Coffee Excellence: ಕಾಫಿ ಮಂಡಳಿಯಿಂದ ಬೆಂಗಳೂರಿನಲ್ಲಿ ಎಕ್ಸಲೆಂಟ್ ಸೆಂಟರ್ ಸ್ಥಾಪನೆಗೆ ಪ್ರಸ್ತಾವ
Coffee Board of India: ಬೆಂಗಳೂರಿನಲ್ಲಿ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆ ಮಾಡುವುದಾಗಿ ಭಾರತೀಯ ಕಾಫಿ ಮಂಡಳಿ ಪಸ್ತಾವನೆ ಸಲ್ಲಿಸಿದೆ. ಕಾಫಿ ಮಂಡಳಿ ಬೆಂಗಳೂರಿನಲ್ಲಿ ಕಾಫಿ ಕ್ವಾಲಿಟಿ ಮ್ಯಾನೇಜ್ಮೆಂಟ್ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ. ಪಿಜಿ ಡಿಪ್ಲೊಮಾ ಕೋರ್ಸ್ಗೆ ಸದ್ಯ 15 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದ್ದು, ಈ ಸಂಖ್ಯೆಯನ್ನು ಕನಿಷ್ಠ 100ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದೆ.
ಬೆಂಗಳೂರು, ಫೆಬ್ರುವರಿ 12: ಕಾಫಿ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಬೇಕೆ? ಇಗೋ ಬರುತ್ತಿದೆ ಒಳ್ಳೊಳ್ಳೆಯ ಅವಕಾಶ. ಕಾಫಿ ಜನಪ್ರಿಯತೆ ಹೆಚ್ಚುತ್ತಿದ್ದು, ಈ ಕ್ಷೇತ್ರದಲ್ಲಿ ನುರಿತ ವೃತ್ತಿಪರರಿಗೆ ಉದ್ಯೋಗಾವಕಾಶ ಹೆಚ್ಚುತ್ತಿದೆ. ಕಾಫಿ ನಂಟು ಹೆಚ್ಚು ಇರುವ ಬೆಂಗಳೂರಿನಲ್ಲಿ ಈಗ ಕಾಫಿ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆಗೆ ಪ್ರಸ್ತಾಪ ಬಂದಿದೆ. ಭಾರತೀಯ ಕಾಫಿ ಮಂಡಳಿ ಇಂಥದ್ದೊಂದು ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಾಫಿ’ಯಲ್ಲಿ ಕಾಫಿ ಕುರಿತ ಕಿರು ಅವಧಿ ಕೋರ್ಸ್ಗಳನ್ನು ಆರಂಭಿಸಲು ಕಾಫಿ ಮಂಡಳಿ ಉದ್ದೇಶಿಸಿದೆ.
‘ಕಾಫಿ ಕ್ವಾಲಿಟಿ ಮ್ಯಾನೇಜ್ಮೆಂಟ್ನಲ್ಲಿ ನಾವು ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸುತ್ತಿದ್ದೇವೆ. ಇದಕ್ಕೆ ಬಹಳ ಬೇಡಿಕೆ ಇದೆ. ಬೆಂಗಳೂರಿನ ಕಾಫಿ ಕ್ವಾಲಿಟಿ ಇನ್ಸ್ಟಿಟ್ಯೂಟ್ನ್ಲಿ ಈ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಚಿಕ್ಕಮಗಳೂರಿನಲ್ಲಿರುವ ಸೆಂಟ್ರಲ್ ಕಾಫಿ ರಿಸರ್ಚ್ ಇನ್ಸ್ಟಿಟ್ಯೂಟ್ಗೆ (ಸಿಸಿಅರ್ಐ) ಮೂರು ತಿಂಗಳ ಭೇಟಿ ನೀಡಿ ಕಲಿಯಬಹುದು. ಕೆಫೆಗಳಿಗೆ ಹೋಗುವುದು, ರೋಸ್ಟರಿಗಳನ್ನು ಅರಿಯುವುದು, ಕಾಫಿ ಪ್ಯಾಕೇಜಿಂಗ್ ಮಾಡುವುದು, ಕಾಫಿ ಮಾರುಕಟ್ಟೆ ಪ್ರಚಾರ ಇತ್ಯಾದಿ ಔದ್ಯಮಿಕ ಅನುಭವಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ,’ ಎಂದು ಭಾರತೀಯ ಕಾಫಿ ಮಂಡಳಿ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ ಹೇಳುತ್ತಾರೆ.
