PLI: ಆಟೊಮೊಬೈಲ್ ಪಿಎಲ್​ಐ ಸ್ಕೀಮ್​ನ ಡೆಡ್​ಲೈನ್ ಒಂದು ವರ್ಷ ಮುಂದಕ್ಕೆ

Government Extends Last Date For PLI-Auto: 2022ರ ಏಪ್ರಿಲ್ 1ರಿಂದ ಜಾರಿಯಲ್ಲಿರುವ ವಾಹನ ಕ್ಷೇತ್ರದ 25,938 ಕೋಟಿ ರೂ ಮೊತ್ತದ ಪಿಎಲ್​ಐ ಸ್ಕೀಮ್​ನ ಗಡುವನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗಿದೆ. 2027-28ರವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಇಲ್ಲಿಯವರೆಗೆ 95 ಕಂಪನಿಗಳು ಆಟೊ ಪಿಎಲ್​ಐ ಸ್ಕೀಮ್​ಗೆ ಜೋಡಿತವಾಗಿವೆ. ಅವಧಿ ವಿಸ್ತರಣೆ ಮಾತ್ರವಲ್ಲದೇ, ಪ್ರೋತ್ಸಾಹಕ ಧನ ವಿತರಿಸುವ ಸಮಯಾವಧಿಯನ್ನೂ ಕಡಿಮೆ ಮಾಡಲಾಗಿದೆ.

PLI: ಆಟೊಮೊಬೈಲ್ ಪಿಎಲ್​ಐ ಸ್ಕೀಮ್​ನ ಡೆಡ್​ಲೈನ್ ಒಂದು ವರ್ಷ ಮುಂದಕ್ಕೆ
ವಾಹನ ತಯಾರಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2023 | 3:34 PM

ನವದೆಹಲಿ, ಆಗಸ್ಟ್ 31: ವಾಹನ ತಯಾರಿಕೆಗೆ ಉತ್ತೇಜನ ಕೊಡುವ ಉದ್ದೇಶದಿಂದ ಆ ಕ್ಷೇತ್ರಕ್ಕೂ ಸರ್ಕಾರ ಪಿಎಲ್​ಐ ಸ್ಕೀಮ್ (PLI- Production linked incentive) ಅನ್ನು ಕಳೆದ ವರ್ಷ ಜಾರಿಗೊಳಿಸಿತ್ತು. ವಾಹನ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಾದ 25,938 ಕೋಟಿ ರೂ ಮೊತ್ತದ ಈ ಪಿಎಲ್​ಐ ಸ್ಕೀಮ್​ ಅನ್ನು ಒಂದು ವರ್ಷ ಹೆಚ್ಚಿಸಲಾಗಿದೆ. 2026-27ಕ್ಕೆ ಇದ್ದ ಡೆಡ್​ಲೈನ್ ಅನ್ನು 2027-28ಕ್ಕೆ ವಿಸ್ತರಿಸಲಾಗಿದೆ. ಇನ್ನೂ ಐದು ವರ್ಷ ಆಟೊಮೊಬೈಲ್ ಸೆಕ್ಟರ್​ನಲ್ಲಿ ಪಿಎಲ್​ಐ ಸ್ಕೀಮ್ ಜಾರಿಯಲ್ಲಿರುತ್ತದೆ. ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಮಹೇಂದ್ರನಾಥ್ ಪಾಂಡೆ (Mahendra Nath Pandey) ಅವರು ಪಿಎಲ್​ಐ-ಆಟೊ ಸ್ಕೀಮ್​ನ ಪರಮಾರ್ಶೆ ಸಭೆಯಲ್ಲಿ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.

ಆಟೊ-ಪಿಎಲ್​ಐ ಸ್ಕೀಮ್​ನ ಅವಧಿಯನ್ನು ಹೆಚ್ಚಿಸಿರುವುದಷ್ಟೇ ಅಲ್ಲ, ಈ ಸ್ಕೀಮ್​ನ ಫಲಾನುಭವಿ ಸಂಸ್ಥೆಗಳಿಗೆ ವರ್ಷಕ್ಕೊಮ್ಮೆ ಬದಲು ಪ್ರತೀ ಕ್ವಾರ್ಟರ್​ಗೆ ಧನ ಸಹಾಯ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

‘ಪಿಎಲ್​ಐ ಸ್ಕೀಮ್​ನ ಅವಧಿಯನ್ನು ಒಂದು ವರ್ಷ ಹೆಚ್ಚಿಸಲು ಮತ್ತು ಪ್ರೋತ್ಸಾಹಕ ಧನವನ್ನು ಮೂರು ತಿಂಗಳಿಗೊಮ್ಮೆ ವಿತರಿಸಲು ಉದ್ಯಮದಿಂದ ಕೆಲ ಮನವಿಗಳು ಬಂದಿದ್ದವು ಎಂದು ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಐಟಿ ಹಾರ್ಡ್​ವೇರ್ ತಯಾರಿಕೆಗೆ 40 ಕಂಪನಿಗಳಿಂದ ಅರ್ಜಿ, 75 ಸಾವಿರ ಉದ್ಯೋಗಸೃಷ್ಟಿ ಸಾಧ್ಯತೆ

