Union Budget 2023: ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ನಿರೀಕ್ಷೆಗಳೇನು?
Media and Entertainment Industry Expectations: 2030ರಷ್ಟರಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ 100 ಬಿಲಿಯನ್ ಡಾಲರ್ ಮೊತ್ತದ ಉದ್ಯಮವಾಗಿ ಬೆಳೆಯಬಹುದು ಎಂದು ಕೇಂದ್ರ ಸರ್ಕಾರವೇ ಅಂದಾಜಿಸಿದೆ. ಇದಕ್ಕೆ ಪೂರಕವಾದ ಕ್ರಮಗಳನ್ನು ಸರ್ಕಾರ ಕಾಲಕಾಲಕ್ಕೆ ತೆಗೆದುಕೊಳ್ಳುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಉದ್ಯಮ ಕೆಲವೊಂದಿಷ್ಟು ಪ್ರಮುಖ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ನವದೆಹಲಿ: ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ (Media and Entertainment Industry) ಈಗೀಗ ಪ್ರಬಲ ಉದ್ಯಮವಾಗಿ ಬೆಳೆಯುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಗಳ ಫಲಾನುಭವಿಗಳಲ್ಲಿ ಈ ಕ್ಷೇತ್ರವೂ ಒಂದು. ಸ್ಮಾರ್ಟ್ಫೋನ್ ಮಾರುಕಟ್ಟೆಯ ವ್ಯಾಪ್ತಿ ಹೆಚ್ಚಾಗುತ್ತಿರುವಂತೆಯೇ ಒಟಿಟಿ, ಗೇಮಿಂಗ್ ಇತ್ಯಾದಿಗಳು ಹೆಚ್ಚು ಬೆಳೆಯತೊಡಗಿವೆ. ಬಹಳ ಮಂದಿಗೆ ಮನರಂಜನೆಗೆ ಅವಕಾಶ ಹೆಚ್ಚಿದೆ. ಮೊಬೈಲ್ ಗೇಮಿಂಗ್ ಕ್ಷೇತ್ರ ಭಾರತದಲ್ಲಿ ಈಗ ಗರಿಗೆದರಿದೆ.
ಒಂದು ವರದಿ ಪ್ರಕಾರ ಭಾರತದಲ್ಲಿ ಆನ್ಲೈನ್ ಗೇಮಿಂಗ್ (Online Gaming) ಕ್ಷೇತ್ರವು 2021ರ ವರ್ಷದಲ್ಲಿ 1.2 ಬಿಲಿಯನ್ ಡಾಲರ್ (ಸುಮಾರು 10 ಸಾವಿರ ಕೋಟಿ ರೂ) ಗಾತ್ರದ್ದಾಗಿತ್ತು. ಮುಂದಿನ ವರ್ಷದಲ್ಲಿ, ಅಂದರೆ 2024ರಲ್ಲಿ ಈ ಕ್ಷೇತ್ರದ ಒಟ್ಟು ಮಾರುಕಟ್ಟೆ ಮೌಲ್ಯ 1.9 ಬಿಲಿಯನ್ ಡಾಲರ್ (ಸುಮಾರು 15 ಸಾವಿರ ಕೋಟಿ ರೂ) ಆಗಬಹುದು ಎಂದು ಅಂದಾಜಿಸಲಾಗಿದೆ. ಜಪಾನ್ , ಚೀನಾ, ಅಮೆರಿಕದ ಗೇಮಿಂಗ್ ಕ್ಷೇತ್ರಕ್ಕೆ ಹೋಲಿಸಿದರೆ ಇದು ದೊಡ್ಡದಲ್ಲವಾದರೂ ಮುಂದಿನ ದಿನಗಳಲ್ಲಿ ಭಾರತದ ಗೇಮಿಂಗ್ ಮಾರುಕಟ್ಟೆ ಆ ದೇಶಗಳದ್ದನ್ನೂ ಮೀರಿ ಬೆಳೆಯುವ ಶಕ್ತಿಯನ್ನಂತೂ ಹೊಂದಿದೆ.
