ಅರಬ್ಬಿ ಸಮುದ್ರದಲ್ಲಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಓರ್ವ ಸಿಬ್ಬಂದಿ ನಾಪತ್ತೆ
ಅರಬ್ಬಿ ಸಮುದ್ರದಲ್ಲಿ ಅಮೆರಿಕದ ಮಿಲಿಟರಿ MH-60S ಸೀ ಹಾಕ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ರಕ್ಷಿಸಲಾಗಿದ್ದು, ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇರಾನ್ ಜೊತೆಗಿನ ಉದ್ವಿಗ್ನತೆಯ ನಡುವೆಯೂ ಇದು ಶತ್ರುದಾಳಿಯಿಂದ ಸಂಭವಿಸಿಲ್ಲ ಎಂದು ಅಮೆರಿಕ ನೌಕಾಪಡೆ ಸ್ಪಷ್ಟಪಡಿಸಿದೆ. ನಾಪತ್ತೆಯಾದ ಸಿಬ್ಬಂದಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಮನಾಮ, ಜುಲೈ 02: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಜೊತೆಗಿನ ಉದ್ವಿಗ್ನತೆಯ ಮಧ್ಯೆಯೇ ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಗೆ (US Navy) ಸೇರಿದ ಯುದ್ಧ ಹೆಲಿಕಾಪ್ಟರ್ ಒಂದು ತುರ್ತು ಪರಿಸ್ಥಿತಿಯಿಂದಾಗಿ ಸಮುದ್ರದ ನೀರಿನ ಮೇಲೆಯೇ ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಅಮೆರಿಕದನೌಕಾಪಡೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮುಂಜಾನೆ 3.30 ರ ಸುಮಾರಿಗೆ ಸಂಭವಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ‘MH-60S ಸೀ ಹಾಕ್’ (Sea Hawk) ಎಂದು ಗುರುತಿಸಲಾಗಿದೆ. ಇದು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ದೈತ್ಯ ವಿಮಾನವಾಹಕ ಯುದ್ಧ ನೌಕೆ ‘ಯುಎಸ್ಎಸ್ ಜಾರ್ಜ್ ಎಚ್ಚ್ಡಬ್ಲ್ಯೂ ಬುಷ್’ ಗೆ ಸೇರಿದ್ದಾಗಿದೆ.
ನೀರಿನ ಮೇಲೆ ತುರ್ತು ಭೂಸ್ಪರ್ಶ ಮಾಡಿದ ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಸಿಬ್ಬಂದಿಗಳನ್ನು ರಕ್ಷಿಸಿ ಯುದ್ಧ ನೌಕೆಗೆ ಕರೆತರಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ನಾಲ್ಕನೇ ಸಿಬ್ಬಂದಿಯ ಪತ್ತೆಗಾಗಿ ಅಮೆರಿಕ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ಸಮುದ್ರದಾದ್ಯಂತ ತೀವ್ರ ಹುಡುಕಾಟ ನಡೆಸುತ್ತಿವೆ.
ಮತ್ತಷ್ಟು ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ
ಪ್ರಸ್ತುತ ಮಧ್ಯಪ್ರಾಚ್ಯ ಮತ್ತು ಕೊಲ್ಲಿ ವಲಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧದ ವಾತಾವರಣ ಇರುವುದರಿಂದ ಈ ಹೆಲಿಕಾಪ್ಟರ್ ಮೇಲೆ ಶತ್ರು ದೇಶಗಳು ದಾಳಿ ಮಾಡಿವೆಯೇ ಎಂಬ ಅನುಮಾನ ಮೂಡಿತ್ತು. ಆದರೆ, ಈ ತುರ್ತು ಭೂಸ್ಪರ್ಶಕ್ಕೆ ಯಾವುದೇ ಶತ್ರು ಪಡೆಗಳ ‘ಪ್ರತಿಕೂಲ ಕ್ರಮ’ ಅಥವಾ ದಾಳಿ ಕಾರಣವಲ್ಲ ಎಂದು ಅಮೆರಿಕದ ನೌಕಾಪಡೆ ಸ್ಪಷ್ಟಪಡಿಸಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ಪ್ರಗತಿಯಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬೃಹತ್ ಸೈನಿಕ ಜಮಾವಣೆ ಅಮೆರಿಕದ ಈ ಬೃಹತ್ ‘ಯುಎಸ್ಎಸ್ ಜಾರ್ಜ್ ಬುಷ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್’ ಮಾರ್ಚ್ 31 ರಂದು ಅಮೆರಿಕದಿಂದ ಹೊರಟು, ಆಫ್ರಿಕಾ ಖಂಡವನ್ನು ಸುತ್ತಿದ್ದೂ ಏಪ್ರಿಲ್ 23 ರ ಹೊತ್ತಿಗೆ ಮಧ್ಯಪ್ರಾಚ್ಯದ ಸಮುದ್ರ ವಲಯವನ್ನು ಪ್ರವೇಶಿಸಿತ್ತು. ಇರಾನ್ ಜೊತೆಗಿನ ಇತ್ತೀಚಿನ ಸಂಘರ್ಷಗಳ ಹಿನ್ನೆಲೆಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ಹಡಗುಗಳ ಸುರಕ್ಷತೆ ಮತ್ತು ಕಡಲ ಭದ್ರತೆಯ ಉಸ್ತುವಾರಿಯನ್ನು ಈ ಪಡೆ ನೋಡಿಕೊಳ್ಳುತ್ತಿದೆ.
ಅಪಘಾತಕ್ಕೀಡಾದ ‘MH-60S ಸೀ ಹಾಕ್’ ಹೆಲಿಕಾಪ್ಟರ್ ಅನ್ನು ಸಾಮಾನ್ಯವಾಗಿ ಮಿಲಿಟರಿ ಲಾಜಿಸ್ಟಿಕ್ಸ್ ಬೆಂಬಲ, ಶತ್ರು ಹಡಗುಗಳ ಮೇಲಿನ ನಿಗಾ ಮತ್ತು ಇಂತಹ ತುರ್ತು ‘ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ’ (Search and Rescue) ಬಳಸಲಾಗುತ್ತದೆ. ಸದ್ಯ ನಾಪತ್ತೆಯಾಗಿರುವ ಸೈನಿಕನನ್ನು ಜೀವಂತವಾಗಿ ಹೊರತರಲು ಅಮೆರಿಕ ಪಡೆಗಳು ಸಮಯದ ವಿರುದ್ಧ ಓಟ ನಡೆಸುತ್ತಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




