Tax Evasion: ದೇಶಾದ್ಯಂತ 7 ತಿಂಗಳಲ್ಲಿ 29,273 ಬೋಗಸ್ ಸಂಸ್ಥೆಗಳಿಂದ 44 ಸಾವಿರ ಕೋಟಿ ರೂ ಮೊತ್ತದ ಜಿಎಸ್ಟಿ ವಂಚನೆ
GST Input Tax Credit: ಮೇ ತಿಂಗಳಿಂದ ಈಚೆ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗೆ ಸಂಬಂಧಿಸಿದಂತೆ 44,000 ಕೋಟಿ ರೂನಷ್ಟು ವಂಚನೆ ಎಸಗಲಾಗಿರುವುದು ಬೆಳಕಿಗೆ ಬಂದಿದೆ. ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಮತ್ತು ರಾಜ್ಯ ತೆರಿಗೆ ಪ್ರಾಧಿಕಾರಗಳು ಕೈಗೊಂಡಿದ್ದ ಡ್ರೈವ್ನಲ್ಲಿ ಸಾಕಷ್ಟು ಜಿಎಸ್ಟಿ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ತೆರಿಗೆ ಅಧಿಕಾರಿಗಳು 29 ಸಾವಿರಕ್ಕೂ ಹೆಚ್ಚು ಬೋಗಸ್ ಜಿಎಸ್ಟಿ ರಿಜಿಸ್ಟ್ರೇಶನ್ಗಳನ್ನು ಕಂಡುಹಿಡಿದಿದ್ದಾರೆ.
ನವದೆಹಲಿ, ಜನವರಿ 8: ಕಳೆದ ಕೆಲ ತಿಂಗಳ ಹಿಂದಿನಿಂದ ಸರಕು ಮತ್ತು ಸೇವಾ ತೆರಿಗೆಯ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗೆ (GST Input Tax Credit) ಸಂಬಂಧಿಸಿದಂತೆ ಸಾವಿರಾರು ಕೋಟಿ ರೂನಷ್ಟು ವಂಚನೆ ಎಸಗಿರುವುದು ಹಣಕಾಸು ಸಚಿವಾಲಯದ ಗಮನಕ್ಕೆ ಬಂದಿದೆ. ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 2023ರ ಮೇ ತಿಂಗಳಿಂದ ಈಚೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನಲ್ಲಿ ನಡೆದಿರುವ ವಂಚನೆ 44,000 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. 29,273 ನಕಲಿ ಸಂಸ್ಥೆಗಳು ಈ ತೆರಿಗೆ ವಂಚನೆ ಕೃತ್ಯದಲ್ಲಿ ಶಾಮೀಲಾಗಿವೆ. ಅಧಿಕಾರಿಗಳು ಈ ಪ್ರಕರಣಗಳಲ್ಲಿ 121 ಮಂದಿಯನ್ನು ಬಂಧಿಸಿದ್ದಾರೆ.
ಜಿಎಸ್ಟಿ ವಂಚನೆ ಪ್ರಕರಣಗಳು ಸಾಕಷ್ಟು ಗಮನಕ್ಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ತೆರಿಗೆ ಅಧಿಕಾರಿಗಳು ವ್ಯಾಪಕ ಪರಿಶೀಲನೆ ನಡೆಸಿದ್ದಾರೆ. ಬೋಗಸ್ ಜಿಎಸ್ಟಿ ರಿಜಿಸ್ಟ್ರೇಶನ್ಗಳ ಜಾಡು ಹಿಡಿದು ಶೋಧಿಸಲಾಗಿದೆ. ಯಾವುದೇ ಸರಕು ಸರಬರಾಜು ಅಥವಾ ಸೇವೆ ಒದಗಿಸದಿದ್ದರೂ ನಕಲಿ ಇನ್ವಾಯ್ಸ್ಗಳನ್ನು ನೀಡಿ ತೆರಿಗೆ ವಂಚನೆ ಎಸಗುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ತೆರಿಗೆ ಇಲಾಖೆಗಳ ಈ ಅಭಿಯಾನದಲ್ಲಿ 4,646 ಕೋಟಿ ರೂ ತೆರಿಗೆ ಹಣವನ್ನು ಉಳಿಸಲಾಗಿದೆ. ಈ ಪೈಕಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ರವಾನೆಯಾಗದಂತೆ ತಡೆದು 3,802 ಕೋಟಿ ರೂ ಮೊತ್ತವನ್ನು ಉಳಿಸಲಾಗಿದೆ.
