ಲೋಕಸಭೆ ಚುನಾವಣೆಯಲ್ಲಿ ಆಪ್ ಜೊತೆ ಹೊಂದಾಣಿಕೆ; ಹೈಕಮಾಂಡ್ ಮುಂದೆ ಅಸಹಾಯಕವಾದ ಪಂಜಾಬ್ ಕಾಂಗ್ರೆಸ್
ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು 6-7 ಸೂತ್ರದ ಮೇಲೆ ಮುಂಬರುವ ಲೋಕಸಭಾ ಚುನಾವಣೆ ಎದುರಿಸಬಹುದು ಎನ್ನಲಾಗಿದೆ. ಇದು ಪಂಜಾಬ್ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ನವದೆಹಲಿ: ಭಾರತದಲ್ಲಿ ಅವಧಿಗೂ ಮುನ್ನವೇ ಲೋಕಸಭಾ ಚುನಾವಣೆ (Lok Sabha Elections 2024) ನಡೆಯಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದರೆ, ಕೇಂದ್ರ ಸರ್ಕಾರ ಆ ರೀತಿಯ ಯಾವ ಯೋಚನೆಯೂ ಇಲ್ಲ ಎಂಬ ಸ್ಪಷ್ಟನೆ ನೀಡಿತ್ತು. ಇದರ ನಡುವೆ, ಕಾಂಗ್ರೆಸ್ ಹೈಕಮಾಂಡ್ ಎದುರು ಪಂಜಾಬ್ ಕಾಂಗ್ರೆಸ್ (Punjab Congress) ಸಂಪೂರ್ಣ ಅಸಹಾಯಕವಾಗಿಬಿಟ್ಟಿದೆ. ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಸೂಚನೆಯನ್ನು ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ರಾಜ್ಯದ ಕಾಂಗ್ರೆಸ್ ನಾಯಕರಿಗೆ ನೀಡಿದೆ. ಆದರೆ, ಪಂಜಾಬ್ ಕಾಂಗ್ರೆಸ್ ನಾಯಕರಿಗೆ ಆಮ್ ಆದ್ಮಿ ಪಕ್ಷದೊಂದಿಗಿನ (AAP) ಮೈತ್ರಿ ಇಷ್ಟವಿಲ್ಲ. ಹೀಗಾಗಿ, ಪ್ರತಾಪ್ ಸಿಂಗ್ ಬಾಜ್ವಾ ಆಪ್ನೊಂದಿಗೆ ಕಾಂಗ್ರೆಸ್ ಮೈತ್ರಿಗೆ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಬಗ್ಗಿಲ್ಲ. ಇದೀಗ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು 6-7 ಸೂತ್ರದ ಮೇಲೆ ಮುಂಬರುವ ಲೋಕಸಭಾ ಚುನಾವಣೆ ಎದುರಿಸಬಹುದು ಎನ್ನಲಾಗಿದೆ.
ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲಯನ್ಸ್ (ಇಂಡಿಯಾ) 2 ಸುತ್ತಿನ ಸಭೆಗಳ ನಂತರ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಪಂಜಾಬ್‌ನಲ್ಲಿ ಲೋಕಸಭೆ ಚುನಾವಣೆ ಎದುರಿಸಲಿವೆ ಎಂಬುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಪಂಜಾಬ್ ನಾಯಕರಿಗೆ ಈ ಕುರಿತು ಸೂಚನೆ ನೀಡಿದೆ. ಇದು ಪಂಜಾಬ್ ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ಪಂಜಾಬ್ ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಕ್ಷದೊಂದಿಗಿನ ಮೈತ್ರಿಯನ್ನು ವಿರೋಧಿಸಿದ್ದಾರೆ. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಇದಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದರು. ಆಮ್ ಆದ್ಮಿ ಪಕ್ಷದ ನಾಯಕರ ಮುಖವನ್ನೂ ನೋಡಲು ಬಯಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ವೇದಿಕೆಯಿಂದಲೇ ಹೇಳಿದ್ದರು. ಆದರೆ, ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ: ಸಿಎಂ ಭಗವಂತ್ ಮಾನ್ಗೆ ರಾಜ್ಯಪಾಲರ ಎಚ್ಚರಿಕೆ
ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತು ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ವಿರೋಧಿಸಬೇಡಿ ಎಂದು ರಾಜಾ ವಾರಿಂಗ್ ಧ್ವನಿ ಎತ್ತಿದ್ದರು. ನಂತರ ಹೈಕಮಾಂಡ್ ವರ್ತನೆ ಕಂಡು ಅವರೂ ಸುಮ್ಮನಾಗಿದ್ದರು. ಆದರೆ, ಪ್ರತಾಪ್ ಸಿಂಗ್ ಬಾಜ್ವಾ ಇದನ್ನು ನಿರಂತರವಾಗಿ ವಿರೋಧಿಸುತ್ತಿದ್ದರು. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಪಂಜಾಬ್ ಮತ್ತು ದೆಹಲಿಯ ಕಾಂಗ್ರೆಸ್ ನಾಯಕರ ವಿರೋಧವನ್ನೂ ಕಡೆಗಣಿಸಿದೆ. ಇದರಿಂದ ಅನೇಕ ಕಾಂಗ್ರೆಸ್ ನಾಯಕರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆಗಿನ ಒಪ್ಪಂದವನ್ನು ವಿರೋಧಿಸಿದ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲಾಗಿತ್ತು. ಅನಿಲ್ ಚೌಧರಿ ಅವರನ್ನು ತೆಗೆದುಹಾಕಿ, ಅರವಿಂದರ್ ಸಿಂಗ್ ಲವ್ಲಿಗೆ ರಾಜ್ಯದ ಅಧಿಕಾರವನ್ನು ಹಸ್ತಾಂತರಿಸಲಾಗಿತ್ತು. ದೆಹಲಿಯಲ್ಲಿ ಕೈಗೊಂಡ ಕ್ರಮವು ಪಂಜಾಬ್‌ನ ನಾಯಕರಿಗೆ ಎಚ್ಚರಿಕೆಯ ಸಂಕೇತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ: ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ರಾಹುಲ್ ಗಾಂಧಿ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ ಎಂದಿದ್ದಾರೆ. ದೆಹಲಿ ಸುಗ್ರೀವಾಜ್ಞೆಗೆ ನಾವು ಕಾಂಗ್ರೆಸ್‌ನಿಂದ ಬೆಂಬಲ ಕೋರಿದ್ದೇವೆ, ಅದು ನಮಗೆ ಸಿಕ್ಕಿದೆ. ರಾಜ್ಯಸಭೆಯ ಇತಿಹಾಸದಲ್ಲಿ ಪ್ರತಿಪಕ್ಷಗಳು ಮಸೂದೆಯೊಂದರ ವಿರುದ್ಧ 100ಕ್ಕೂ ಹೆಚ್ಚು ಮತಗಳನ್ನು ಪಡೆದಿರುವುದು ಇದೇ ಮೊದಲು. 2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಮತ್ತು ಆಮ್ ಆದ್ಮಿ ಪಕ್ಷ 7 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎಂದು ನಂಬಲಾಗಿದೆ.