AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office Schemes: ಅಂಚೆ ಕಚೇರಿಯ ಈ ಹೂಡಿಕೆ ಯೋಜನೆಗಳ ಬಡ್ಡಿಗೆ ಏಪ್ರಿಲ್​ 1ರಿಂದ ನಗದು ಪಾವತಿಸಲ್ಲ

2022ರ ಏಪ್ರಿಲ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಬಡ್ಡಿಯನ್ನು ನಗದು ರೂಪದಲ್ಲಿ ಪಾವತಿಸುವುದಿಲ್ಲ. ಮತ್ತೆ ಹೇಗೆ ನೀಡಲಾಗುವುದು ಎಂಬ ವಿವರ ಇಲ್ಲಿದೆ.

Post Office Schemes: ಅಂಚೆ ಕಚೇರಿಯ ಈ ಹೂಡಿಕೆ ಯೋಜನೆಗಳ ಬಡ್ಡಿಗೆ ಏಪ್ರಿಲ್​ 1ರಿಂದ ನಗದು ಪಾವತಿಸಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Mar 15, 2022 | 11:28 AM

Share

2022ನೇ ಇಸವಿಯ ಏಪ್ರಿಲ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು, ಮಾಸಿಕ ಆದಾಯ ಯೋಜನೆಗಳು (MIS) ಮತ್ತು ಟರ್ಮ್​ ಡೆಪಾಸಿಟ್​ಗಳ ಮೇಲಿನ ಬಡ್ಡಿಯನ್ನು ನಗದು ರೂಪದಲ್ಲಿ ಪಾವತಿ ಮಾಡುವುದನ್ನು ನಿಲ್ಲಿಸಲಾಗುತ್ತುವುದು ಎಂದು ಅಂಚೆ ಇಲಾಖೆಯ (Postal Department) ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬಡ್ಡಿ ಮೊತ್ತವನ್ನು ಅಂಚೆ ಕಚೇರಿ ಉಳಿತಾಯ ಖಾತೆಗೆ ಅಥವಾ ಬ್ಯಾಂಕ್ ಖಾತೆಗೆ ಮಾತ್ರ ಜಮೆ ಮಾಡಲಾಗುತ್ತದೆ. ಒಂದು ವೇಳೆ ಖಾತೆದಾರರು ತಮ್ಮ ಉಳಿತಾಯ ಖಾತೆಯನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್ ಖಾತೆಗೆ ಜೋಡಣೆ ಮಾಡುವುದಕ್ಕೆ ಸಾಧ್ಯವಾಗದಿದ್ದಲ್ಲಿ ಬಾಕಿ ಬಡ್ಡಿಯನ್ನು ಅಂಚೆ ಕಚೇರಿಯ ಉಳಿತಾಯ ಖಾತೆ ಅಥವಾ ಚೆಕ್​ ಮೂಲಕ ಮಾತ್ರ ಪಾವತಿಸಲಾಗುತ್ತದೆ.

ಅಂಚೆ ಇಲಾಖೆ ಹೇಳಿರುವಂತೆ, ಕೆಲವರು ತಮ್ಮ ಮಾಸಿಕ/ತ್ರೈಮಾಸಿಕ/ವಾರ್ಷಿಕ ಬಡ್ಡಿಯನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು, ಮಾಸಿಕ ಆದಾಯ ಯೋಜನೆಗಳು (MIS) ಮತ್ತು ಟರ್ಮ್​ ಡೆಪಾಸಿಟ್​ಗಳ ಅಡಿಯಲ್ಲಿ ಜಮೆ ಮಾಡುವುದಕ್ಕೆ ಉಳಿತಾಯ ಖಾತೆಯೊಂದಿಗೆ (ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ) ಜೋಡಣೆ ಮಾಡಿಲ್ಲ. ಈ ರೀತಿ ಯೋಜನೆಗಳ ಬಡ್ಡಿ ಪಾವತಿ ಆಗದೆ ಇತರ ಕಚೇರಿ ಖಾತೆಯಲ್ಲಿ ಹಾಗೇ ಉಳಿದುಹೋಗುತ್ತದೆ. ಇನ್ನೂ ಮುಂದುವರಿದು ಗಮನಿಸಿದಂತೆ, ಟರ್ಮ್ ಡೆಪಾಸಿಟ್ ಖಾತೆಗಳ ವಾರ್ಷಿಕ ಬಡ್ಡಿ ಪಾವತಿಗಳ ಬಗ್ಗೆ ತಿಳಿದುಕೊಂಡಿಲ್ಲ, ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