ಬೆಂಗಳೂರಿನಲ್ಲಿ ಸದ್ಯ ನಡೆಸಲಾಗುತ್ತಿರುವ ಈ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗೆ ಬಹಳ ಬೇಡಿಕೆ ಇದೆಯಂತೆ. ಆದರೆ, ಒಂದು ಕೋರ್ಸ್ನಲ್ಲಿ 15 ಮಂದಿ ವಿದ್ಯಾರ್ಥಿಗಳಿಗಷ್ಟೇ ಅವಕಾಶ ಇರುತ್ತದೆ. ಈ ಕೋರ್ಸ್ಗೆ ಒಮ್ಮೆಗೆ 500ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಅವರಲ್ಲಿ 15 ಮಂದಿಯನ್ನು ಕೋರ್ಸ್ಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಕಾಫಿ ಬೋರ್ಡ್ ಸಿಇಒ ತಿಳಿಸುತ್ತಾರೆ.
ಇದನ್ನೂ ಓದಿ: ಶ್ರೀಲಂಕಾ, ಮಾರಿಷಸ್ನಲ್ಲೂ ಭಾರತದ ಯುಪಿಐ, ರುಪೇ ಕಾರ್ಡ್ ಸೇವೆಗೆ ಚಾಲನೆ
ಕಾಫಿ ಗುಣಮಟ್ಟ ನಿರ್ವಹಣೆಯ ಪಿಜಿ ಡಿಪ್ಲೊಮಾ ಕೋರ್ಸ್ ಸೇರಬಯಸುವ ಅಭ್ಯರ್ಥಿಗಳು ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಆಹಾರ ವಿಜ್ಞಾನ, ಜೈವಿಕ ವಿಜ್ಞಾನ ಅಥವಾ ಕೃಷಿ ವಿಜ್ಞಾನ ವಿಷಯಗಳಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು. ಅವರ ಶೈಕ್ಷಣಿಕ ಸಾಧನೆ ಉತ್ತಮವಾಗಿರಬೇಕು. ಸಂದರ್ಶನ ಇತ್ಯಾದಿಯಲ್ಲಿ ಅಭ್ಯರ್ಥಿಗಳ ಸಾಧನೆಯನ್ನು ಪರಿಶೀಲಿಸಿ ಆ ಬಳಿಕ ಅವರಿಗೆ ಕೋರ್ಸ್ಗೆ ಸೇರಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಪಿಜಿ ಡಿಪ್ಲೊಮಾ ಕೋರ್ಸ್ ಮುಗಿಸುವ ಅಭ್ಯರ್ಥಿಗಳಿಗೆ ಕೆಲವೇ ದಿನಗಳಲ್ಲಿ ಎಂಎನ್ಸಿ ಕಂಪನಿಗಳಲ್ಲಿ ಪ್ಲೇಸ್ಮೆಂಟ್ಗೆ ಅವಕಾಶ ಸಿಗುತ್ತದೆ. ಕೆಲವರು ಮಿಡಲ್ ಈಸ್ಟ್ ದೇಶಗಳಲ್ಲಿ ಉದ್ಯೋಗ ಗಿಟ್ಟಿಸುತ್ತಾರೆ. ಮಾರುಕಟ್ಟೆ ಬೆಳೆಯುತ್ತಿರುವುದರಿಂದ ಕೋರ್ಸ್ಗೆ ಇನ್ನಷ್ಟು ಸೀಟ್ಗಳನ್ನು ಸೇರಿಸುವ ಅವಶ್ಯಕತೆ ಇದೆ. ಸದ್ಯ 15 ಮಂದಿಗೆ ಮಾತ್ರವೇ ಅವಕಾಶ ಇದೆ. ಇದನ್ನು ಕನಿಷ್ಠ 100 ಅಭ್ಯರ್ಥಿಗಳಿಗೆ ವಿಸ್ತರಿಸಬೇಕು ಎನ್ನುವ ಪ್ರಸ್ತಾಪವನ್ನೂ ಮಾಡಲಾಗಿದೆ.
