Closing bell: ದಿನದ ಗರಿಷ್ಠ ಮಟ್ಟದಿಂದ 839 ಪಾಯಿಂಟ್ಸ್ ನೆಲ ಕಚ್ಚಿದ ಸೆನ್ಸೆಕ್ಸ್
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಾರ್ಚ್ 18ನೇ ತಾರೀಕಿನ ಗುರುವಾರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಕುಸಿತಕ್ಕೆ ಕಾರಣವಾದರೂ ಏನು? ಇಲ್ಲಿದೆ ವಿವರಣೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಗುರುವಾರ (ಮಾರ್ಚ್ 18, 2021) ನಾಟಕೀಯ ಬೆಳವಣಿಗೆ ಕಂಡುಬಂತು. ದಿನದ ಬಹುತೇಕ ಸಮಯ ಗಳಿಕೆಯಲ್ಲೇ ವಹಿವಾಟು ನಡೆಸುತ್ತಿದ್ದ ಸೂಚ್ಯಂಕಗಳು ದಿನದ ಕೊನೆಗೆ ಇಳಿಕೆ ದಾಖಲಿಸಿದವು. ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟದಿಂದ 839 ಪಾಯಿಂಟ್ಸ್ ನೆಲ ಕಚ್ಚಿದರೆ, ನಿಫ್ಟಿ ಸೂಚ್ಯಂಕವು ದಿನದ ಕನಿಷ್ಠ ಮಟ್ಟ 14,478.60 ಪಾಯಿಂಟ್ ಕಂಡಿತು. ಬೆಳಗ್ಗೆ ಸಕಾರಾತ್ಮಕವಾಗಿಯೇ ದಿನದ ವಹಿವಾಟು ಶುರುವಾಗಿತ್ತು. ಅಮೆರಿಕದ ಕೇಂದ್ರೀಯ ಬ್ಯಾಂಕ್ ಕಡಿಮೆ ಬಡ್ಡಿ ದರವನ್ನು ಮುಂದುವರಿಸುವ ಬಗ್ಗೆ ಸೂಚನೆ ನೀಡಿದ್ದರ ಬಲ ಸಿಕ್ಕಿತು. ಆದರೆ ಹೂಡಿಕೆದಾರರು ಲಾಭ ನಗದೀಕರಣಕ್ಕೆ (ಪ್ರಾಫಿಟ್ ಬುಕ್ಕಿಂಗ್) ಮುಂದಾದರು.
ಗುರುವಾರದ ದಿನದ ಕೊನೆಗೆ ಸೆನ್ಸೆಕ್ಸ್ 585 ಪಾಯಿಂಟ್ ಅಥವಾ ಶೇ 1.17ರಷ್ಟು ಇಳಿದು, 49,216.52 ಪಾಯಿಂಟ್ನಲ್ಲಿ ಹಾಗೂ ನಿಫ್ಟಿ 163 ಪಾಯಿಂಟ್ ಅಥವಾ ಶೇ 1.11ರಷ್ಟು ಕುಸಿದು, 14,557.85ರಲ್ಲಿ ವ್ಯವಹಾರ ಮುಗಿಸಿದವು. ಈ ಮೂಲಕ ಭಾರತೀಯ ಮಾರುಕಟ್ಟೆಯ ನಷ್ಟದ ಓಟ ಸತತ ಐದನೇ ದಿನಕ್ಕೆ ವಿಸ್ತರಿಸಿತು. ಈ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 5ರಷ್ಟು ನಷ್ಟ ಅನುಭವಿಸಿವೆ. ಮಾರುಕಟ್ಟೆ ಇಳಿಕೆಗೆ ಕಾರಣವಾದ ನಾಲ್ಕು ಸಂಗತಿಗಳು ಹೀಗಿವೆ:
ಬಾಂಡ್ ಯೀಲ್ಡ್ನಲ್ಲಿ ಹೆಚ್ಚಳ: ಅಮೆರಿಕದ ಬಾಂಡ್ ಯೀಲ್ಡ್ನಲ್ಲಿ ಹೆಚ್ಚಳವಾಗಿ, ಈಕ್ವಿಟಿಯಲ್ಲಿ ಮಾರಾಟ ಕಂಡುಬಂತು. ಅಮೆರಿಕದ ಹತ್ತು ವರ್ಷದ ಬಾಂಡ್ ಯೀಲ್ಡ್ ಶೇ 5ರಷ್ಟು ಏರಿಕೆ ಕಂಡು, 1.7 ಅನ್ನು ದಾಟಿದೆ. ಈ ಕಾರಣಕ್ಕೆ ಭಾರತ ಹಾಗೂ ಅಮೆರಿಕದ ಬಾಂಡ್ ಮೇಲಿನ ಯೀಲ್ಡ್ಗಳ ವ್ಯತ್ಯಾಸ ಕಡಿಮೆ ಮಾಡಿದೆ. ಇದರಿಂದ ಎಫ್ಐಐ ಹರಿವಿನ ಮೇಲೆ ಪರಿಣಾಮ ಆಗಿದೆ. ಸದ್ಯಕ್ಕೆ ಏರುತ್ತಿರುವ ಅಮೆರಿಕ ಬಾಂಡ್ ಯೀಲ್ಡ್ ಮತ್ತು ಕಚ್ಚಾ ತೈಲದಲ್ಲಿನ ಬೆಲೆ ಏರಿಕೆ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ವಿಶ್ಲೇಷಕರು.
