PLI Scheme: ಪಿಎಲ್‌ಐ ಯೋಜನೆ ಅಡಿ ಸೆಮಿಕಂಡಕ್ಟರ್ಗೆ 76 ಸಾವಿರ ಕೋಟಿ ರೂ. ಕೇಂದ್ರ ಸಂಪುಟ ಅನುಮೋದನೆ
ಕೇಂದ್ರ ಸಚಿವ ಸಂಪುಟವು ಉತ್ಪಾದನೆ ಸಂಯೋಜಿತ ಪ್ರೋತ್ಸಾಹಕ ಅಡಿಯಲ್ಲಿ ಸೆಮಿಕಂಡಕ್ಟರ್‌ಗಳಿಗೆ 76000 ಕೊಟಿ ರೂಪಾಯಿ ಮೊತ್ತಕ್ಕೆ ಅನುಮೋದನೆ ನೀಡಿದೆ.
ಮೈಕ್ರೋಚಿಪ್‌ಗಳ ಕೊರತೆಯಿಂದಾಗಿ ಕೈಗಾರಿಕೆ ಉತ್ಪಾದನೆಯು ಘಾಸಿ ಆಗುವುದರಿಂದಾಗಿ ತಪ್ಪಿಸಬೇಕು ಎಂದು ದೇಶವನ್ನು ಎಲೆಕ್ಟ್ರಾನಿಕ್ಸ್ ಹಬ್ ಮಾಡುವ ಮಹತ್ವಾಕಾಂಕ್ಷೆ ಜತೆಗೆ ಸೆಮಿಕಂಡಕ್ಟರ್‌ಗಳಿಗೆ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆ (ಪಿಎಲ್‌ಐ)ಗೆ ಡಿಸೆಂಬರ್ 15ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿತು. ಸಿಎನ್‌ಬಿಸಿ ಆವಾಜ್ ವರದಿಯ ಪ್ರಕಾರ, ಮುಂದಿನ ಆರು ವರ್ಷಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ ರೂಪಾಯಿಗಳ ಪ್ರೋತ್ಸಾಹಕಗಳನ್ನು ನೀಡಲು ಸರ್ಕಾರವು ಪ್ರಸ್ತಾಪಿಸಿದೆ. “ಸಂಯುಕ್ತ ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಶನ್ (ಫ್ಯಾಬ್), ಅಸೆಂಬ್ಲಿ, ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಸೌಲಭ್ಯದ ಘಟಕವನ್ನು ಸ್ಥಾಪಿಸಲು ಬಂಡವಾಳ ವೆಚ್ಚದ ಮೇಲೆ ಶೇ 25ರ ಪ್ರೋತ್ಸಾಹಕಗಳನ್ನು ಯೋಜನೆಯು ಒಳಗೊಂಡಿರುತ್ತದೆ,” ಎಂದು ವರದಿಯಲ್ಲಿ ಸೇರಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಆಟೋಮೊಬೈಲ್‌ಗಳವರೆಗಿನ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಪ್ರಮುಖವಾಗಿರುವ ಸೆಮಿಕಂಡಕ್ಟರ್‌ಗಳ ತೀವ್ರ ಕೊರತೆಗೆ ಜಗತ್ತು ಸಾಕ್ಷಿ ಆಗುತ್ತಿರುವ ಸಮಯದಲ್ಲಿ ಈ ನೀತಿ ಬಂದಿದೆ. ಕೊವಿಡ್-19 ಪರಿಣಾಮವಾಗಿ ಪೂರೈಕೆಯು ತಡೆ ಅನುಭವಿಸುತ್ತಿದೆ. ಇದು ಉತ್ಪಾದನಾ ಕೇಂದ್ರಗಳನ್ನು ಮಧ್ಯಂತರವಾಗಿ ಮುಚ್ಚುವಂತೆ ಆಗಿದೆ.
PLI ಯೋಜನೆ ಎಂದರೇನು? ಚೀನಾದ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರವು 2020ರ ಮಾರ್ಚ್ನಲ್ಲಿ ದೇಶೀಯ ಘಟಕಗಳಲ್ಲಿ ತಯಾರಿಸಿದ ಉತ್ಪನ್ನಗಳಿಂದ ಹೆಚ್ಚುತ್ತಿರುವ ಮಾರಾಟದ ಮೇಲೆ ಕಂಪೆನಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯೋಜನೆಯನ್ನು ಘೋಷಿಸಿತು. ನವೆಂಬರ್ 11, 2020ರಂದು ಕೇಂದ್ರ ಸಂಪುಟವು 10 ವಲಯಗಳಿಗೆ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (PLI) ಯೋಜನೆಯನ್ನು ಅನುಮೋದಿಸಿತು. ಈ ಪಟ್ಟಿಯಲ್ಲಿ ಔಷಧೀಯ ವಸ್ತುಗಳು, ಆಟೋಮೊಬೈಲ್‌ಗಳು ಮತ್ತು ಆಟೋ ಘಟಕಗಳು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಸುಧಾರಿತ ಕೆಮಿಸ್ಟ್ರಿ ಸೆಲ್ ಬ್ಯಾಟರಿ, ಜವಳಿ, ಆಹಾರ ಉತ್ಪನ್ನಗಳು, ಸೌರ ಮಾಡ್ಯೂಲ್‌ಗಳು, ವೈಟ್ ಗೂಡ್ಸ್ಗಳು ಮತ್ತು ವಿಶೇಷ ಉಕ್ಕು ಸೇರಿವೆ.
ಸರ್ಕಾರದ ಪ್ರಕಾರ, PLI ಯೋಜನೆಯು “ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುತ್ತದೆ. ಪ್ರಮುಖ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ. ದಕ್ಷತೆಯನ್ನು ಖಚಿತಪಡಿಸುತ್ತದಲ್ಲದೆ ಆರ್ಥಿಕತೆ ಗಾತ್ರವನ್ನು ಸೃಷ್ಟಿಸುತ್ತದೆ, ರಫ್ತುಗಳನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ.”
ಇದನ್ನೂ ಓದಿ: ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಸೆಮಿಕಂಡಕ್ಟರ್ ಎಂಬ ಸರ್ವಾಂತರ್ಯಾಮಿ ಬಗ್ಗೆ ನಿಮಗೆಷ್ಟು ಗೊತ್ತು?