ಈಗ ಕಾಫಿ ಎಕ್ಸಲೆನ್ಸ್ ಸೆಂಟರ್ ಸ್ಥಾಪನೆಗೆ ಮಂಡಳಿ ಪ್ರಸ್ತಾಪ ಮಾಡಿದೆ. ವಿಶೇಷ ಕಾಫಿ ಕೇಂದ್ರ ಹಾಗೂ ಕಾಫಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗೆ ಕಾಫಿ ಮಂಡಳಿಯ ಎಕ್ಸ್ಪೆಂಡಿಚರ್ ಫೈನಾನ್ಸ್ ಕಮಿಟಿ ಪ್ರಸ್ತಾಪಿಸಿದೆ.
ಮುಂದಿನ ಐದು ವರ್ಷದಲ್ಲಿ ಕೌಶಲ್ಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ಕಾಫಿ ಮಂಡಳಿ ಹಮ್ಮಿಕೊಳ್ಳುತ್ತಿದೆ. ಇದರಲ್ಲಿ ಸ್ವಸಹಾಯ ಸಂಘ ಮತ್ತು ಗ್ರಾಮೀಣ ಭಾಗದಿಂದ ಒಂದು ಲಕ್ಷ ಮಹಿಳೆಯರಿಗೆ ಕಾಫಿ ತಯಾರಿಸುವ ಸರಿಯಾದ ವಿಧಾನದ ಕುರಿತು ತರಬೇತಿ ನೀಡಲು ಯೋಜಿಸಲಾಗಿದೆ.
ಇದನ್ನೂ ಓದಿ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 20ರಷ್ಟು ಏರಿಕೆ; ಐಟಿಆರ್ ಸಲ್ಲಿಸುವವರ ಸಂಖ್ಯೆ 10 ವರ್ಷದಲ್ಲಿ ದ್ವಿಗುಣ
ಕಾಫಿ ಉದ್ಯಮದಲ್ಲಿ ಬ್ಯಾರಿಸ್ಟಾಗಳ (ಕಾಫಿ ತಯಾರಿಸುವವರು) ಕೊರತೆ ಇದೆ. ಮುಂದಿನ ಮೂರು ವರ್ಷದಲ್ಲಿ ಒಂದು ಸಾವಿರ ಬಾರಿಸ್ಟಾಗಳಿಗೆ ತರಬೇತಿ ನೀಡಲು ಯೋಜನೆ ಹಾಕಲಾಗಿದೆ. ಇಲ್ಲಿಯವರೆಗೆ 150 ಮಂದಿಗೆ ತರಬೇತಿ ನೀಡಲಾಗಿದೆ ಎಂದು ಕಾಫಿ ಮಂಡಳಿ ಸಿಇಒ ಜಗದೀಶ ಹೇಳಿದ್ದಾರೆ.
ಕಾಫಿ ಶಾಸ್ತ್ರ ಅಧ್ಯಯನ
ಕಾಫಿ ಮಂಡಳಿ ಈಗ ಒಂದು ವರ್ಷದ ಕಾಫಿ ಶಾಸ್ತ್ರ ಹೆಸರಿನ ಕಿರು ಅವಧಿ ಕೋರ್ಸ್ವೊಂದನ್ನು ನಡೆಸುತ್ತಿದೆ. ಮಾರ್ಚ್ 18ರಿಂದ 22ರವರೆಗೆ ಈ ಕೋರ್ಸ್ಗೆ ಪ್ರವೇಶಾವಕಾಶ ಇದೆ. ಕಾಫಿ ರೋಸ್ಟಿಂಗ್ನ ಹೊಸ ತಂತ್ರಜ್ಞಾನ ಬಗ್ಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವುದು ಈ ಕೋರ್ಸ್ನ ಉದ್ದೇಶ. ಸದ್ಯ ಇದು ಪ್ರಾಯೋಗಿಕವಾಗಿ ಮಾತ್ರ ಇದೆ. ಯಶಸ್ವಿಯಾದಲ್ಲಿ ಮುಂದಿನ ವರ್ಷಗಳಲ್ಲಿ ಈ ಕೋರ್ಸ್ ಮುಂದುವರಿಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Mon, 12 February 24