ಟಿಬೆಟ್‌ನಲ್ಲಿ ಮತ್ತೆ ಒಡೆದ ಅಣೆಕಟ್ಟು: ನೇಪಾಳದಲ್ಲಿ 2ನೇ ಜಲಪ್ರಳಯದ ಭೀತಿ, ರಕ್ಷಣಾ ಪಡೆಗಳಿಗೆ ತುರ್ತು ಸ್ಥಳಾಂತರ ಅಲರ್ಟ್
Nepal Flood:ಟಿಬೆಟ್‌ನಲ್ಲಿ ಮತ್ತೊಂದು ಅಣೆಕಟ್ಟು ಒಡೆದಿದ್ದು, ನೇಪಾಳದಲ್ಲಿ ಎರಡನೇ ಪ್ರವಾಹದ ಭೀತಿ ಸೃಷ್ಟಿಸಿದೆ. ಹಿಮನದಿ ಕುಸಿತದಿಂದ ಉಂಟಾದ ಕೃತಕ ಸರೋವರ ಒಡೆದ ಕಾರಣ, ತ್ರಿಶೂಲಿ ನದಿ ತೀರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ. ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿದ್ದು, ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಈ ಘಟನೆ ಭಾರತಕ್ಕೂ ಎಚ್ಚರಿಕೆ ನೀಡಿದೆ.

ಕಠ್ಮಂಡು, ಆಗಸ್ಟ್ 28: ನೇಪಾಳ(Nepal) ಮತ್ತು ಟಿಬೆಟ್ ಗಡಿಯಲ್ಲಿ ಭೀಕರ ಹಿಮನದಿ ಕುಸಿತದಿಂದ ಉಂಟಾದ ವಿನಾಶಕಾರಿ ಪ್ರವಾಹ ಸಂಭವಿಸಿದ ಕೇವಲ ಎರಡು ದಿನಗಳಲ್ಲೇ, ಟಿಬೆಟ್ ಭಾಗದಲ್ಲಿ ಮತ್ತೊಂದು ಅಣೆಕಟ್ಟು ಒಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ನೇಪಾಳ ಅಧಿಕಾರಿಗಳು ಮತ್ತು ಪೊಲೀಸರು ಕಣಿವೆಯಲ್ಲಿ ಬೀಡುಬಿಟ್ಟಿರುವ ರಕ್ಷಣಾ ಸಿಬ್ಬಂದಿ, ಭದ್ರತಾ ಪಡೆಗಳು ಹಾಗೂ ಸ್ಥಳೀಯ ನಿವಾಸಿಗಳಿಗೆ ತಕ್ಷಣವೇ ಎತ್ತರದ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುರ್ತು ರೆಡ್ ಅಲರ್ಟ್ ಘೋಷಿಸಿದ್ದಾರೆ.
ಈಗಾಗಲೇ ನೇಪಾಳದಲ್ಲಿ ಕನಿಷ್ಠ 270 ಕ್ಕೂ ಹೆಚ್ಚು ಮತ್ತು ಟಿಬೆಟ್‌ನಲ್ಲಿ 3 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, 1,300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನೇಪಾಳ ಪೊಲೀಸರ ಅಧಿಕೃತ ಸೂಚನೆ: ಟಿಬೆಟ್ ಕಡೆಯಿಂದ ನೀರಿನ ಅಣೆಕಟ್ಟು ಮತ್ತೆ ಒಡೆದಿದೆ ಎಂಬ ಮಾಹಿತಿ ಬಂದಿದೆ. ನದಿ ಪಾತ್ರದಲ್ಲಿ ಪರಿಹಾರ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲಾ ರಕ್ಷಣಾ ತಂಡಗಳು, ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ನೇಪಾಳ ಪೊಲೀಸರು ತುರ್ತು ಸಂದೇಶ ರವಾನಿಸಿದ್ದಾರೆ.
