11.5 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನದ ಬೋನಸ್; 2009 ಕೋಟಿ ರೂ ಬೋನಸ್ ವಿತರಣೆಗೆ ಸಂಪುಟ ಅನುಮೋದನೆ
11 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳಿಗೆ ಈ ವರ್ಷ ದೀಪಾವಳಿ ಹಬ್ಬದ ಕೊಡುಗೆಯಾಗಿ 78 ದಿನಗಳ ಬೋನಸ್ ಸಿಗಲಿದೆ. ಕೇಂದ್ರ ಸಂಪುಟವು 2009 ಕೋಟಿ ರೂ ಮೊತ್ತದ ಬೋನಸ್ಗೆ ಅನುಮೋದನೆ ನೀಡಿದೆ. ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ ಈ ಬೋನಸ್ ಸಿಗುತ್ತದೆ. ಸಂಪುಟ ಇದೇ ವೇಳೆ ಕೆಲ ಯೋಜನೆಗಳ ಹೆಸರನ್ನೂ ಬದಲಾವಣೆ ಮಾಡಲು ಅನುಮೋದಿಸಿದೆ.

ನವದೆಹಲಿ, ಅಕ್ಟೋಬರ್ 14: ಕೇಂದ್ರ ಸರ್ಕಾರದಿಂದ ರೈಲ್ವೆ ಸಿಬ್ಬಂದಿಗೆ ಈ ವರ್ಷದ ದೀಪಾವಳಿ ಹಬ್ಬಕ್ಕೆ ಭರ್ಜರಿ ಉಡುಗೊರೆ ಸಿಗುತ್ತಿದೆ. 2009 ಕೋಟಿ ರೂ ಮೊತ್ತದ ಉತ್ಪಾದನೆ ಜೋಡಿತ ಬೋನಸ್ (Production Linked Bonus) ಅನ್ನು ರೈಲ್ವೆ ಸಿಬ್ಬಂದಿಗೆ ವಿತರಿಸಲು ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. 11.4 ಲಕ್ಷಕ್ಕೂ ಅಧಿಕ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಸಿಗಲಿದೆ.
78 ದಿನಗಳ ವೇತನವೆಂದರೆ ಎಷ್ಟಾಗುತ್ತದೆ?
ಸರ್ಕಾರ ಈ ಹಿಂದಿನ ಲೆಕ್ಕಾಚಾರದ ಪ್ರಕಾರವಾಗಿ ಬೋನಸ್ ನೀಡಿದೆ. 7,000 ವೇತನ ಮಿತಿಯನ್ನು ಪರಿಗಣಿಸುವುದು ಮುಂದುವುರಿದಿದೆ. ಅದರಂತೆ, ಒಬ್ಬ ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗೆ ಗರಿಷ್ಠ 17,951 ರೂ ವಾರ್ಷಿಕ ಬೋನಸ್ ಸಿಗಲಿದೆ.
ರೈಲ್ವೆ ಉದ್ಯೋಗಿಗಳ ಒಕ್ಕೂಟಗಳು ಬೋನಸ್ ವಿತರಣೆಗಾಗಿ ವೇತನ ಮಿತಿಯನ್ನು 7,000 ರೂ ಬದಲು 18,000 ರೂಗೆ ಏರಿಸಬೇಕೆಂದು ಒತ್ತಾಯಿಸುತ್ತಾ ಬಂದಿವೆ. ಇದರಂತೆ ಲೆಕ್ಕಾಚಾರ ಮಾಡಿದರೆ 46,184 ರೂ ಬೋನಸ್ ಆಗುತ್ತದೆ. ಸರ್ಕಾರ ಸದ್ಯಕ್ಕೆ ಹಳೆಯ ವೇತನ ಮಿತಿಯನ್ನೇ ಮುಂದುವರಿಸಿದಂತಿದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾ ವಿರುದ್ಧ ಕೋರ್ಟ್ ಕಟೆಕಟೆ ಹತ್ತಿದ ಬಿ.ಆರ್. ಶೆಟ್ಟಿ; ಕನ್ನಡಿಗ ಉದ್ಯಮಿಯಿಂದ 1.44 ಲಕ್ಷ ಕೋಟಿ ರೂ ಮೊಕದ್ದಮೆ
ಇಲ್ಲಿ ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳಲ್ಲಿ ಟ್ರ್ಯಾಕ್ ಮೇಂಟೆನೆರ್ಸ್, ಲೋಕೋ ಪೈಲಟ್, ಟ್ರೈನ್ ಮ್ಯಾನೇಜರ್ಸ್, ಸ್ಟೇಷನ್ ಮಾಸ್ಟರ್ಸ್, ಪಾಯಿಂಟ್ಸ್ಮನ್, ಇತರೆ ಗ್ರೂಪ್ ಸಿ ಸಿಬ್ಬಂದಿ ಸೇರುತ್ತಾರೆ.
ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮವನ್ನು 2030-31ರವರೆಗೆ 5 ವರ್ಷ ಕಾಲ ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ. ಇದು 53,428 ಕೋಟಿ ರೂ ವೆಚ್ಚದ ಯೋಜನೆಯಾಗಿದೆ.
ಯೋಜನೆಗಳ ಮರುನಾಮಕರಣ
ರಾಷ್ಟ್ರೀಯ ಸಾಮಾಜಿಕ ಸಹಾಯಕ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆಯಾಗಿ ಬದಲಾಯಿಸಲಾಗಿದೆ.
ಇದನ್ನೂ ಓದಿ: ಶಾಲಾ ಟೀಚರ್ ಮಗ ಕಟ್ಟಿದ ರಿಲಯನ್ಸ್ ಸಾಮ್ರಾಜ್ಯ; ಭಾರತದ ಮೊದಲ ಐಪಿಒದಿಂದ ಅತಿದೊಡ್ಡ ಐಪಿಒವರೆಗೆ ರೋಚಕ ಪ್ರಯಾಣ
ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆಯಾಗಿ; ಇಂದಿರಾ ಗಾಂಧಿ ರಾಷ್ಟ್ರೀಯ ದಿವ್ಯಾಂಗ ಪಿಂಚಣಿ ಯೋಜನೆಯನ್ನು ಪ್ರಧಾನಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆಯಾಗಿ; ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ ಎಂದೂ ಮರುನಾಮಕರಣ ಮಾಡಲಾಗಿದೆ.
ದಿವ್ಯಾಂಗ ಪಿಂಚಣಿ ನಿಯಮಗಳಲ್ಲಿ ಬದಲಾವಣೆ…
ದಿವ್ಯಾಂಗ ಅರ್ಹತಾ ಮಾನದಂಡವನ್ನು ಈಗಿನ ಶೇ. 80ರಿಂದ ಶೇ. 40ಕ್ಕೆ ಇಳಿಸಲಾಗಿದೆ. ದಿವ್ಯಾಂಗ ಪಿಂಚಣಿಗೆ ಕನಿಷ್ಠ ವಯಸ್ಸಿನ ಮಿತಿಯನ್ನು ಹುಟ್ಟಿನಿಂದಲೇ ಎಂದು ನಿಗದಿಪಡಿಸಲಾಗಿದೆ. ದಿವ್ಯಾಂಗ ಪಿಂಚಣಿ ಮೊತ್ತವನ್ನು 79 ವರ್ಷ ವಯಸ್ಸಿನೊಳಗಿನವರಿಗೆ 375 ರೂ, ಮತ್ತು 80 ವರ್ಷ ಮೇಲ್ಪಟ್ಟವರಿಗೆ 625 ರೂ ನೀಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




