ತಾಲಿಬಾನ್ ಜೊತೆ ಪಾಕಿಸ್ತಾನ, ಚೀನಾ ಚರ್ಚೆ; ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿದ ರಷ್ಯಾ
ಅಫ್ಗಾನಿಸ್ತಾನದಲ್ಲಿ ನಡೆದಿರೋ ಕ್ಷಿಪ್ರ ಚಟುವಟಿಕೆಗಳು ಜಗತ್ತಿನ ದೇಶಗಳಿಗೆ ಆಂತಕ ಉಂಟು ಮಾಡ್ತಿವೆ. ಇದರ ನಡುವೆ ತಾಲಿಬಾನ್ ಕಾಬೂಲ್ ವಶಪಡಿಸಿಕೊಂಡಿದ್ರೂ.. ಇನ್ನೂ ಅಧಿಕಾರಕ್ಕೆ ಏರಿಲ್ಲ. ಇದರ ನಡುವೆ ಹಲವು ದೇಶಗಳು ತಾಲಿಬಾನ್ ಜೊತೆ ರಾಜತಾಂತ್ರಿಕ ಮಾತುಕತೆ ಆರಂಭಿಸಿವೆ. ಇವುಗಳಲ್ಲಿ ರಷ್ಯಾ, ಚೀನಾ, ಪಾಕಿಸ್ತಾನ ಮುಂಚೂಣಿಯಲ್ಲಿವೆ. ಯಾಕಾಗಿ ಈ ದೇಶಗಳು ಇಷ್ಟು ಆತುರ ಪಡ್ತಿವೆ ಎನ್ನುವ ಬಗ್ಗೆ ಇಲ್ಲಿದೆ ವರದಿ.
ಅಫ್ಗಾನಿಸ್ತಾನವನ್ನ(Afghanistan) ತನ್ನ ತೆಕ್ಕೆಗೆ ತೆಗೆದುಕೊಂಡಿರೋ ತಾಲಿಬಾನ್ (Taliban) ಉಗ್ರರು ಸದ್ಯಕ್ಕೆ ಅಧಿಕಾರವನ್ನ ಕೈ ವಶಪಡಿಸಿಕೊಂಡಿಲ್ಲ. ಅಧಿಕಾರ ಹಸ್ತಾಂತರದ ಕುರಿತು ಕತಾರ್ ರಾಜಧಾನಿ ದೋಹಾದಲ್ಲಿ ಚರ್ಚೆಗಳು ನಡೀತಿವೆ. ದೋಹಾದಿಂದ ಅಫ್ಗಾನಿಸ್ತಾನದ ಮುಂದಿನ ಅಧ್ಯಕ್ಷ ಅಂತಾ ಬಿಂಬಿತವಾಗಿರೋ ಅಬ್ದುಲ್ ಘನಿ ಬರಾದರ್.. ನಿನ್ನೆಯೇ ದೋಹಾದಿಂದ ಕಾಬೂಲ್ಗೆ ವಾಪಸ್ ಆಗಿದ್ದಾರೆ. ಇದರ ನಡುವೆ ಭಾರತವನ್ನ ಸದಾ ಒಂದಿಲ್ಲೊಂದು ರೀತಿಯಲ್ಲಿ ಕಾಡೋ ಚೀನಾ ಮತ್ತು ಪಾಕಿಸ್ತಾನದ ತಾಲಿಬಾನ್ ಜೊತೆ ಮಾತುಕತೆ ನಡೆಸ್ತಿವೆ. ಮತ್ತೊಂದೆಡೆ ಭಾರತಕ್ಕೆ ಮೊದಲಿನಿಂದಲೂ ಮಿತ್ರ ರಾಷ್ಟ್ರವಾಗಿರೋ ರಷ್ಯಾ ಕೂಡ ಚರ್ಚೆ ನಡೆಸ್ತಿದೆ. ಇದು ಹಲವು ಕುತೂಹಲಗಳಿಗೆ ಕಾರಣವಾಗಿದ್ದು, ತಮ್ಮ ಹಿತಾಸಕ್ತಿಗಳ ರಕ್ಷಣೆಗೆ ಈ ದೇಶಗಳು ಮುಂದಾಗಿರೋ ಕುರುಹುಗಳನ್ನ ತೋರಿಸ್ತಿದೆ.
ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರ ಅಮೆರಿಕ ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ ತಾಲಿಬಾನಿಗಳು ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಅಮೆರಿಕ ಮತ್ತು ರಷ್ಯಾ ನಂತರ ಜಗತ್ತಿನಲ್ಲಿ ತನ್ನ ಪ್ರಾಬಲ್ಯ ಮೆರೀತಿರೋ ಚೀನಾ.. ಏಷ್ಯಾದಲ್ಲಿ ತನಗೆ ಯಾವುದೇ ಅಡ್ಡಿ ಆತಂಕ ಇರಬಾರದು ಅನ್ನೋ ಮಹತ್ವಾಕಾಂಕ್ಷೆ ಹೊಂದಿದೆ. ಇದ್ರಿಂದ ಹಲವು ದೇಶಗಳಲ್ಲಿ ಹೂಡಿಕೆ ಮಾಡ್ತಿದೆ. ಅದ್ರಲ್ಲೂ.. ಯಾವತ್ತಿದ್ರೂ ಭಾರತದಿಂದ ತನಗೆ ತೊಂದರೆ ಎದುರಾಗುತ್ತೆ ಅಂತಾ ತಿಳಿದಿರೋ ಚೀನಾ ಏಷ್ಯಾದಲ್ಲಿ ಬೆಲ್ಟ್ ರೋಡ್ ಯೋಜನೆ ಜಾರಿ ಮಾಡಿದೆ. ಅದ್ರಲ್ಲೂ ಪಾಕಿಸ್ತಾನದ ಜೊತೆ ಸೇರಿ ಚೀನಾ-ಪಾಕಿಸ್ತಾನ ಆರ್ಥಿಕ ಯೋಜನೆ ರೂಪಿಸಿದೆ ಇಂತಾ ಚೀನಾ, ಅಫ್ಗಾನಿಸ್ತಾನದ ಜೊತೆ ಗಡಿ ಹಂಚಿಕೊಂಡಿದೆ ಇದೇ ಕಾರಣಕ್ಕೆ ತಾಲಿಬಾನಿಗಳಿಂದ ತೊಂದರೆ ಎದುರಾಗದಂತೆ ಭಾರಿ ಎಚ್ಚರಿಕೆ ವಹಿಸಿದೆ.
ತಾಲಿಬಾನ್ಗೆ ಚೀನಾದ ಸ್ನೇಹಹಸ್ತ..! ಕಾಬೂಲ್ ತಾಲಿಬಾನ್ ಕೈ ವಶವಾಗ್ತಿದ್ದಂತೆ, ಚೀನಾ ತಾಲಿಬಾನ್ ಜೊತೆ ಸಹಕಾರ, ಸ್ನೇಹಪರ ಸಂಬಂಧ ಮಂತ್ರ ಪಠಿಸುತ್ತಿದೆ. ಯಾಕಂದ್ರೆ, ಚೀನಾ ಅಫ್ಗಾನಿಸ್ತಾನದ ಜೊತೆ 76 ಕಿ.ಮೀ ಗಡಿ ಹಂಚಿಕೊಂಡಿದೆ. ಅದ್ರಲ್ಲೂ, ತಮಗೆ ಪ್ರತ್ಯೇಕ ದೇಶ ನೀಡುವಂತೆ ಚೀನಾದ ಉಯಿಘುರ್ ಮುಸಲ್ಮಾನರು ಹೋರಾಡುತ್ತಿದ್ದಾರೆ. ಇದೇ ಪ್ರಾಂತ್ಯದಲ್ಲಿ ಅಫ್ಗಾನಿಸ್ತಾನ ಗಡಿ ಇದ್ದು, ತಾಲಿಬಾನ್ ಉಯಿಘುರ್ಗಳಿಗೆ ಬೆಂಬಲ ನೀಡಿದ್ರೆ ಚೀನಾಗೆ ದೊಡ್ಡ ಸಮಸ್ಯೆ ಎದುರಾಗುತ್ತೆ. ಅಲ್ದೆ, ಏಷ್ಯಾದಲ್ಲಿ ದೊಡ್ಡಣ್ಣನಾಗಲು ಚೀನಾ ರೂಪಿಸಿರೋ ಬೆಲ್ಟ್ ರೋಡ್ ಯೋಜನೆಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದೆ. ಇದೆಲ್ಲಕ್ಕೂ ಮುಖ್ಯವಾಗಿ ಬಿಲಿಯನ್ ಡಾಲರ್ಗಟ್ಟಲೆ ದುಡ್ಡು ಸುರಿದು ರೂಪಿಸ್ತಿರೋ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದೆ. ಇದೆಲ್ಲದ್ರ ಜೊತೆಗೆ ಅಫ್ಗಾನಿಸ್ತಾನದಲ್ಲಿರೋ ಹೇರಳ ಖನಿಜ ಸಂಪತ್ತಿನ ಮೇಲೆ ಚೀನಾ ಕಣ್ಣು ಹಾಕಿದ್ದು, ಅದರ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ.
‘ಪಾಪಿ’ಸ್ತಾನದ ಹವಣಿಕೆ ಏನು? ತಾಲಿಬಾನ್ ಮತ್ತು ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರೋದ್ರಿಂದ, ಪಾಕಿಸ್ತಾನಕ್ಕೆ ಹೊಸ ಗೆಳೆಯನೊಬ್ಬ ಸಿಕ್ಕಂತಾಗಿದೆ. ತಾಲಿಬಾನ್ ಬಳಸಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯಲು ಪಾಕಿಸ್ತಾನ ಸಂಚು ಹೂಡಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ್ರೆ, ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ಹಣ ನೆರವು ಹರಿದು ಬರಲಿದೆ ಅಂತಾ ಪಾಕ್ ಸರ್ಕಾರ ಯೋಚಿಸ್ತಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಗಳ ಸ್ವರ್ಗ ಅಂತಾ ಪದೇಪದೆ ನಿರೂಪಿತವಾಗಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ್ರೆ, ತನ್ನ ಉಗ್ರ ಸಂಘಟನೆಗಳ ನೆಲೆಯನ್ನ ಅಫ್ಗಾನಿಸ್ತಾನಕ್ಕೆ ಶಿಫ್ಟ್ ಮಾಡಿ ಜಾಗತಿಕ ಮಟ್ಟದಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಪಾಕಿಸ್ತಾನ ಹವಣಿಸುತ್ತಿದೆ.
ನರಬುದ್ಧಿಯ ಪಾಕಿಸ್ತಾನ, ಬೆನ್ನಿಗೆ ಚೂರಿ ಹಾಕೋ ಚೀನಾ ತಾಲಿಬಾನ್ ಬೆಂಬಲಿಸಿರೋದಕ್ಕೆ ಯಾರೂ ಆಶ್ಚರ್ಯ ಪಡ್ತಿಲ್ಲ. ಆದ್ರೆ, ರಷ್ಯಾದಂತಾ ರಷ್ಯಾ ತಾಲಿಬಾನ್ ಬೆಂಬಲಿಸುತ್ತಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ. ಆದ್ರೆ, ಇದಕ್ಕೆ ಕಾರಣಗಳು ಇಲ್ಲದಿಲ್ಲ.
