RBI Repo Rate Hike: ರೆಪೋ ದರ ಏರಿಕೆ ನಂತರ ಎಷ್ಟು ಹೆಚ್ಚಾಗಲಿದೆ ಇಎಂಐ ಎಂಬ ಲೆಕ್ಕಾಚಾರ ಇಲ್ಲಿದೆ
ಜೂನ್ 8, 2022ರಂದು ಆರ್‌ಬಿಐನಿಂದ ರೆಪೋ ದರ ಏರಿಕೆ ಮಾಡಿದ ಮೇಲೆ ಸಾಲದ ಇಎಂಐ ಎಷ್ಟು ಹೆಚ್ಚಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 8ನೇ ತಾರೀಕಿನ ಬುಧವಾರದಂದು ನೀತಿ ಸಭೆಯಲ್ಲಿ ಪ್ರಮುಖ ಸಾಲ (Repo rate) ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು (ಶೇ 0.50) ಹೆಚ್ಚಿಸಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್ ಪ್ರಮುಖ ಬಡ್ಡಿದರವನ್ನು ಶೇಕಡಾ 4.90ಗೆ ಹೆಚ್ಚಿಸಿದೆ. ಈ ವರ್ಷದ ಆರಂಭದಿಂದಲೂ ಹಣದುಬ್ಬರವು ಆರ್‌ಬಿಐನ ಶೇಕಡಾ 2-6ರ ಗುರಿಯ ಬ್ಯಾಂಡ್‌ಗಿಂತ ಹೆಚ್ಚಾಗಿದೆ. ರೆಪೋ ದರವನ್ನು ಹೆಚ್ಚಿಸಿದಾಗ ಬ್ಯಾಂಕ್‌ಗಳ ಹಣದ ವೆಚ್ಚ ಹೆಚ್ಚಾಗುತ್ತದೆ. ಅಂದ ಹಾಗೆ ರೆಪೋ ದರ ಅಂದರೆ, ಆರ್‌ಬಿಐನಿಂದ ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಹಣದ ಮೇಲಿನ ಬಡ್ಡಿ ದರವಾಗಿದೆ. ರೆಪೋ ದರ ಏರಿಕೆಯ ತಕ್ಷಣದ ಪರಿಣಾಮವು ಗೃಹ ಸಾಲಗಳಂತಹ ರೀಟೇಲ್ ಸಾಲಗಳ ಮೇಲೆ ಇರುತ್ತದೆ.
“ಏಪ್ರಿಲ್‌ನಲ್ಲಿ ಶೇಕಡಾ 6.50ರಷ್ಟಿದ್ದ ಗೃಹ ಸಾಲದ ಬಡ್ಡಿದರಗಳು ಈಗ ಜೂನ್‌ನಲ್ಲಿ ಶೇಕಡಾ 7.60ಕ್ಕೆ ತಲುಪಲಿವೆ. ಒಂದರ ಬೆನ್ನಿಗೆ ಮತ್ತೊಂದು ರೆಪೋ ದರ ಹೆಚ್ಚಳವು ಬದಲಾಗುವ ಬಡ್ಡಿ ದರದ ಸಾಲಗಳನ್ನು ದೀರ್ಘಗೊಳಿಸುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 20 ವರ್ಷಗಳವರೆಗೆ ಶೇ 7ರ ಬಡ್ಡಿಯಲ್ಲಿ ಸಾಲವನ್ನು ಪಡೆದಿದ್ದಲ್ಲಿ ಮತ್ತು ಬಡ್ಡಿ ದರವು ಶೇಕಡಾ 7.50ಗೆ ಹೆಚ್ಚಾದರೆ ಅವರು ಇನ್ನೂ 24 ಇಎಂಐಗಳನ್ನು ಹೆಚ್ಚಿಗೆ ಪಾವತಿಸಬೇಕಾಗುತ್ತದೆ,” ಎಂದು BankBazaar.com ಸಿಇಒ ಆದಿಲ್ ಶೆಟ್ಟಿ ಹೇಳಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.