“ಅಂಚೆ ಕಚೇರಿಯ ಉಳಿತಾಯ ಖಾತೆ ಕಾರ್ಯಾಚರಣೆಗಳ ಮೇಲೆ ಉತ್ತಮ ನಿಯಂತ್ರಣ, ಡಿಜಿಟಲ್ ವಹಿವಾಟುಗಳ ಉತ್ತೇಜನ, ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ವಂಚನೆಗಳನ್ನು ತಪ್ಪಿಸಲು ಸಕ್ಷಮ ಪ್ರಾಧಿಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್​ಗಳ ಬಡ್ಡಿ ಪಾವತಿ ಜಮಾ ಮಾಡಲು ಪೋಸ್ಟ್ ಆಫೀಸ್ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಲು ನಿರ್ಧರಿಸಿದೆ,” ಎಂದು ಸುತ್ತೋಲೆ ಹೇಳಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್​ ಡೆಪಾಸಿಟ್ ಖಾತೆಗಳ ವಿಥ್​ ಡ್ರಾ ಮಾಡದ ಬಡ್ಡಿಯ ಮೇಲೆ ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಆದರೆ ಬಡ್ಡಿ, ಉಳಿತಾಯ ಖಾತೆಯಲ್ಲಿ ಜಮಾ ಮಾಡಿದರೆ ಹೆಚ್ಚುವರಿ ಬಡ್ಡಿ ಸಿಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್​ಗಳ ಖಾತೆದಾರರು ತಮ್ಮ ಉಳಿತಾಯ ಖಾತೆಯನ್ನು (ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆ) ಬಡ್ಡಿ ಪಾವತಿಗಾಗಿ ಜೋಡಣೆ ಮಾಡಲು ಅಂಚೆ ಇಲಾಖೆ ಸೂಚಿಸಿದೆ. ಬಡ್ಡಿಯನ್ನು ಹಿಂತೆಗೆದುಕೊಳ್ಳುವ ಉದ್ದೇಶಕ್ಕಾಗಿ ಪ್ರತಿ ಹಿರಿಯ ನಾಗರಿಕ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್ ಖಾತೆಗೆ ಹಲವು ವಿಥ್​ ಡ್ರಾ ಫಾರ್ಮ್‌ಗಳನ್ನು ಭರ್ತಿ ಮಾಡುವುದನ್ನು ತಪ್ಪಿಸಬಹುದು.

ಠೇವಣಿದಾರರು ತಮ್ಮ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್​ ಡೆಪಾಸಿಟ್ ಖಾತೆಗಳಿಂದ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೂಲಕ ರೆಕರಿಂಗ್ ಡೆಪಾಸಿಟ್ ಖಾತೆಗಳಿಗೆ ಬಡ್ಡಿ ಮೊತ್ತದ ಆಟೋ ಕ್ರೆಡಿಟ್ ಸೌಲಭ್ಯವನ್ನು ಪಡೆಯಬಹುದು.

ಅಂಚೆ ಕಚೇರಿ ಉಳಿತಾಯ ಖಾತೆಯೊಂದಿಗೆ ಜೋಡಣೆ ಹೇಗೆ ಅಂಚೆ ಕಚೇರಿ ಉಳಿತಾಯ ಖಾತೆ ಸಂದರ್ಭದಲ್ಲಿ ಖಾತೆದಾರರು ತನ್ನ ಪಿಒ ಉಳಿತಾಯ ಖಾತೆಗೆ ಹಿರಿಯ ನಾಗರಿಕ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್ ಖಾತೆಗಳನ್ನು ಜೋಡಣೆ ಮಾಡಲು SB-83 ನಮೂನೆಯನ್ನು (ಆಟೋ ಡೆಬಿಟ್ -ಸ್ಟ್ಯಾಂಡಿಂಗ್ ಇನ್​ಸ್ಟ್ರಕ್ಷನ್) ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು. ಅಂತಹ ಅನುಮೋದನೆಗಾಗಿ ಹಿರಿಯ ನಾಗರಿಕ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ಮತ್ತು ಟರ್ಮ್ ಡೆಪಾಸಿಟ್ ಪಾಸ್‌ಬುಕ್ ಮತ್ತು ದೃಢೀಕರಣವನ್ನು ಪರಿಶೀಲಿಸುವ ಉದ್ದೇಶಕ್ಕಾಗಿ ಅಂಚೆ ಕಚೇರಿ ಉಳಿತಾಯ ಖಾತೆ ಪಾಸ್‌ಬುಕ್ ನೀಡಬೇಕು.

ಬ್ಯಾಂಕ್ ಜೋಡಣೆ ಹೇಗೆ ಬ್ಯಾಂಕ್ ಖಾತೆಯ ಸಂದರ್ಭದಲ್ಲಿ ಖಾತೆದಾರರು ಇಸಿಎಸ್-1 ನಮೂನೆಯನ್ನು (ಇಸಿಎಸ್ ಮ್ಯಾನ್​ಡೇಟ್ ಫಾರ್ಮ್) ರದ್ದಾದ ಚೆಕ್ ಅಥವಾ ಬಡ್ಡಿ ಮೊತ್ತವನ್ನು ಯಾವ ಬ್ಯಾಂಕ್​ಗೆ ಕ್ರೆಡಿಟ್ ಆಗಲಿ ಎಂದು ಬಯಸುತ್ತಾರೋ ಆ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಮೊದಲ ಪುಟದ ನಕಲು ಪ್ರತಿಯೊಂದಿಗೆ ಸಲ್ಲಿಸಬೇಕು. ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅಂತಹ ಅನುಮೋದನೆಗಾಗಿ MIS/SCSS/TD ಖಾತೆ ಪಾಸ್‌ಬುಕ್ ನೀಡಬೇಕು.

ಇದನ್ನೂ ಓದಿ: ಎಸ್​ಬಿಐ ಫಿಕ್ಸೆಡ್ ಡೆಪಾಸಿಟ್ಸ್ ವರ್ಸಸ್ ಅಂಚೆ ಕಚೇರಿ ಡೆಪಾಸಿಟ್ಸ್; ಎಲ್ಲಿ, ಎಷ್ಟು ಬಡ್ಡಿ ಸಿಗುತ್ತದೆ?

Published On - 11:27 am, Tue, 15 March 22