AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು

Russian backed Chechen fighters to support Iran if US military attempts ground invasion: ಇರಾನ್ ಮೇಲೆ ಭೂದಾಳಿ ಮಾಡಲು ಅಮೆರಿಕ ಸಜ್ಜಾಗಿದೆ. ತನ್ನ ನೆಲಕ್ಕೆ ಕಾಲಿಡುವ ಅಮೆರಿಕನ್ ಸೈನಿಕರ ಮಾರಣಹೋಮ ಮಾಡುವುದಾಗಿ ಇರಾನ್ ಕೂಡ ಎಚ್ಚರಿಕೆ ಕೊಡುತ್ತಿದೆ. ಇದೇ ವೇಳೆ, ಇರಾನ್​ಗೆ ನೆರವು ನೀಡಲು ರಷ್ಯಾ ಬೇರೊಂದು ಮಾರ್ಗೋಪಾಯ ಹುಡುಕಿದಂತಿದೆ. ಅಮೆರಿಕನ್ ಸೈನಿಕರು ಇರಾನ್ ನೆಲಕ್ಕೆ ಕಾಲಿಟ್ಟರೆ ರಷ್ಯಾ ಬೆಂಬಲಿತ ಚೆಚನ್ ಹೋರಾಟಗಾರರು ಇರಾನ್ ಪರ ನಿಲ್ಲಬಹುದು ಎನ್ನಲಾಗುತ್ತಿದೆ.

ಅಮೆರಿಕದ ಭೂದಾಳಿ ಸಾಧ್ಯತೆ; ಇರಾನ್​ಗೆ ಬೆಂಬಲವಾಗಿ ನಿಲ್ಲಲು ಸಿದ್ಧವಾಗಿದ್ದಾರಾ ರಷ್ಯನ್ ಬೆಂಬಲಿತ ಚೆಚೆನ್ ಹೋರಾಟಗಾರರು
ರಮಜಾನ್ ಕಡಿರೋವ್Image Credit source: Press Association
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 31, 2026 | 8:01 PM

Share

ಮಾಸ್ಕೋ, ಮಾರ್ಚ್ 31: ಇರಾನ್ ಮೇಲೆ ಅಮೆರಿಕ ಭೂದಾಳಿಗೆ ಅಣಿಗೊಳ್ಳುತ್ತಿರುವ ಶಂಕೆ ಇದೆ. ಕೆಲ ದಿನಗಳಿಂದ ಅಮೆರಿಕವು ಇರಾನ್ ಸುತ್ತಲೂ ತನ್ನ ಸೈನಿಕರನ್ನು ಸಜ್ಜುಗೊಳಿಸುತ್ತಿದೆ. ಯಾವುದೇ ಕ್ಷಣದಲ್ಲೂ ಅದು ಗ್ರೌಂಡ್ ಇನ್ವೇಶನ್ ಅಥವಾ ಭೂ ದಾಳಿ (Ground Invasion) ಆರಂಭಿಸಬಹುದು ಎನ್ನುವ ವದಂತಿಗಳಿವೆ. ಇರಾನ್ ಕೂಡ ತಾನು ಈ ದಾಳಿ ಎದುರಿಸಲು ಸಿದ್ಧ ಇರುವುದಾಗಿ ಹೇಳುತ್ತಿದೆ. ಇದೇ ವೇಳೆ, ಇರಾನ್ ಮೇಲೆ ಅಮೆರಿಕವೇನಾದರೂ ಭೂದಾಳಿಗೆ ಇಳಿದರೆ ರಷ್ಯಾ ತನ್ನ ಚೆಚೆನ್ ಹೋರಾಟಗಾರರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಇದು ಇರಾನ್​ನ ಪ್ರೆಸ್ ಟಿವಿ ವಾಹಿನಿಯ ವರದಿಯಲ್ಲಿ ತಿಳಿಸಲಾಗಿರುವ ಸುದ್ದಿ.

ಈ ವರದಿ ಪ್ರಕಾರ, ಅಮೆರಿಕದ ತುಕಡಿಗಳು ಇರಾನ್ ನೆಲದ ಮೇಲೆ ಕಾಲಿಟ್ಟರೆ ತಾವು ಅಖಾಡಕ್ಕೆ ಇಳಿಯಲು ಸಿದ್ಧ ಇರುವುದಾಗಿ ಚೆಚನ್ಯಾದ ಮಿಲಿಟರಿ ಘಟಕಗಳು ಹೇಳಿವೆ ಎಂದು ಹೇಳಲಾಗುತ್ತಿದೆ. ಇದೇನಾದರೂ ನಿಜವೇ ಆದಲ್ಲಿ ಇರಾನ್ ಯುದ್ಧವು ಹೆಚ್ಚು ವ್ಯಾಪಕತೆ ಪಡೆಯುವ ಅಪಾಯ ಇದ್ದು, ಜಾಗತಿಕ ಆರ್ಥಿಕತೆಗೆ ಧಕ್ಕೆಯಾಗುವುದು ಹೆಚ್ಚಾಗುತ್ತದೆ.