ಇದನ್ನೂ ಓದಿ: RERA Rule: ಮನೆ ಖರೀದಿಸುವವರಿಗೆ ಸಮಾಧಾನಕರ ಸುದ್ದಿ; ಬುಕಿಂಗ್ ರದ್ದುಗೊಳಿಸಿದರೆ ವಿಧಿಸುವ ಶುಲ್ಕದ ಹೊರೆ ತಗ್ಗಿಸಿದ ರೇರಾ
ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ 4,153 ನಕಲಿ ಸಂಸ್ಥೆಗಳಿಂದ 12 ಸಾವಿರ ಕೋಟಿ ರೂಗಿಂತ ಹೆಚ್ಚು ಮೊತ್ತದ ಐಟಿಸಿ ತೆರಿಗೆ ವಂಚನೆ ಆಗಿರಬಹುದು ಎಂದು ಶಂಕಿಸಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಹೆಚ್ಚಿನ ನಕಲಿ ಸಂಸ್ಥೆಗಳಿರುವುದು ಬೆಳಕಿಗೆ ಬಂದಿದೆ.
ಏನಿದು ಜಿಎಸ್ಟಿ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ?
ಈಗಾಗಲೇ ತೆರಿಗೆ ಪಾವತಿಸಲಾದ ಒಂದು ಉತ್ಪನ್ನವನ್ನು ವ್ಯವಹಾರಕ್ಕೆ ಬಳಸಿ ಅದನ್ನು ವಹಿವಾಟು ಮಾಡುವಾಗ ಮತ್ತೊಮ್ಮೆ ತೆರಿಗೆ ಪಾವತಿಸಿದಾಗ, ಹಿಂದಿನ ತೆರಿಗೆ ಮೊತ್ತವನ್ನು ಕ್ಲೈಮ್ ಮಾಡಬಹುದು. ಇದೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನಿಸುತ್ತದೆ.
ಇದನ್ನೂ ಓದಿ: EV Factory: ವಿಯೆಟ್ನಾಂನ ವಿನ್ಫಾಸ್ಟ್ನಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಘಟಕ; 16 ಸಾವಿರ ಕೋಟಿ ರೂ ಹೂಡಿಕೆ
ಉದಾಹರಣೆಗೆ, ಉತ್ಪಾದಕರು ಉತ್ಪನ್ನ ತಯಾರಿಕೆಗಾಗಿ ಕಚ್ಛಾ ವಸ್ತು ಖರೀದಿಸಿ ಅದಕ್ಕೆ ಶೇ. 12ರಷ್ಟು ಜಿಎಸ್ಟಿ ಪಾವತಿಸಿರುತ್ತಾರೆ ಎಂದು ಭಾವಿಸಿ. ಅಂದರೆ, 20 ಸಾವಿರ ರೂ ಮೌಲ್ಯದ ಕಚ್ಚಾ ವಸ್ತುವಿಗೆ 2,400 ರೂ ಜಿಎಸ್ಟಿ ಪಾವತಿಸುತ್ತಾರೆ. ಈ ಕಚ್ಛಾ ವಸ್ತುವನ್ನು ಬಳಸಿಕೊಂಡು ಉತ್ಪನ್ನ ತಯಾರಿಸುತ್ತಾರೆ. ಆ ಉತ್ಪನ್ನವನ್ನು 50,000 ರೂಗೆ ಮಾರಾಟ ಮಾಡುತ್ತಾರೆ. ಅದಕ್ಕೆ ಶೇ. 18ರಷ್ಟು ಜಿಎಸ್ಟಿ ಇರುತ್ತದೆ. ಅಂದರೆ, 9 ಸಾವಿರ ರೂನಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಈ ಹಿಂದೆ ಈ ಉತ್ಪನ್ನ ತಯಾರಿಕೆಗೆ ಬಳಸಲಾದ ಕಚ್ಛಾ ವಸ್ತುವಿಗೆ ತೆರಿಗೆ ಕಟ್ಟಲಾಗಿತ್ತು. ಆ ತೆರಿಗೆ ಹಣವನ್ನು ಕ್ಲೈಮ್ ಮಾಡಬಹುದು. ಅಂದರೆ, 9 ಸಾವಿರ ರೂ ತೆರಿಗೆ ಹಣದಲ್ಲಿ 2,400 ರೂ ತೆರಿಗೆಯನ್ನು ಕಡಿತಗೊಳಿಸಲು ಅವಕಾಶ ಇದೆ. ಇದನ್ನೇ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