ಹವಾಮಾನ ಬದಲಾವಣೆ ಹೋರಾಟ; ಬಡರಾಷ್ಟ್ರಗಳಿಗೆ ವರ್ಷಕ್ಕೆ 300 ಬಿಲಿಯನ್ ಡಾಲರ್ ಧನಸಹಾಯಕ್ಕೆ ಸಿಒಪಿ29 ಒಪ್ಪಿಗೆ; ಭಾರತದ ಅಸಮ್ಮತಿ

Climate change fight: ಹವಾಮಾನ ಬದಲಾವಣೆ ಸಮಸ್ಯೆ ನಿಗ್ರಹದ ಜಾಗತಿಕ ಹೋರಾಟದ ಭಾಗವಾಗಿ ನಡೆದ ಸಿಒಪಿ29 ಸಭೆಯಲ್ಲಿ ಒಪ್ಪಂದವೊಂದು ನಡೆದಿದೆ. ಅದರ ಪ್ರಕಾರ ಶ್ರೀಮಂತ ದೇಶಗಳು ಹವಾಮಾನ ಹೋರಾಟಕ್ಕೆ ನೆರವಾಗಲು ಬಡ ರಾಷ್ಟ್ರಗಳಿಗೆ ವರ್ಷಕ್ಕೆ 300 ಬಿಲಿಯನ್ ಡಾಲರ್ ನೀಡಬೇಕು. ಆದರೆ, ಇದು ತೀರಾ ಕಡಿಮೆ ಮೊತ್ತವಾಯಿತು ಎಂದು ಸಿಒಪಿ29 ಸಭೆಯ ನಿರ್ಧಾರಕ್ಕೆ ಭಾರತ ಅಸಮ್ಮತಿ ವ್ಯಕ್ತಪಡಿಸಿದೆ.

ಹವಾಮಾನ ಬದಲಾವಣೆ ಹೋರಾಟ; ಬಡರಾಷ್ಟ್ರಗಳಿಗೆ ವರ್ಷಕ್ಕೆ 300 ಬಿಲಿಯನ್ ಡಾಲರ್ ಧನಸಹಾಯಕ್ಕೆ ಸಿಒಪಿ29 ಒಪ್ಪಿಗೆ; ಭಾರತದ ಅಸಮ್ಮತಿ
ಸಿಒಪಿ29
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 4:13 PM

ನವದೆಹಲಿ, ನವೆಂಬರ್ 24: ಶ್ರೀಮಂತ ದೇಶಗಳು ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಬಡದೇಶಗಳಿಗೆ ವರ್ಷಕ್ಕೆ 300 ಬಿಲಿಯನ್ ಡಾಲರ್ ಧನಸಹಾಯ ಒದಗಿಸಲು ಬದ್ಧವಾಗಿವೆ. ಈ ಸಂಬಂಧ ಸಿಒಪಿ20 ಸಮ್ಮೇಳನದಲ್ಲಿ ಒಪ್ಪಂದಕ್ಕೆ ಸಮ್ಮತಿ ಸಿಕ್ಕಿದೆ. 2035ರಷ್ಟರಲ್ಲಿ ಶ್ರೀಮಂತ ದೇಶಗಳು ಬಡ ದೇಶಗಳಿಗೆ ವಾರ್ಷಿಕವಾಗಿ 300 ಬಿಲಿಯನ್ ಡಾಲರ್ ಹಣವನ್ನು ನೀಡತೊಡಗಲಿವೆ. ಅಜರ್ಬೈಜಾನ್​ನ ಬಾಕುವಿನಲ್ಲಿ ನಡೆದ ಸಿಒಪಿ29 ಸಭೆಯಲ್ಲಿ ಈ ತೀರ್ಮಾನವಾಗಿದೆ. ಆದರೆ, ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತ ಈ ಮೊತ್ತಕ್ಕೆ ವಿರೋಧ ವ್ಯಕ್ತಪಡಿಸಿದೆ.

ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಚಾಂದನಿ ರೈನಾ ಅವರು 300 ಬಿಲಿಯನ್ ಡಾಲರ್ ಮೊತ್ತ ತೀರಾ ನಿಕೃಷ್ಟವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಈ ಹೋರಾಟದಲ್ಲಿ ಎದುರಾಗುವ ಸವಾಲುಗಳ ತೀವ್ರತೆಯನ್ನು ಅರಿತುಕೊಳ್ಳಲಾಗಿಲ್ಲ. 300 ಬಿಲಿಯನ್ ಡಾಲರ್ ತೀರಾ ಕಡಿಮೆ ಆಯಿತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇನ್ನೊಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಲಿದೆಯಂತೆ ಬಿಟ್​ಕಾಯಿನ್ ಮೌಲ್ಯ; 2,00,000 ಡಾಲರ್ ಬೆಲೆ ಪಡೆಯಲಿದೆ ಈ ಕ್ರಿಪ್ಟೋಕರೆನ್ಸಿ

‘ಅಭಿವೃದ್ಧಿಶೀಲ ದೇಶಗಳ ಅಗತ್ಯ ಮತ್ತು ಆದ್ಯತೆಗಳಿಗೆ ಈ 300 ಬಿಲಿಯನ್ ಡಾಲರ್ ಸಾಲುವುದಿಲ್ಲ. ಪ್ರತ್ಯೇಕ ಜವಾಬ್ದಾರಿಗಳ (ಸಿಬಿಡಿಆರ್) ತತ್ವ ಮತ್ತು ಸಮಾನತೆಯ ತತ್ವಕ್ಕೆ ಇದು ಹೊಂದಿಕೆಯಾಗುವುದಿಲ್ಲ. ಈ ಒಪ್ಪಂದದಿಂದ ನಮಗೆ ನಿರಾಸೆಯಾಗಿದೆ. ಈ ಅಜೆಂಡಾವನ್ನು ಅಳವಡಿಸಲು ನಮ್ಮ ವಿರೋಧ ಇದೆ’ ಎಂದು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಸಲಹೆಗಾರ್ತಿಯೂ ಆಗಿರುವ ಚಾಂದನಿ ರೈನಾ ಹೇಳಿಕೆ ನೀಡಿದ್ದಾರೆ.

