ಭಾರತದಲ್ಲಿ ಯುವಜನರ ನಿರುದ್ಯೋಗ ದರ ಜಾಗತಿಕ ಸರಾಸರಿಗಿಂತಲೂ ಕಡಿಮೆ: ಸರ್ಕಾರದಿಂದ ಮಾಹಿತಿ

Youth unemployment rate in India: ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಭಾರತದಲ್ಲಿ 2023-24ರಲ್ಲಿ ಯುವಜನರ ನಿರುದ್ಯೋಗ ದರ ಶೇ. 10.2ರಷ್ಟಿದೆ. ಐಎಲ್​ಒ ವರದಿಯೊಂದರ ಪ್ರಕಾರ ಜಾಗತಿಕವಾಗಿ ಯುವಜನರ ನಿರುದ್ಯೋಗ ದರ ಶೇ 13-15ರ ಆಸುಪಾಸಿನಲ್ಲಿದೆ.

ಭಾರತದಲ್ಲಿ ಯುವಜನರ ನಿರುದ್ಯೋಗ ದರ ಜಾಗತಿಕ ಸರಾಸರಿಗಿಂತಲೂ ಕಡಿಮೆ: ಸರ್ಕಾರದಿಂದ ಮಾಹಿತಿ
ಯುವಜನರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 12:57 PM

ನವದೆಹಲಿ, ನವೆಂಬರ್ 29: ಭಾರತದಲ್ಲಿ ಯುವಜನರ ನಿರುದ್ಯೋಗ ದರ 2023-24ರಲ್ಲಿ ಶೇ. 10.2ರಷ್ಟಿದೆ. ಇದು ಜಾಗತಿಕ ಸರಾಸರಿಗಿಂತ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ. 2021ರಲ್ಲಿ ಜಾಗತಿಕವಾಗಿ ಯುವಜನರ ನಿರುದ್ಯೋಗ ಪ್ರಮಾಣವು ಶೇ. 15.6ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಇದೆ. ಕೆಲ ದಿನಗಳ ಹಿಂದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಇಲ್ಲಿ ಯುವಜನರೆಂದರೆ 15ರಿಂದ 29 ವರ್ಷ ವಯೋಮಾನದವರು. ಈ ಯುವಜನರ ಡಬ್ಲ್ಯುಪಿಆರ್ ಪ್ರಮಾಣವು 2023-24ರಲ್ಲಿ ಶೇ. 41.7ರಷ್ಟಿದೆ. 2017-18ರಲ್ಲಿ ಇವರ ಡಬ್ಲ್ಯುಪಿಆರ್ ಶೇ. 31.4ರಷ್ಟಿತ್ತು.

ಇಲ್ಲಿ ಡಬ್ಲ್ಯುಪಿಆರ್ ಎಂದರೆ ವರ್ಕರ್ ಪಾಪುಲೇಶನ್ ರೇಶಿಯೋ. ಒಟ್ಟಾರೆ ಜನಸಂಖ್ಯೆಯಲ್ಲಿ ನಿರ್ದಿಷ್ಟ ಭಾಗ. ಯುವಜನರ ಉದ್ಯೋಗ ಪ್ರಮಾಣವು ಆರು ವರ್ಷದಲ್ಲಿ ಶೇ. 31.4ರಿಂದ ಶೇ. 4.17ಕ್ಕೆ ಏರಿದೆ ಎನ್ನುವ ಮಾಹಿತಿ ಗಮನಾರ್ಹವಾಗಿದೆ. ಇದು ಪೀರಿಯಾಡಿಕ್ ಲೇಬಲ್ ಫೋರ್ಸ್ ಸಮೀಕ್ಷೆಯ (ಪಿಎಲ್​ಎಫ್​ಎಸ್) ಇತ್ತೀಚಿನ ವರದಿಯಲ್ಲಿ ಕಂಡು ಬಂದ ಮಾಹಿತಿಯಾಗಿದೆ. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ವಾರ್ಷಿಕವಾಗಿ ನಡೆಸುವ ಸಮೀಕ್ಷೆಯನ್ನು ಆಧರಿಸಿ ಪಿಎಲ್​ಎಫ್​ಎಸ್ ಈ ವರದಿಗಳನ್ನು ಸಿದ್ಧಪಡಿಸುತ್ತದೆ.

ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್​ಒ) 2022ರ ವರದಿಯೊಂದರಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ 2021ರಲ್ಲಿ ವಿಶ್ವಾದ್ಯಂತ ಯುವಜನರ ನಿರುದ್ಯೋಗ ದರ ಶೇ. 15.6ರಷ್ಟಿದೆ. ಇನ್ನು, ಇದೇ ಐಎಲ್​ಒ 2023ರಲ್ಲಿ ಬಿಡುಗಡೆ ಮಾಡಿದ ಮತ್ತೊಂದು ವರದಿಯಲ್ಲಿ ಯುವಜನರ ನಿರುದ್ಯೋಗ ದರ ಶೇ. 13.3ರಷ್ಟಿದೆ. ಇದೇ ವೇಳೆ ಭಾರತದಲ್ಲಿರುವ ನಿರುದ್ಯೋಗ ದರ ಶೇ. 10.2ರಷ್ಟಿದೆ. ಜಾಗತಿಕ ಸರಾಸರಿಗಿಂತ ಭಾರತದಲ್ಲಿ ನಿರುದ್ಯೋಗ ಕಡಿಮೆ ಇರುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಕಳೆದ 6 ವರ್ಷದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಣನೀಯ ಏರಿಕೆ: ಸಚಿವೆ ಶೋಭಾ ಕರಂದ್ಲಾಜೆ

ಇಪಿಎಫ್​ಒ ದತ್ತಾಂಶವೂ ಕೂಡ ಉದ್ಯೋಗಹೆಚ್ಚಳದ ಸೂಚಕ

ಇಪಿಎಫ್​ಒ ಪೇರೋಲ್ ಡಾಟಾದಿಂದಲೂ ಭಾರತದಲ್ಲಿ ಉದ್ಯೋಗ ಪ್ರಮಾಣದ ಏರಿಳಿತವನ್ನು ಅಂದಾಜಿಸಬಹುದು. 2023-24ರಲ್ಲಿ 1.3 ಕೋಟಿ ನಿವ್ವಳ ಸಬ್​ಸ್ಕ್ರೈಬರ್​ಗಳು ಇಪಿಎಫ್​ಒಗೆ ಸೇರಿದ್ದಾರೆ. 2017ರ ಸೆಪ್ಟೆಂಬರ್​ನಿಂದ ಹಿಡಿದು 2024ರ ಆಗಸ್ಟ್​ವರೆಗೆ, ಏಳು ವರ್ಷದಲ್ಲಿ 7.03 ಕೋಟಿ ನಿವ್ವಳ ಸಬ್​ಸ್ಕ್ರೈಬರ್​ಗಳು ಇಪಿಎಫ್​ಒ ಸೇರಿರುವುದು ತಿಳಿದುಬಂದಿದೆ. ನಿವ್ವಳ ಸಬ್​ಸ್ಕ್ರೈಬರ್ಸ್ ಎಂದರೆ, ಇಪಿಎಫ್​ನಿಂದ ಹೊರಗೆ ಹೋದವರನ್ನು ಕಳೆದು, ಹೊಸದಾಗಿ ಸದಸ್ಯರಾದವರ ಸಂಖ್ಯೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