ಕೋವಿಡ್- 19 ಪ್ರಕರಣದಲ್ಲಿ ಹೆಚ್ಚಳ: ಹೊಸದಾಗಿ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರ್ಥಿಕ ಪುನಶ್ಚೇತನ ದಾರಿ ತಪ್ಪಬಹುದು ಎಂಬ ಆತಂಕ ಇದೆ. ಗುರುವಾರದಂದು ಭಾರತದಲ್ಲಿ 35,871 ಕೋವಿಡ್- 19 ಪ್ರಕರಣ ದಾಖಲಾಗಿವೆ. ಕಳೆದ 100ಕ್ಕೂ ಹೆಚ್ಚು ದಿನಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಕರಣ ಇದು.
50- DMA ಪ್ರಮುಖ ಸಪೋರ್ಟ್ನಿಂದ ಕೆಳಗೆ ಕುಸಿದ ನಿಫ್ಟಿ: ನಿಫ್ಟಿ 50 ಸೂಚ್ಯಂಕವು 50 ದಿನಗಳ ಸರಾಸರಿಯ ಕೆಳಗೆ ಇಳಿದಿದೆ. ಸತತ ಐದನೇ ದಿನದ ಕುಸಿತದ ಕಾರಣಕ್ಕೆ ಸೂಚ್ಯಂಕವು 14,800 ಪಾಯಿಂಟ್ನಿಂದ ಕೆಳಗೆ ಬಂದಿದೆ.
ಬ್ಯಾಂಕಿಂಗ್, ಐಟಿ, ಫಾರ್ಮಾದಲ್ಲಿ ಮಾರಾಟ ಒತ್ತಡ: ಬಹುತೇಕ ಬ್ಯಾಂಕಿಂಗ್ ಹೆವಿವೇಯ್ಟ್ಗಳು ಕುಸಿತ ಕಂಡವು. ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್ ಸೂಚ್ಯಂಕಗಳು ತಲಾ ಒಂದು ಪರ್ಸೆಂಟ್ಗೂ ಹೆಚ್ಚು ಕುಸಿದವು. ಪಿಎಸ್ಯು ಬ್ಯಾಂಕ್ ಹತ್ತಿರಹತ್ತಿರ ಶೇ 2ರಷ್ಟು ಕುಸಿಯಿತು. ನಿಫ್ಟಿ ಐಟಿ ಶೇ 3ಕ್ಕೂ ಹೆಚ್ಚು ಹಾಗೂ ನಿಫ್ಟಿ ಫಾರ್ಮಾ ಶೇ 2ಕ್ಕೂ ಹೆಚ್ಚು ಇಳಿಕೆ ಕಂಡವು.
ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಐಟಿಸಿ ಬಜಾಜ್ ಆಟೋ ಹಿಂಡಾಲ್ಕೋ ಗ್ರಾಸಿಮ್ ಮಹೀಂದ್ರಾ ಅಂಡ್ ಮಹೀಂದ್ರಾ
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಎಚ್ಸಿಎಲ್ ಟೆಕ್ನಾಲಜೀಸ್ ಇನ್ಫೋಸಿಸ್ ಡಾ ರೆಡ್ಡೀಸ್ ಲ್ಯಾಬ್ಸ್ ಡಿವೀಸ್ ಲ್ಯಾಬ್ಸ್ ಹೀರೋ ಮೋಟೋಕಾರ್ಪ್
ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು