India CAD: ಭಾರತದ ಕರೆಂಟ್ ಅಕೌಂಟ್ ಕೊರತೆ ಕೇವಲ ಶೇ. 0.2; ಚಾಲ್ತಿ ಖಾತೆ ವಿವರ ಯಾಕೆ ಮಹತ್ವದ್ದು?
Current Account Deficit Decreases: 2022-23ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ನಲ್ಲಿ ಭಾರತದ ಚಾಲ್ತಿ ಖಾತೆಯಲ್ಲಿ ಸುಧಾರಣೆ ಆಗಿದೆ. ಆ ಅವಧಿಯಲ್ಲಿ ಕರೆಂಟ್ ಅಕೌಂಟ್ ಕೊರತೆ ಕೇವಲ ಶೇ. 0.2 ಮಾತ್ರ ಇದೆ.
ನವದೆಹಲಿ: ಇದೇ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ (CAD- Current Account Deficit) ಅಥವಾ ಚಾಲ್ತಿ ಖಾತೆ ಕೊರತೆ ಗಣನೀಯವಾಗಿ ಇಳಿಕೆಯಾಗಿದೆ. ಆರ್ಬಿಐ ಬಿಡುಗಡೆ ಮಾಡಿದ ವರದಿ ಪ್ರಕಾರ ಕರೆಂಟ್ ಅಕೌಂಟ್ ಅಂತರ 1.3 ಬಿಲಿಯನ್ ಡಾಲರ್ (ಸುಮಾರು 10,650 ಕೋಟಿ ರೂ) ಇದೆ. ಕರೆಂಟ್ ಅಕೌಂಟ್ ಅಂತರವು ಜಿಡಿಪಿಯ ಶೇ. 0.2ರಷ್ಟು ಮಾತ್ರವೇ ಇರುವುದು. ಆದರೆ, ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಆ ಅವಧಿಯಲ್ಲಿ ಆರ್ಥಿಕ ತಜ್ಞರು ಚಾಲ್ತಿ ಖಾತೆಯಲ್ಲಿ ಕೊರತೆ ನೀಗಿ ಹೆಚ್ಚುವರಿ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಕೊರತೆ ನೀಗದೇ ಇದ್ದರೂ ಗಣನೀಯವಾಗಿ ಅಂತರ ಇಳಿಕೆಯಾಗಿರುವುದು ಹೌದು. ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ 2022ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಜಿಡಿಪಿಯ ಶೇ. 2.2ರಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಅಂತರ ಬಹಳಷ್ಟು ಕಡಿಮೆ ಆಗಿದೆ.
ಆದರೆ, 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ. 2ರಷ್ಟು ಇರುವುದು ದಾಖಲಾಗಿದೆ. ಹಿಂದಿನ ವರ್ಷದಲ್ಲಿ, ಅಂದರೆ 2021-22ರ ಹಣಕಾಸು ವರ್ಷದಲ್ಲಿ ಇದರ ಕೊರತೆ ಶೇ. 1.2ರಷ್ಟು ಮಾತ್ರ ಇತ್ತು. ಆದರೆ, 2022-23ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ ಭಾರತದ ಸಿಎಡಿ ಬಹಳ ಹೆಚ್ಚಿನ ಮಟ್ಟದಲ್ಲಿತ್ತು.
ಕೊನೆಯ ಕ್ವಾರ್ಟರ್ನಲ್ಲಿ ಕೊರತೆ ಕಡಿಮೆ ಆಗಿದ್ದು ಯಾಕೆ?
2022-23ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕವಾದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಶೇ. 0.2ಕ್ಕೆ ಇಳಿದಿರುವುದಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ವ್ಯಾಪಾರ ಕೊರತೆ ಸಂಕುಚಿತಗೊಂಡಿದ್ದು ಹಾಗೂ ಸರ್ವಿಸ್ ರಫ್ತು ಹೆಚ್ಚಿದ್ದು ಎಂದು ಹೇಳಲಾಗುತ್ತಿದೆ. ಮೂರನೇ ಕ್ವಾರ್ಟರ್ನಲ್ಲಿ 71.3 ಬಿಲಿಯನ್ ಡಾಲರ್ ಇದ್ದ ವ್ಯಾಪಾರ ಕೊರತೆ ನಾಲ್ಕನೇ ಕ್ವಾರ್ಟರ್ನಲ್ಲಿ 52.6 ಬಿಲಿಯನ್ ಡಾಲರ್ಗೆ ಇಳಿದಿತ್ತು. ಇದು ಒಟ್ಟಾರೆ ಕರೆಂಟ್ ಅಕೌಂಟ್ ಅಂತರವನ್ನು ತಗ್ಗಿಸಲು ಸಹಾಯವಾಗಿದೆ.
ರಾಯ್ಟರ್ಸ್ ಸಂಸ್ಥೆ ನಡೆಸಿದ ಪೋಲ್ನಲ್ಲಿ 22 ಆರ್ಥಿಕ ತಜ್ಞರು ನಾಲ್ಕನೇ ಕ್ವಾರ್ಟರ್ನಲ್ಲಿ ಚಾಲ್ತಿ ಖಾತೆಗೆ ಕೊರತೆ ಬದಲು ಹೆಚ್ಚುವರಿ ಸೇರಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಆ 22 ಆರ್ಥಿಕ ತಜ್ಞರು ನೀಡಿದ ಅಂಕಿಅಂಶಗಳನ್ನು ಸರಾಸರಿಯಾಗಿ ಗಣಿಸಿದಾಗ ನಾಲ್ಕನೇ ಕ್ವಾರ್ಟರ್ನಲ್ಲಿ ಕರೆಂಟ್ ಅಕೌಂಟ್ನಲ್ಲಿ ಜಿಡಿಪಿಯ ಶೇ. 0.3ರಷ್ಟು ಹೆಚ್ಚುವರಿ ಮೊತ್ತ ಜಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ: Indian Economy: ಮುಂದಿನ 3 ವರ್ಷವೂ ಅತಿವೇಗದಲ್ಲಿ ಭಾರತದ ಆರ್ಥಿಕವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು
ಏನಿದು ಕರೆಂಟ್ ಅಕೌಂಟ್ ಡೆಫಿಸಿಟ್?
ಬಹಳ ಸರಳವಾಗಿ ಹೇಳುವುದಾದರೆ ಚಾಲ್ತಿ ಖಾತೆ ಎಂದರೆ ದೇಶದ ಆಮದು ವೆಚ್ಚ ಮತ್ತು ರಫ್ತು ಆದಾಯದ ಮಧ್ಯೆ ಇರುವ ಅಂತರ. ಅಂದರೆ ರಫ್ತಿನಿಂದ ಬರುವ ಆದಾಯಕ್ಕಿಂತ ಆಮದು ವೆಚ್ಚ ಹೆಚ್ಚಾದಾಗ ಚಾಲ್ತಿ ಖಾತೆ ಕೊರತೆ ಆಗುತ್ತದೆ. ಇನ್ನು, ಆಮದಿಗೆ ಆಗುವ ವ್ಯಯಕ್ಕಿಂತ ರಫ್ತು ಮೂಲಕ ಬಂದ ಆದಾಯ ಹೆಚ್ಚಿದ್ದರೆ ಆಗ ಕರೆಂಟ್ ಅಕೌಂಟ್ ಸರ್ಪ್ಲಸ್ ಅಥವಾ ಚಾಲ್ತಿ ಖಾತೆ ಹೆಚ್ಚುವರಿ ಎಂದು ಪರಿಗಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