ಇದು ಸಾಧ್ಯವಾಗಬೇಕಾದರೆ ಈ ಕ್ಷೇತ್ರಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಕೆಲಸವಾಗಬೇಕು. ಸರ್ಕಾರ ಈಗಾಗಲೇ ಹಲವು ಗಮನಾರ್ಹ ಕ್ರಮಗಳನ್ನು ಕೈಗೊಂಡಿದೆ. ಟೆಲಿಪೋರ್ಟ್, ಡಿಟಿಎಚ್, ಮೊಬೈಲ್ ಟಿವಿ ಇತ್ಯಾದಿ ವಿಭಾಗಗಳಲ್ಲಿ ನೂರು ಪ್ರತಿಶತದಷ್ಟು ವಿದೇಶೀ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅನುಮತಿ ಕಲ್ಪಿಸಿದೆ. ಜೊತೆಗೆ ಮಾಡೆಲ್ ಥಿಯೇಟರ್ ಪಾಲಿಸಿ ಇತ್ಯಾದಿ ವಿವಿಧ ಕ್ರಮಗಳ ಮೂಲಕ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.
2030ರಷ್ಟರಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ 100 ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂ) ಮೊತ್ತದ ಉದ್ಯಮವಾಗಿ ಬೆಳೆಯಬಹುದು ಎಂದು ಕೇಂದ್ರ ಸರ್ಕಾರವೇ ಅಂದಾಜಿಸಿದೆ. ಇದಕ್ಕೆ ಪೂರಕವಾದ ಕ್ರಮಗಳನ್ನು ಸರ್ಕಾರ ಕಾಲಕಾಲಕ್ಕೆ ತೆಗೆದುಕೊಳ್ಳುವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಉದ್ಯಮ ಕೆಲವೊಂದಿಷ್ಟು ಪ್ರಮುಖ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅಂಥ ಕೆಲವು ಇಲ್ಲಿವೆ:
2023ರ ಬಜೆಟ್ನಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಕೆಲ ನಿರೀಕ್ಷೆಗಳು:
* ಲೈವ್ ಎಂಟರ್ಟೈನ್ಮೆಂಟ್ ಮತ್ತು ಸಿನಿಮಾ ಟಿಕೆಟ್ಗಳಿಗೆ ಹೆಚ್ಚು ಜಿಎಸ್ಟಿ ವಿಧಿಸಲಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕು.
* ಮಾಧ್ಯಮ ಕ್ಷೇತ್ರಕ್ಕೆ ಇನ್ಫ್ರಾಸ್ಟ್ರಕ್ಚರ್ ಸ್ಥಾನಮಾನ ಕೊಡಬೇಕು. ಅಂದರೆ, ಇದು ಸೌಕರ್ಯ ಒದಗಿಸುವ ಉದ್ಯಮವೆಂದು ಪರಿಗಣಿಸಬೇಕು. ಇದರಿಂದ ಸರ್ಕಾರದಿಂದ ತೆರಿಗೆ ಪ್ರೋತ್ಸಾಹಕಗಳು ಹೆಚ್ಚುತ್ತವೆ, ಸಾಲ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ.
* ಗೇಮಿಂಗ್ ಕ್ಷೇತ್ರದ ನವೋದ್ಯಮಗಳಿಗೆ (Startups) ಟ್ಯಾಕ್ಸ್ ಬ್ರೇಕ್ ಕೊಡಬೇಕು.
* ಗೇಮಿಂಗ್ ಕ್ಷೇತ್ರದಲ್ಲಿ ನಿಯಮಾವಳಿಗಳು ಇನ್ನಷ್ಟು ಸ್ಪಷ್ಟಗೊಳ್ಳಬೇಕು. ಜಿಎಸ್ಟಿ ದರವಷ್ಟೇ ಅಲ್ಲ ಗ್ರಾಸ್ ಗೇಮಿಂಗ್ ರೆವಿನ್ಯೂ ಶುಲ್ಕ ಇತ್ಯಾದಿ ತೆರಿಗೆಗಳ ಬಗ್ಗೆ ಸರ್ಕಾರ ಸರಳ ನಿಯಮಗಳನ್ನು ಮಾಡಬೇಕು.
* ಮಾಧ್ಯಮ ಮತ್ತು ಮನರಂಜನಾ ಉದ್ಯಮ ಜಾಗತಿಕವಾಗಿ ಬಹಳ ಕ್ಷಿಪ್ರಗತಿಯಲ್ಲಿ ಬದಲಾವಣೆಗಳನ್ನು ಕಾಣುತ್ತಲೇ ಹೋಗುತ್ತಿದೆ. ಇದಕ್ಕೆ ತಕ್ಕಂತೆ ನೀತಿಗಳನ್ನು ಅಳವಡಿಸುವ ಪ್ರವೃತ್ತಿಯನ್ನು ಸರ್ಕಾರ ತೋರಬೇಕು. ಅದಕ್ಕೆ ಬಜೆಟ್ ಒಂದು ಪ್ರಮುಖ ವೇದಿಕೆಯಾಗಿದೆ.
Published On - 8:03 am, Fri, 27 January 23