ಇದನ್ನೂ ಓದಿ: ಅಮೆರಿಕದಿಂದ ತೈಲ ಪಡೆಯಿರಿ, ಇಲ್ಲವೇ ಹಾರ್ಮುಜ್​ಗೆ ಹೋಗಿ ಪಡೆದುಕೊಳ್ಳಿ: ಬ್ರಿಟನ್ ಮತ್ತಿತರ ರಾಷ್ಟ್ರಗಳನ್ನು ಚುಚ್ಚಿದ ಟ್ರಂಪ್

ಯಾರು ಈ ಚೆಚನ್ಯಾ ಹೋರಾಟಗಾರರು?

ಚೆಚನ್ಯಾ ರಿಪಬ್ಲಿಕ್ ಎನ್ನುವುದು ರಷ್ಯಾದ ಭಾಗವಾಗಿರುವ ಒಂದು ಪ್ರಾಂತ್ಯ. ಇದರ ಮುಖ್ಯಸ್ಥ ರಮಜಾನ್ ಕಡಿರೋವ್. ಈತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆಪ್ತ. ಕಡಿರೋವ್ ಅವರ ಬಳಿ ಪ್ರಬಲ ಮಿಲಿಟರಿ ಪಡೆಯೇ ಇದೆ. ಈ ಪಡೆಯು ರಷ್ಯಾಗಿಂತ ಹೆಚ್ಚಾಗಿ ಕಡಿರೋವ್​ಗೆ ನಿಷ್ಠವಾಗಿದೆ.

ಈ ಪಡೆಯ ಹಿಂದಿನ ಕಥೆಯೂ ರೋಚಕವೇ ಇದೆ. 80, 90ರ ದಶಕದಲ್ಲಿ ಸೋವಿಯತ್ ಯೂನಿಯನ್ ಒಡೆದಾಗ ಉಕ್ರೇನ್, ಪೋಲ್ಯಾಂಡ್ ಇತ್ಯಾದಿ ಹಲವು ದೇಶಗಳು ಸ್ವತಂತ್ರ ದೇಶಗಳಾಗಿ ಬೇರ್ಪಟ್ಟವು. ಚೆಚನ್ಯಾ ಕೂಡ ಬೇರೆಯಾಗಲು ಯತ್ನಿಸಿತು. ರಷ್ಯಾ ಮತ್ತು ಚೆಚನ್ಯಾ ಮಧ್ಯೆ ಎರಡು ಯುದ್ಧಗಳೇ ನಡೆದವು. ಎರಡನೇ ಯುದ್ಧದ ನಂತರ ರಷ್ಯಾ ಚೆಚನ್ಯಾದ ಪ್ರತ್ಯೇಕತಾವಾದಿಗಳ ಹುಟ್ಟಡಗಿಸಿತು. ರಷ್ಯಾ ಪರ ಇದ್ದ ಕಡಿರೋವ್ ಕುಟುಂಬವನ್ನು ಚೆಚನ್ಯಾದ ಆಡಳಿತಕ್ಕೆ ಕೂರಿಸಿತು.

ಇದನ್ನೂ ಓದಿ: ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ರಮಜಾನ್ ಕಡಿರೋವ್ ಅವರು ಬಹಳ ಗಟ್ಟಿಯಾದ ಮಿಲಿಟರಿ ಪಡೆಯನ್ನೇ ಕಟ್ಟಿಕೊಂಡಿದ್ದಾರೆ. ಈ ಪಡೆಗಳು ಕಡಿರೋವ್ ಅವರಿಗೆ ಪೂರ್ಣ ನಿಷ್ಠೆ ಹೊಂದಿವೆ. ಈ ಹೋರಾಟಗಾರರ ಬಳಿ ಭಾರೀ ಶಸ್ತ್ರಾಸ್ತ್ರಗಳಿವೆ. ಕಡಿರೋವ್ ಮೂಲಕ ರಷ್ಯಾದ ನಾಯಕತ್ವವು ಈ ಚೆಚನ್ಯಾ ಹೋರಾಟಗಾರರನ್ನು ಅಗತ್ಯವಿದ್ದೆಡೆ ಬಳಕೆ ಮಾಡುತ್ತದೆ. ಈಗ ಪುಟಿನ್ ಮನವಿ ಮೇರೆಗೆ ಕಡಿರೋವ್ ಅವರು ತಮ್ಮ ಪ್ರಬಲ ಮಿಲಿಟರಿ ಪಡೆಗಳನ್ನು ಇರಾನ್​ನಲ್ಲಿ ನಿಯೋಜಿಸಬಹುದು. ಇದರಿಂದ ರಷ್ಯಾ ನೇರವಾಗಿ ಯುದ್ಧಕ್ಕೆ ಧುಮುಕಿದಂತಾಗದೇ ಇದ್ದರೂ ಪರೋಕ್ಷವಾಗಿ ಇರಾನ್​ಗೆ ನೆರವು ಕೊಟ್ಟಂತಾಗುತ್ತದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us