ಸಿಂಧೂ ಜಲ ಒಪ್ಪಂದ ವಿವಾದ; ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಬಿಲಾವಲ್ ಭುಟ್ಟೋ
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಇಂದು (ಜುಲೈ 6) ಭಾರತದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, "ಪಾಕಿಸ್ತಾನವು ಎಲ್ಲಾ ರಂಗಗಳಲ್ಲೂ ಯುದ್ಧ ಮಾಡಲು ಸಿದ್ಧವಾಗಿದೆ" ಎಂದು ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದನ್ನು ಖಂಡಿಸಿ, 1960ರ 'ಸಿಂಧೂ ನದಿ ನೀರು ಒಪ್ಪಂದ' (IWT)ವನ್ನು ಭಾರತ ಸದ್ಯಕ್ಕೆ ಅಮಾನತುಗೊಳಿಸಿದೆ. ಈ ಬಗ್ಗೆ ಮತ್ತೊಮ್ಮೆ ಭಾರತ ಪುನರುಚ್ಚರಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಆಕ್ರೋಶ ಹೊರಹಾಕಿದೆ.

ಮುಖ್ಯಾಂಶಗಳು
- ಸಿಂಧೂ ಜಲ ಒಪ್ಪಂದ ಪುನಸ್ಥಾಪನೆಗೆ ಪಾಕ್ ಒತ್ತಾಯ
- ನೀರು ಕೊಡದಿದ್ದರೆ ಯುದ್ಧಕ್ಕೂ ಸಿದ್ಧ ಎಂದ ಪಾಕಿಸ್ತಾನದ ನಾಯಕ
- ಭಾರತಕ್ಕೆ ಬೆದರಿಕೆ ಹಾಕಿದ ಬಿಲಾವಲ್ ಭುಟ್ಟೋ
ಇಸ್ಲಮಾಬಾದ್, ಜುಲೈ 6: ಭಾರತ ಮತ್ತು ಪಾಕಿಸ್ತಾನದ ನಡುವಿನ ದಶಕಗಳ ಇತಿಹಾಸವಿರುವ ಸಿಂಧೂ ನದಿ ನೀರು ಒಪ್ಪಂದದ (Indus Waters Treaty) ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಎಲ್ಲಾ ರೀತಿಯಲ್ಲೂ ಹೋರಾಡಲು ಸಿದ್ಧವಾಗಿದೆ ಎಂದು ಅವರು ಯುದ್ಧದ ಬೆದರಿಕೆ ಹಾಕಿದ್ದಾರೆ.
ವಿವಾದಕ್ಕೆ ಕಾರಣವೇನು?:
ಭಾರತ ಮತ್ತು ಪಾಕಿಸ್ತಾನದ ನಡುವೆ 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ‘ಸಿಂಧೂ ನದಿ ನೀರು ಒಪ್ಪಂದ’ ಏರ್ಪಟ್ಟಿತ್ತು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಆ ಉಗ್ರರು ಪಾಕಿಸ್ತಾನದ ಆಶ್ರಯ ಪಡೆದವರು ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು
ಕಳೆದ 2025ರ ಏಪ್ರಿಲ್ 22ರಂದು 26 ಜನರ ಬಲಿಪಡೆದ ಭೀಕರ ‘ಪಹಲ್ಗಾಮ್ ಭಯೋತ್ಪಾದನಾ ದಾಳಿ’ಯ ನಂತರ, ಪಾಕಿಸ್ತಾನಕ್ಕೆ ಶಿಕ್ಷೆ ವಿಧಿಸುವ ಕಠಿಣ ಕ್ರಮಗಳ ಭಾಗವಾಗಿ ಭಾರತವು 2025 ರಲ್ಲಿ ಈ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಕಳೆದ ಶುಕ್ರವಾರವಷ್ಟೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಒಪ್ಪಂದದ ಮೇಲಿನ ಭಾರತದ ಕಟ್ಟುನಿಟ್ಟಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಬಿಲಾವಲ್ ಭುಟ್ಟೋ ಹೇಳಿದ್ದೇನು?:
ಪಾಕಿಸ್ತಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ಭುಟ್ಟೋ, ಭಾರತವು ಏಕಪಕ್ಷೀಯವಾಗಿ ಸಿಂಧೂ ಜಲ ಒಪ್ಪಂದವನ್ನು ಬದಲಾಯಿಸಲು ಅಥವಾ ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. “ನಮ್ಮ ಪಾಲಿನ ನೀರನ್ನು ಕಸಿದುಕೊಳ್ಳಲು ಭಾರತ ಪ್ರಯತ್ನಿಸಿದರೆ, ಪಾಕಿಸ್ತಾನವು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗಲು ಕೂಡ ಸಿದ್ಧವಿದೆ. ನಾವು ರಾಜತಾಂತ್ರಿಕವಾಗಿ ಮಾತ್ರವಲ್ಲದೆ, ಯುದ್ಧ ಸೇರಿದಂತೆ ಎಲ್ಲಾ ರೀತಿಯಲ್ಲೂ ಭಾರತವನ್ನು ಎದುರಿಸಲು ಸಿದ್ಧರಾಗಿದ್ದೇವೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
“ಪಾಕಿಸ್ತಾನವು ಯುದ್ಧಕ್ಕೆ ಸದಾ ಸಿದ್ಧವಾಗಿದೆ ಮತ್ತು ಸಿಂಧೂ ನದಿಯ ಹಕ್ಕುಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದು ನಮ್ಮ ವಿರುದ್ಧ ನದಿ ನೀರನ್ನು ಅಸ್ತ್ರವನ್ನಾಗಿ ಬಳಸುವ ಭಾರತದ ಪ್ರಯತ್ನವಾಗಿದೆ” ಎಂದು ಭುಟ್ಟೋ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು:
ರಾಜತಾಂತ್ರಿಕ ತಜ್ಞರ ಪ್ರಕಾರ, ಪಾಕಿಸ್ತಾನವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿದೆ. ದೇಶದ ಮೂಲಭೂತ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಬಿಲಾವಲ್ ಭುಟ್ಟೋ ಅವರಂತಹ ನಾಯಕರು ಭಾರತದ ವಿರುದ್ಧ ಇಂತಹ ಪ್ರಚೋದನಾಕಾರಿ ಮತ್ತು ಯುದ್ಧದ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗಿದೆ. ಸಿಂಧೂ ನದಿಯ ನೀರು ಪಾಕಿಸ್ತಾನದ ಕೃಷಿ ಮತ್ತು ಆರ್ಥಿಕತೆಗೆ ಜೀವಾಳವಾಗಿರುವುದರಿಂದ, ಭಾರತ ನದಿ ನೀರು ಬಿಡಲು ನಿರಾಕರಿಸುವುದು ಪಾಕಿಸ್ತಾನವನ್ನು ಮತ್ತಷ್ಟು ಕಂಗಾಲಾಗಿಸಿದೆ.
ಭಾರತದ ಕಟ್ಟುನಿಟ್ಟಿನ ನಿಲುವು:
ಭಾರತವು ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸಿರುವುದರಿಂದ ಸಿಂಧೂ ನದಿ ನೀರು ಒಪ್ಪಂದವು ಅಮಾನತುಗೊಂಡಿದೆ ಎಂದು ಹೇಳಿದ್ದರು. “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ತನ್ನ ಬೆಂಬಲವನ್ನು ಶಾಶ್ವತವಾದ ರೀತಿಯಲ್ಲಿ ಸಂಪೂರ್ಣವಾಗಿ ನಿಲ್ಲಿಸಬೇಕು” ಎಂದು ಜೈಸ್ವಾಲ್ ಒತ್ತಾಯಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




