ಭಾರತದ ಆರ್ಥಿಕ ಸವಾಲುಗಳಿಗೆ ಬಾಹ್ಯ ಪರಿಣಾಮ ಕಾರಣ: ನಿರ್ಮಲಾ ಸೀತಾರಾಮನ್
India's Economic Challenges External, says Nirmala Sitharaman: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಆರ್ಥಿಕ ಸವಾಲುಗಳು ಜಾಗತಿಕ ವಿದ್ಯಮಾನಗಳಿಂದ ಉದ್ಭವಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದ ಆರ್ಥಿಕತೆ ಸದೃಢವಾಗಿದ್ದು, ಬಾಹ್ಯ ಬಿಕ್ಕಟ್ಟುಗಳ ನಡುವೆಯೂ ಪುಟಿದೇಳುವ ಗುಣ ಹೊಂದಿದೆ. ಪೆಟ್ರೋಲ್-ಡೀಸೆಲ್ ಸುಂಕ ಕಡಿತ ಮತ್ತು ಎಂಎಸ್‌ಎಂಇಗಳಿಗೆ (MSME) 2.55 ಲಕ್ಷ ಕೋಟಿ ರೂ. ಬೆಂಬಲದ ಮೂಲಕ ಸರ್ಕಾರ ಜನಸಾಮಾನ್ಯರು ಹಾಗೂ ಉದ್ಯಮಗಳನ್ನು ರಕ್ಷಿಸುತ್ತಿದೆ ಎಂದು ಮುಂಬೈನಲ್ಲಿ ತಿಳಿಸಿದರು.

ಮುಂಬೈ (ಮೇ 25): ಭಾರತದ ಪ್ರಸ್ತುತ ಆರ್ಥಿಕ ಸವಾಲುಗಳು ದೇಶದ ಒಳಗಿನದ್ದಲ್ಲ, ಬದಲಿಗೆ ಜಾಗತಿಕ ವಿದ್ಯಮಾನಗಳಿಂದ (ಬಾಹ್ಯವಾಗಿ) ಎದುರಾಗುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ದೇಶದ ವಾಣಿಜ್ಯ ನಗರಿಯಲ್ಲಿ ನಡೆದ ಸಿಡ್ಬಿ (SIDBI – ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್) ಸಂಸ್ಥೆಯ 37ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಮತ್ತು ನಿರಾಶಾದಾಯಕ ವಾತಾವರಣ ಸೃಷ್ಟಿಸುತ್ತಿರುವ ವಿಮರ್ಶಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಶ್ಚಿಮ ಏಷ್ಯಾ (Middle East) ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತವು ಪ್ರಸ್ತುತ ಇಂಧನ, ಗೊಬ್ಬರ ಮತ್ತು ವಿದೇಶೀ ವಿನಿಮಯದ ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇವುಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಸಚಿವರು ತಿಳಿಸಿದರು.
ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಕಿಡಿ
ದೇಶದ ಸಾಮಾನ್ಯ ಜನರು ಮತ್ತು ಉದ್ಯಮಿಗಳು ಸಾಧಿಸುತ್ತಿರುವ ಪ್ರಗತಿಯನ್ನು ಮರೆತು, ಭಾರತದಲ್ಲಿ ಎಲ್ಲವೂ ಕುಸಿದುಬೀಳುತ್ತಿದೆ ಎಂಬಂತೆ ಬಿಂಬಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್, “ಭಾರತವು ಸುಳ್ಳು ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸುವುದನ್ನು ಸಹಿಸುವುದಿಲ್ಲ. ನಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕೇ ಹೊರತು ನಿರಾಶಾವಾದವನ್ನಲ್ಲ” ಎಂದರು.