ತಿಂಗಳ ಇಎಂಐ ಸುಮಾರು ಶೇ 4ರಷ್ಟು ಹೆಚ್ಚಳ
“ಅವರು ಇಎಂಐ ಹೊಂದಾಣಿಕೆಯನ್ನು ಆರಿಸಿಕೊಂಡಿದ್ದರೆ, ಮೇಲಿನ ಉದಾಹರಣೆಯಲ್ಲಿ ಪ್ರತಿ ಲಕ್ಷ ರೂಪಾಯಿಗೆ ಇಎಂಐ ರೂ. 30ರಷ್ಟು ಹೆಚ್ಚಾಗುತ್ತದೆ. ಮೂಲಭೂತವಾಗಿ, ಅವರ ತಿಂಗಳ ಇಎಂಐ ಸುಮಾರು ಶೇ 4ರಷ್ಟು ಹೆಚ್ಚಾಗುತ್ತದೆ. ಪ್ರತಿ ಸಾಲಗಾರರಿಗೆ ಲೆಕ್ಕಾಚಾರ ವಿಭಿನ್ನವಾಗಿರುತ್ತದೆ. ಪ್ರಮುಖವಾದದ್ದು ಉದ್ದೇಶಿತ ಕಾಲಾವಧಿಯಲ್ಲಿ ಸಾಲವನ್ನು ಪಾವತಿಸುವುದು. ಸಾಲಗಾರರು ತಮ್ಮ ಬಡ್ಡಿಯ ಹೊರೆಯನ್ನು ನಿಯಂತ್ರಿಸಲು ಇಎಂಐ ಸ್ಟೆಪ್-ಅಪ್‌ಗಳು ಅಥವಾ ಒಟ್ಟು ಮೊತ್ತದ ಪಾವತಿಗಳಂತಹ ಪೂರ್ವ-ಪಾವತಿ ವಿಧಾನಗಳನ್ನು ಬಳಸಬಹುದು,” ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು, ರಿಸರ್ವ್ ಬ್ಯಾಂಕ್ ರೆಪೊ ದರವನ್ನು 40 ಬಿಪಿಎಸ್ ಹೆಚ್ಚಿಸಿತ್ತು. ಆಗಸ್ಟ್ 2018ರ ನಂತರ ಇದು ಮೊದಲ ದರ ಏರಿಕೆ ಆಗಿತ್ತು.
ಎಲ್ಲ ಗೃಹ ಸಾಲಗಳು ಹೆಚ್ಚು ದುಬಾರಿ
“ರೆಪೋ ಹೆಚ್ಚಳದೊಂದಿಗೆ ಗೃಹ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಾಗುತ್ತವೆ. 36 ದಿನಗಳಲ್ಲಿ ಒಟ್ಟು 90 ಬಿಪಿಎಸ್ ಹೆಚ್ಚಳ ಎಂದರೆ ಫ್ಲೋಟಿಂಗ್ ದರಗಳ ಮೇಲಿನ ಎಲ್ಲ ಗೃಹ ಸಾಲಗಳು ಹೆಚ್ಚು ದುಬಾರಿಯಾಗುತ್ತವೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ಸಾಲಗಾರರಿಗೆ ಬ್ಯಾಂಕ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ಗಳು ದರ ಏರಿಕೆಯನ್ನು ವರ್ಗಾಯಿಸುತ್ತವೆ. ಆದ್ದರಿಂದ ಪಡೆದ ಸಾಲಕ್ಕೆ ಹೆಚ್ಚಿನ ಇಎಂಐಗಳನ್ನು ಪಾವತಿಸಬೇಕಾಗುತ್ತದೆ. ಹಣಕಾಸು ಕಂಪೆನಿಗಳು 2022ರ ವೇಳೆಗೆ ಅಥವಾ ಹಣದುಬ್ಬರವನ್ನು ಸಹನೀಯ ಮಟ್ಟಕ್ಕೆ ತರುವವರೆಗೆ ಆರ್‌ಬಿಐ ದರಗಳನ್ನು ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಇದು ಕೊನೆಯ ಏರಿಕೆ ಆಗಿರುವುದಿಲ್ಲ. ಸಾಲಗಾರರು ತಮ್ಮ ಇಎಂಐಗಳನ್ನು ಉಳಿಸಿಕೊಳ್ಳಲು ಗೃಹ ಸಾಲದ ಅವಧಿಯನ್ನು ವಿಸ್ತರಿಸಬಹುದು. ಹೆಚ್ಚುವರಿ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ಬದಲಾಗದೆ ಅಥವಾ ಭಾಗಶಃ ಪೂರ್ವಪಾವತಿ ಮಾಡಬಹುದು. ಉತ್ತಮ ಕ್ರೆಡಿಟ್ ಸ್ಕೋರ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಪಡೆಯುವುದಕ್ಕೆ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಅದರಲ್ಲೂ ವಿಶೇಷವಾಗಿ ಸಾಲವನ್ನು ರೀಫೈನಾನ್ಸ್ ಮಾಡಿದರೆ ಅನುಕೂಲ ಆಗುತ್ತದೆ,” ಎಂದು ಶೆಟ್ಟಿ ಹೇಳಿದ್ದಾರೆ.
ಅಲ್ಲದೆ, ಚಾಲ್ತಿಯಲ್ಲಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆ – ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 6.7ಕ್ಕೆ ಏರಿಸಿದೆ. ಪ್ರಸಕ್ತ ಹಣಕಾಸು ವರ್ಷದ (2022-23) ಮೊದಲ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರವು ಶೇಕಡಾ 6ಕ್ಕಿಂತ ಹೆಚ್ಚಿರಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: RBI: ರೆಪೋ ರೇಟ್ ಶೇ. 4.90ಕ್ಕೆ ಹೆಚ್ಚಿಸಿದ ಆರ್‌ಬಿಐ; ಬ್ಯಾಂಕ್ ಸಾಲದ ಬಡ್ಡಿ ದರವೂ ಏರಿಕೆ