ವಾಹನಗಳು ಮತ್ತು ಬಿಡಿಭಾಗಗಳ ಪರೀಕ್ಷೆ ನಡೆಸಲು ಇನ್ನೂ ಎರಡು ಏಜೆನ್ಸಿಗಳನ್ನು ಸೇರಿಸಲು ಸರ್ಕಾರ ನಿರ್ಧರಿಸಿರುವುದು ತಿಳಿದುಬಂದಿದೆ. ಮಧ್ಯಪ್ರದೇಶದಲ್ಲಿ ಗ್ಲೋಬಲ್ ಆಟೊಮೋಟಿವ್ ರಿಸರ್ಚ್ ಸೆಂಟರ್ (ಜಿಎಆರ್​ಸಿ) ಮತ್ತು ಚೆನ್ನೈ ಅಂಡ್ ನ್ಯಾಷನಲ್ ಆಟೊಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (ನಾಟ್ರಾಕ್ಸ್) ಸಂಸ್ಥೆಗಳು ಆ ಎರಡು ಕಂಪನಿಗಳಾಗಿವೆ.

ಈ ಪಿಎಲ್​ಐ ಆಟೊ ಸ್ಕೀಮ್ ಅಡಿಯಲ್ಲಿ, 2022ರ ಏಪ್ರಿಲ್ 1ರಿಂದ ಭಾರತದಲ್ಲಿ ತಯಾರಾದ ಅಡ್ವಾನ್ಸ್​ಡ್ ಆಟೊಮೋಟಿವ್ ಟೆಕ್ನಾಲಜಿ (ಎಎಟಿ) ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹಕ ಧನ ಅನ್ವಯ ಆಗುತ್ತದೆ. ಯಾವ ಎಎಟಿ ಉತ್ಪನ್ನಗಳಿಗೆ ಪ್ರೋತ್ಸಾಹಕ ಕೊಡಬೇಕೆಂಬುದನ್ನು ಟೆಸ್ಟಿಂಗ್ ಏಜೆನ್ಸಿಗಳು ನಿರ್ಧರಿಸುತ್ತವೆ. ಶೇ. 50ಕ್ಕಿಂತಲೂ ಹೆಚ್ಚು ದೇಶೀಯ ಮೌಲ್ಯ ವರ್ಧಿತ (ಡೊಮೆಸ್ಟಿಕ್ ವ್ಯಾಲ್ಯೂ ಅಡಿಶನ್) ಎಎಟಿ ಉತ್ಪನ್ನಗಳು ಈ ಸ್ಕೀಮ್​ಗೆ ಅರ್ಹವಾಗಿರುತ್ತವೆ.

ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ

ಕಳೆದ ಒಂದು ವರ್ಷದಿಂದ ಜಾರಿಯಲ್ಲಿರುವ ವಾಹನ ಕ್ಷೇತ್ರದ ಪಿಎಲ್​ಐ ಸ್ಕೀಮ್​ನಲ್ಲಿ ಈವರೆಗೂ 95 ಕಂಪನಿಗಳು ಜೋಡಿತವಾಗಿವೆ. ಈ ಕಂಪನಿಗಳಿಂದ ಒಟ್ಟು 10,755 ಕೋಟಿ ರೂ ಬಂಡವಾಳ ಹೂಡಿಕೆಯಾಗಿದೆ. ಡಿವಿಎ ಸರ್ಟಿಫಿಕೇಶನ್ ಕೊಡಲು ಎಸ್​ಒಪಿ ಕೂಡ ಜಾರಿಯಲ್ಲಿದೆ.

ಹೊಸ ತಂತ್ರಜ್ಞಾನ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲು ಉತ್ತೇಜಿಸಲು ಪಿಎಲ್​ಐ ಸ್ಕೀಮ್ ಅನ್ನು ಸರ್ಕಾರ ಜಾರಿಗೆ ತಂದಿದೆ. ಎಲೆಕ್ಟ್ರಾನಿಕ್ಸ್, ವಾಹನ, ಸೆಮಿಕಂಡಕ್ಟರ್ ಇತ್ಯಾದಿ ಕ್ಷೇತ್ರವಾರು ಪ್ರತ್ಯೇಕವಾಗಿ ಪಿಎಲ್​ಐ ಸ್ಕೀಮ್ ಅನ್ನು ಸರ್ಕಾರ ನಡೆಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