ಇದನ್ನೂ ಓದಿ: ಭಾರತದಲ್ಲಿ ಆದ ಪೆಟ್ರೋಲ್ ಬೆಲೆ ಏರಿಕೆ ಬಹಳ ದೊಡ್ಡ ಹೆಚ್ಚಳವಾ? ಇಲ್ಲಿದೆ ವಾಸ್ತವ ಸ್ಥಿತಿ
ದೇಶೀಯ ಆರ್ಥಿಕತೆ ಸದೃಢವಾಗಿದೆ
ಬಾಹ್ಯ ಸವಾಲುಗಳಿದ್ದರೂ ಭಾರತದ ಆಂತರಿಕ ಆರ್ಥಿಕತೆ ಪುಟಿದೇಳುವ ಗುಣ (Resilient) ಕೂಡಿದೆ ಎಂದ ಅವರು, ಅದಕ್ಕೆ ಕೆಲ ಉದಾಹರಣೆಗಳನ್ನೂ ಕೊಟ್ಟರು. ದೇಶದ ಜಿಎಸ್‌ಟಿ (GST) ಸಂಗ್ರಹವು ಶೇಕಡಾ 8.3 ರಷ್ಟು ಬೆಳವಣಿಗೆಯೊಂದಿಗೆ 22 ಲಕ್ಷ ಕೋಟಿ ರೂ ದಾಟಿರುವುದು; ದೇಶೀಯವಾಗಿ ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ. 26 ರಷ್ಟು ಮತ್ತು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 25 ರಷ್ಟು ಹೆಚ್ಚಳ ಆಗಿರುವುದು; ಹಾಗೂ ರೀಟೇಲ್, ಕೃಷಿ ಮತ್ತು ಎಂಎಸ್‌ಎಂಇ (MSME) ವಲಯಗಳಲ್ಲಿ ಸಾಲದ ಬೆಳವಣಿಗೆ ಉತ್ತಮವಾಗಿರುವುದನ್ನು ಭಾರತದ ಆರ್ಥಿಕತೆಯ ಕ್ಷಮತೆಗೆ ನಿದರ್ಶನೆಗಳಾಗಿ ಹಣಕಾಸು ಸಚಿವೆ ಪ್ರಸ್ತಾಪಿಸಿದರು.
ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತೆರಿಗೆ ಕಡಿತ
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರೂಗೂ ಅಧಿಕ ರಾಜಸ್ವ (Revenue) ನಷ್ಟವಾಗುತ್ತಿದ್ದರೂ ಜಾಗತಿಕ ತೈಲ ಬೆಲೆ ಏರಿಕೆಯಿಂದ ಸಾಮಾನ್ಯರನ್ನು ರಕ್ಷಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಸರಕು ಸಾಗಣೆ ತಡವಾಗುತ್ತಿರುವುದರಿಂದ ರಫ್ತುದಾರರಿಗೆ ನೆರವಾಗಲು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ಎನ್ ಸೀತಾರಾಮನ್ ವಿವರಿಸಿದರು.
ಇದನ್ನೂ ಓದಿ: ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು
ಎಂಎಸ್‌ಎಂಇ (MSME) ಉದ್ಯಮಗಳಿಗೆ ಬೆಂಬಲ
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSMEs) ಅಭಿವೃದ್ಧಿಗೆ ತುರ್ತು ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ (ECLGS 5.0) ಅಡಿಯಲ್ಲಿ 2.55 ಲಕ್ಷ ಕೋಟಿ ರೂ ಹೆಚ್ಚುವರಿ ಸಾಲ ಒದಗಿಸಲಾಗುತ್ತಿದ್ದು, ಇದಕ್ಕೆ ಸರ್ಕಾರವೇ 100% ಗ್ಯಾರಂಟಿ ನೀಡಲಿದೆ. ಅಲ್ಲದೆ, ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ಸಣ್ಣ ಉದ್ಯಮಿಗಳಿಗೆ ಬಾಕಿ ಇರುವ ಹಣವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಾಗತಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ರಫ್ತು ವೆಚ್ಚ ಹೆಚ್ಚಾಗುತ್ತಿರುವುದು ನಿಜ. ಆದರೆ, ಭಾರತ ಸರ್ಕಾರವು ತೆರಿಗೆ ಕಡಿತ ಮತ್ತು ಉದ್ಯಮಗಳಿಗೆ ರಕ್ಷಣೆ ನೀಡುವ ಮೂಲಕ ಈ ಜಾಗತಿಕ ಹೊರೆಯನ್ನು ದೇಶದ ಜನರ ಮೇಲೆ ಬೀಳದಂತೆ ನಿರ್ವಹಿಸುತ್ತಿದೆ ಎಂದು ವಿತ್ತ ಸಚಿವರು ಈ ವೇಳೆ ಭರವಸೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