ಏನಿದು ಸಿಒಪಿ29?

ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಜಾಗತಿಕ ಸಮಾವೇಶಗಳನ್ನು ಆಯೋಜಿಸುತ್ತದೆ. ಅದಕ್ಕೆ ಕಾನ್ಫರೆನ್ಸ್ ಆಫ್ ಪಾರ್ಟೀಸ್ ಅಥವಾ ಸಿಒಪಿ ಎಂದೂ ಕರೆಯಲಾಗುತ್ತದೆ. ಈಗ ಅಜರ್​ಬೈಜಾನ್​ನ ಬಾಕುವಿನಲ್ಲಿ ನವೆಂಬರ್ 11ರಿಂದ 22ರವರೆಗೆ ನಡೆದದ್ದು 29ನೇ ಸಿಒಪಿ ಸಭೆ. ಇದಕ್ಕೆ ಸಿಒಪಿ29 ಎಂದೂ ಹೆಸರಿಲಾಗಿದೆ. ವಿಶ್ವದ ಎಲ್ಲಾ ದೇಶಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಶ್ರೀಮಂತ ದೇಶಗಳು ಯಾಕೆ ಹಣ ನೀಡಬೇಕು…?

ಶ್ರೀಮಂತ ದೇಶಗಳು ಬಹಳ ಹಿಂದೆಯೇ ಕೈಗಾರಿಕಾ ಕ್ರಾಂತಿಯ ಫಲವನ್ನು ಅನುಭವಿಸಿ ಶ್ರೀಮಂತಿಕೆ ಪಡೆದಿವೆ. ಆ ಸಂದರ್ಭದಲ್ಲಿ ಸಾಕಷ್ಟು ಪಳೆಯುಳಿಕೆ ಇಂಧನವನ್ನು ಯಥೇಚ್ಛವಾಗಿ ಬಳಸಿವೆ. ಈಗ ಹವಾಮಾನ ಬದಲಾವಣೆಯ ಸಮಸ್ಯೆ ಜಗತ್ತನ್ನು ಕಾಡುತ್ತಿದ್ದು, ಪಳೆಯುಳಿಕೆ ಇಂಧನದ ಬಳಕೆಯನ್ನು ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆ ಎಲ್ಲ ದೇಶಗಳಿಗೂ ತಾಕೀತು ಮಾಡಿದೆ.

ಇದನ್ನೂ ಓದಿ: ಭಾರತದ ಸ್ಟಾರ್ಟಪ್​ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ

ಆದರೆ, ಪೆಟ್ರೋಲಿಯಂ, ಕಲ್ಲಿದ್ದಲು ಇತ್ಯಾದಿ ಪಳೆಯುಳಿಕೆ ಇಂಧನಕ್ಕೆ ಹೋಲಿಸಿದರೆ ಪರ್ಯಾಯ ಇಂಧನ ಈಗ ಬಹಳ ದುಬಾರಿ ಎನಿಸಿದೆ. ಅಭಿವೃದ್ಧಿಶೀಲ ಮತ್ತು ಬಡದೇಶಗಳು ಪರ್ಯಾಯ ಇಂಧನವನ್ನು ಬಳಸಬೇಕೆಂದರೆ ಸಾಕಷ್ಟು ಬೆಲೆ ತೆರಬೇಕಾಗುತ್ತದೆ. ಹಿಂದೆಲ್ಲಾ ಪಳೆಯುಳಿಕೆ ಇಂಧನ ಬಳಸಿ ಶ್ರೀಮಂತವಾಗಿದ್ದ ದೇಶಗಳು ಈಗ ಕೆಳಸ್ತರದ ದೇಶಗಳಿಗೆ ಪರ್ಯಾಯ ಇಂಧನದ ವ್ಯವಸ್ಥೆ ಅಳವಡಿಸಲು ಧನಸಹಾಯ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಎಷ್ಟು ಮೊತ್ತದ ಹಣದ ನೆರವು ನೀಡಬೇಕು ಎಂಬುದನ್ನು ಸಿಒಪಿ29 ಸಮಾವೇಶದಲ್ಲಿ ನಿರ್ಧರಿಸಲಾಗಿದೆ.

ವರ್ಷಕ್ಕೆ 300 ಬಿಲಿಯನ್ ಡಾಲರ್ ಎಂದರೆ, ಸುಮಾರು 25 ಸಾವಿರ ಕೋಟಿ ರೂ ಆಗುತ್ತದೆ. ಭಾರತವೂ ಒಳಗೊಂಡಂತೆ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ಹಲವು ದೇಶಗಳು ಕೆಳಸ್ತರದ ಹಂತದಲ್ಲಿವೆ. ಇವುಗಳೆಲ್ಲವಕ್ಕೂ ಈ ಹಣ ಹಂಚಿದರೆ ಒಂದೊಂದು ದೇಶಕ್ಕೆ ಸಿಗುವುದು ಬಹಳ ಅಲ್ಪ ಮೊತ್ತವೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