ಹಿತಾಸಕ್ತಿ ರಕ್ಷಣೆಗೆ ರಷ್ಯಾ ಆದ್ಯತೆ..! ರಷ್ಯಾ ಮಧ್ಯ ಏಷ್ಯಾದ ಹಲವು ರಾಷ್ಟ್ರಗಳಿಗೆ ಆರ್ಥಿಕ, ಸೇನಾ ನೆರವು ನೀಡುತ್ತಿದೆ. ಅಲ್ಲಿನ ಹಿತಾಸಕ್ತಿಗಳ ರಕ್ಷಣೆ ಜೊತೆಗೆ ಮಧ್ಯ ಏಷ್ಯಾದಲ್ಲಿ ರಷ್ಯಾ ಹೊಂದಿರುವ ಮಿಲಿಟರಿ ನೆಲೆಗಳನ್ನ ರಕ್ಷಿಸಿಕೊಳ್ಳಲು ತಾಲಿಬಾನ್ಗೆ ಬೆಂಬಲ ಸೂಚಿಸಿದೆ. ಇದರ ಜೊತೆಗೆ ಮಧ್ಯ ಏಷ್ಯಾದಲ್ಲಿ ಹಲವು ದಶಕಗಳಿಂದ ಅಸ್ಥಿರತೆಯ ಪರಿಸ್ಥಿತಿ ಇದೆ. ಇದನ್ನ ತಪ್ಪಿಸಲು ರಷ್ಯಾ ಕೂಡ ಪ್ರಯತ್ನಿಸುತ್ತಿದೆ. ಈ ಅಸ್ಥಿರತೆಯನ್ನ ತಪ್ಪಿಸಲು ಈ ಹಿಂದೆ ರಷ್ಯಾ ಅಂದ್ರೆ ಹಿಂದಿನ ಯೂನಿಯನ್ ಸೋವಿಯತ್ ಸೋಷಿಯಲಿಸ್ಟ್ ರಷ್ಯಾ, ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಮಾಡಿತ್ತು. ಅದ್ರಲ್ಲಿ ನಿರ್ಣಾಯಕ ಗೆಲುವು ಸಿಕ್ಕಿರಲಿಲ್ಲ. ಇದ್ರಿಂದ ರಷ್ಯಾ ಪಾಠ ಕಲಿತಿದೆ. ಜೊತೆಗೆ ತಾಲಿಬಾನ್ಗೆ ಬೆಂಬಲ ನೀಡೋ ಮೂಲಕ ಇಸ್ಲಾಮಿಕ್ ರಾಷ್ಟ್ರಗಳ ಮನಗೆಲ್ಲೋ ಪ್ಲ್ಯಾನ್ ಮಾಡಿದೆ.
ಚೀನಾ, ಪಾಕಿಸ್ತಾನ, ರಷ್ಯಾ ತಾಲಿಬಾನ್ ಅಧಿಕಾರ ಹಿಡಿಯೋದನ್ನ ಸ್ವಾಗತಿಸಿವೆ. ಇದರ ಜೊತೆಗೆ ಅಫ್ಘಾನಿಸ್ತಾನದ ನೆರೆಹೊರೆಯ ರಾಷ್ಟ್ರಗಳು ಕೂಡ ತಾಲಿಬಾನ್ಗೆ ಬೆಂಬಲ ಸೂಚಿಸಿವೆ. ಆದ್ರೆ, ಭಾರತ ಸದ್ಯದವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಕೈಗೊಳ್ಳುವ ನಿರ್ಧಾರ ಬೆಂಬಲಿಸಲು ಸಿದ್ಧವಾಗಿದ್ದು, ಸದ್ಯ ತಟಸ್ಥವಾಗಿದೆ. ಮುಂದೆ ಭಾರತವೂ ಕೂಡ ತಾಲಿಬಾನ್ಗೆ ಓಕೆ ಅನ್ನುತ್ತಾ ಅನ್ನೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಫ್ಗಾನಿಸ್ತಾನದ ಇಂದಿನ ಪರಿಸ್ಥಿತಿಗೆ ಕಾರಣವೇನು? ತಾಲಿಬಾನ್ ಈ ಮಟ್ಟಕ್ಕೆ ಬೆಳಯಲು ಅಮೆರಿಕ ಕಾರಣವಾಗಿದ್ದು ಹೇಗೆ? ಇಲ್ಲಿದೆ ಉತ್ತರ