲು ಮುಂದೆ ಬಂದರು. ಇನ್ನೂ ಕೆಲವರು ಮದುವೆಗೆ ಬೇಕಾದ ವಸ್ತುಗಳನ್ನು ತಂದರು. ಮದುವೆಯ ಮನೆಗೆ ಅಲಂಕಾರ ಮಾಡಲು ಮತ್ತು ಮೇಣದಬತ್ತಿಗಳನ್ನು ವ್ಯವಸ್ಥೆ ಮಾಡಲು ಸಹಾಯ ಮಾಡಿದರು. ಇದರ ಜೊತೆಗೆ, ಮದುವೆಯ ಕಾರುಗಳ ಸಾಲನ್ನು ಸಿದ್ಧಪಡಿಸಲು ಕೆಲವರು ನೆರವಾದರು. ವರ-ವಧುವಿಗೆ ಮೇಬ್ಯಾಕ್‌ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ ಎಂಬ ಮಾಹಿತಿಯೂ ವರದಿಯಾಗಿದೆ. ಹೀಗೆ ಬೆರಳೆಣಿಕೆಯಷ್ಟು ಅತಿಥಿಗಳೊಂದಿಗೆ ನಡೆಯಬೇಕಿದ್ದ ಮದುವೆ, ಅಪರಿಚಿತರ ಪ್ರೀತಿ ಮತ್ತು ಸಹಕಾರದಿಂದ ಅದ್ಧೂರಿ ಸಮಾರಂಭವಾಗಿ ಮಾರ್ಪಟ್ಟಿತು.

ಸಾವಿರಾರು ಜನರ ಆಸಕ್ತಿ: ಮದುವೆ ಸ್ಥಳವನ್ನೇ ಬದಲಾಯಿಸಬೇಕಾಯಿತು

ಈ ಸುದ್ದಿಯ ಮತ್ತೊಂದು ವಿಶೇಷವೆಂದರೆ, ಆರಂಭದಲ್ಲಿ ಕೆಲವೇ ಜನರು ಬರಬಹುದು ಎಂದು ನಿರೀಕ್ಷಿಸಿದ್ದ ವರನಿಗೆ ಸಾವಿರಾರು ಜನರು ಬರುವ ಆಸಕ್ತಿ ತೋರಿಸಿದ್ದಾರೆ. ವರನ ಹೆಸರು ಷು ಚೆಂಗ್‌ಹಾಂಗ್ (Xu Chenghong). ಈತ ಚೀನಾದ ಯುನ್ನಾನ್ ಪ್ರಾಂತ್ಯದ ಝಾವೊಟಾಂಗ್ ಪ್ರದೇಶದ ಯಿಲಿಯಾಂಗ್ ಕೌಂಟಿಯ ನಿವಾಸಿ ಎಂದು ವರದಿಯಾಗಿದೆ. ಆನ್‌ಲೈನ್‌ನಲ್ಲಿ ಅವರು‘Xiao Xiao Xu’ ಎಂದೂ ಗುರುತಿಸಿಕೊಂಡಿದ್ದಾರೆ.

ಪೋಸ್ಟ್​

ವರದಿಗಳ ಪ್ರಕಾರ, ಅತಿಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೂಲ ಮದುವೆ ಸ್ಥಳ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ದೊಡ್ಡ ಸ್ಥಳಕ್ಕೆ ಸಮಾರಂಭವನ್ನು ಸ್ಥಳಾಂತರಿಸಲಾಯಿತು. ಜನಸಂದಣಿ ನಿಯಂತ್ರಣ, ವಾಹನ ಸಂಚಾರ ಮತ್ತು ಆಹಾರದ ಸುರಕ್ಷತೆಗಾಗಿ ಸ್ಥಳೀಯ ಆಡಳಿತವೂ ವ್ಯವಸ್ಥೆ ಮಾಡಿತು ಎಂದು ವರದಿಯಾಗಿದೆ.

ಉಡುಗೊರೆಗಳ ಸುರಿಮಳೆ; ವಧುವಿನ ಕುಟುಂಬದ ವಿಶೇಷ ನಿರ್ಧಾರ

ಅತಿಥಿಗಳು ಆಹಾರ ಸಾಮಗ್ರಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉಡುಗೊರೆಗಳನ್ನು ತಂದಿದ್ದರು. ಕೆಲವು ವರದಿಗಳ ಪ್ರಕಾರ, ಮದುವೆಗೆ ಬಂದವರು ಪ್ರಾಣಿಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಮತ್ತೊಂದೆಡೆ, ವಧುವಿನ ತಂದೆ ವರದಕ್ಷಿಣೆಯಾಗಿ ನೀಡಿದ್ದ 1.28 ಲಕ್ಷ ಯುವಾನ್‌ ಹಣವನ್ನು ದಂಪತಿಗೆ ಮರಳಿಸಿ, ಹೊಸ ಜೀವನ ಕಟ್ಟಿಕೊಳ್ಳಲು ಅದನ್ನು ಬಳಸಿಕೊಳ್ಳುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ

ಈ ಮದುವೆಯ ವಿಡಿಯೋಗಳು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಂತರ Reddit‌ನಲ್ಲಿಯೂ ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅಪರಿಚಿತರೊಬ್ಬರ ಸಂತೋಷಕ್ಕಾಗಿ ಇಷ್ಟೊಂದು ಜನರು ಒಂದಾಗಿರುವುದನ್ನು ಕಂಡು ಹಲವರು ಭಾವುಕರಾಗಿದ್ದಾರೆ. ಇನ್ನು ಕೆಲವರು, ಮದುವೆಯ ದಿನದ ನಂತರವೂ ಈ ದಂಪತಿಗೆ ಹಾರೈಕೆ ಮುಂದುವರೆಯಲಿ ಎಂದು ಆಶಿಸಿದ್ದಾರೆ. ಆದರೆ ವೈರಲ್ ಆಗುವ ಘಟನೆಗಳನ್ನು ಕೆಲವರು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More