ಕೃತಕ ಸರೋವರದ ಅಪಾಯ (Debris Dam Failure): ಬುಧವಾರ ಸಂಭವಿಸಿದ ಬೃಹತ್ ಹಿಮಪಾತದ ವೇಳೆ ನದಿಗೆ ಬಿದ್ದ ಅಪಾರ ಪ್ರಮಾಣದ ಕಲ್ಲು-ಮಣ್ಣು ಮತ್ತು ಹಿಮದ ಅವಶೇಷಗಳು ನದಿಯ ಹರಿವನ್ನು ಕೃತಕವಾಗಿ ತಡೆದಿದ್ದವು. ಈ ಅಸ್ಥಿರ ತಡೆಗೋಡೆಯ ಹಿಂದೆ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದ್ದು, ಅದು ಏಕಾಏಕಿ ಒಡೆದಿರುವುದು ಈ ಎರಡನೇ ಪ್ರವಾಹದ ಭೀತಿಗೆ ಕಾರಣವಾಗಿದೆ.
ಮತ್ತಷ್ಟು ಓದಿ: Nepal Flash Floods: ನೇಪಾಳ ಪ್ರವಾಹದಲ್ಲಿ ಕನ್ನಡಿಗರಿಗೆ ಆಘಾತ: 17 ಮಂದಿ ಸಂಪರ್ಕಕ್ಕೆ ಸಿಗದೆ ಆತಂಕ
ರಕ್ಷಣಾ ಪಡೆಗಳಿಗೂ ಜೀವಭಯ: ಮೊದಲ ಪ್ರವಾಹದಿಂದ ಈಗಾಗಲೇ ಕೆಸರು ಮತ್ತು ಮಣ್ಣಿನಲ್ಲಿ ಹೂತುಹೋಗಿರುವ ಕಣಿವೆಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿತ್ತು. ಆದರೆ ಎರಡನೇ ಅಲೆಯ ಭೀತಿಯಿಂದಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹಿಮ್ಮೆಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಪರ್ಕ ಕಡಿತ: ಸುಮಾರು 40 ಕಿ.ಮೀ ರಸ್ತೆಗಳು ಮತ್ತು ಪ್ರಮುಖ ಸೇತುವೆಗಳು ಸಂಪೂರ್ಣ ನಾಶವಾಗಿರುವುದರಿಂದ ರಕ್ಷಣಾ ವಾಹನಗಳು ಚಲಿಸಲು ಅಸಾಧ್ಯವಾಗಿದ್ದು, ನೇಪಾಳ ಸೇನೆಯ ಹೆಲಿಕಾಪ್ಟರ್ ಕಾರ್ಯಾಚರಣೆಗೂ ಪ್ರತಿಕೂಲ ಹವಾಮಾನ ಅಡ್ಡಿಯುಂಟುಮಾಡಿದೆ.
ಪೋಸ್ಟ್
Nepal authorities issue alert, say a dam on the Tibetan side has burst again
Urge security personnel, rescue teams & residents to move immediately to higher ground. pic.twitter.com/QDk8izvsf4
— Sidhant Sibal (@sidhant) August 28, 2026
ಭೂಕಂಪವಲ್ಲ, ಹಿಮನದಿ ಕುಸಿತ: ಆರಂಭದಲ್ಲಿ ಇದನ್ನು 4.4 ತೀವ್ರತೆಯ ಭೂಕಂಪ ಎಂದು ಭಾವಿಸಲಾಗಿದ್ದರೂ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ನಡೆಸಿದ ಮರುಪರಿಶೀಲನೆಯಲ್ಲಿ ಇದು ಬೃಹತ್ ಹಿಮನದಿ ಮತ್ತು ಕಲ್ಲುಬಂಡೆಗಳ ಕುಸಿತದಿಂದ ಉಂಟಾದ ಆಘಾತಕಾರಿ ಘಟನೆ ಎಂದು ಸ್ಪಷ್ಟಪಡಿಸಲಾಗಿದೆ.
ಭಾರತಕ್ಕೂ ಎಚ್ಚರಿಕೆ: ಈ ಭೋಟೆಕೋಶಿ-ತ್ರಿಶೂಲಿ ನದಿ ವ್ಯವಸ್ಥೆಯು ಅಂತಿಮವಾಗಿ ಭಾರತದಲ್ಲಿ ಗಂಡಕ್ ನದಿಯಾಗಿ ಹರಿಯುವುದರಿಂದ, ಬಿಹಾರ ಮತ್ತು ಉತ್ತರ ಪ್ರದೇಶದ ಗಡಿ ನದಿ ತೀರದ ಆಡಳಿತವೂ ಮುನ್ನೆಚ್ಚರಿಕೆ ವಹಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Fri, 28 August 26




