ಅಳುತ್ತಾ ವಿಡಿಯೋ ಮಾಡಿದ ಖ್ಯಾತ ನಟಿ, ಅಷ್ಟಕ್ಕೂ ಆಗಿದ್ದೇನು?
Actress emotional video: ‘ಜಯಂ’ ಕನ್ನಡದ ‘ಮೊನಾಲಿಸಾ’, ‘ಮೈಲಾರಿ’, ‘ಹುಡುಗ ಹುಡುಗಿ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸ್ಟಾರ್ ನಟಿಯೊಬ್ಬರು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಒಂದೇ ಸಮನೆ ಗಳ-ಗಳನೆ ಅಳುತ್ತಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಯ್ತು? ಸ್ಟಾರ್ ನಟಿಯನ್ನು ಬಾಧಿಸುತ್ತಿರುವ ಸಂಗತಿಯೇನು?

ಕನ್ನಡದ ‘ಮೋನಾಲಿಸಾ’, ‘ಮೈಲಾರಿ’ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂನ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಸದಾ ಅಲಿಯಾಸ್ ಸದಾಫ್. ‘ಜಯಂ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಈ ನಟಿ 2000 ದಶಕದ ಸ್ಟಾರ್ ನಟಿ. ಸುಮಾರು ಒಂದು ದಶಕಗಳ ಕಾಲ ಸ್ಟಾರ್ ಆಗಿ ಮೆರೆದ ಸದಾ 2023ರ ವರೆಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದಾಫ್ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋನಲ್ಲಿ ಗಳ-ಗಳನೇ ಅಳುತ್ತಿದ್ದಾರೆ.
ನಟಿ ಸದಾ, ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಗಳ-ಗಳನೆ ಅಳುತ್ತಿರುವ ಸದಾ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ಸದಾ, ಸಿನಿಮಾಗಳಲ್ಲಿ ನಟನೆ ಕಡಿಮೆ ಮಾಡಿದ ಬಳಿಕ ವೈಲ್ಡ್ ಲೈಫ್ ಫೋಟೊಗ್ರಾಫರ್ ಆಗಿದ್ದಾರೆ. ಅರಣ್ಯಕ್ಕೆ ಹೋಗಿ ಪ್ರಾಣಿ ಪಕ್ಷಿಗಳ ಸುಂದರ ಫೋಟೊ, ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಪ್ರಾಣಿ ಪ್ರೇಮಿಯಾಗಿ ಬದಲಾಗಿದ್ದಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್, ಬೀದಿ ನಾಯಿಗಳ ವಿಷಯವಾಗಿ ನೀಡಿರುವ ತೀರ್ಪು ಸದಾಗೆ ತೀವ್ರ ನೋವುಂಟು ಮಾಡಿದ್ದು, ಅದಕ್ಕಾಗಿಯೇ ಅವರು ಅಳುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋನಲ್ಲಿ ಭಾವುಕರಾಗಿ ಅಳುತ್ತಾ ಮಾತನಾಡಿರುವ ಸದಾ, ‘ಕೇವಲ ಒಂದು ರೆಬೀಸ್ ಕೇಸಿನಿಂದ ಈ ತೀರ್ಪು ನೀಡಲಾಗಿದೆ. ಅದೂ ಸಹ ರೇಬೀಸ್ ಕೇಸು ಅಲ್ಲ ಎಂದು ಸಾಬೀತಾಗಿಬಿಟ್ಟಿದೆ. ಈಗ ಆ ಒಂದು ತೀರ್ಪಿನಿಂದಾಗಿ ಮೂರು ಲಕ್ಷ ನಾಯಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ ಅಥವಾ ಕೊಲ್ಲಲಾಗುತ್ತಿದೆ. ಸ್ಥಳಾಂತರಗೊಳಿಸುವುದು ಎಂದರೆ ಕೊಲ್ಲುವುದು ಎಂದೇ ಅರ್ಥ’ ಎಂದಿದ್ದಾರೆ ನಟಿ.
ಇದನ್ನೂ ಓದಿ:ಬೀದಿ ನಾಯಿಗಳ ಮುದ್ದಾಡಿ, ಸಂದೇಶ ನೀಡಿದ ನಟಿ ಐಂದ್ರಿತಾ ರೇ
‘ಸರ್ಕಾರ ಅಥವಾ ಸ್ಥಳೀಯ ಆಡಳಿತಕ್ಕೆ ಅಷ್ಟು ಬೃಹತ್ ಸಂಖ್ಯೆಯ ನಾಯಿಗಳಿಗೆ ವಾಸಯೋಗ್ಯ ನೆಲೆ ಕಲ್ಪಿಸುವುದು ಸಾಧ್ಯವೇ ಇಲ್ಲ. ಅದರಲ್ಲೂ ಕೇವಲ ಎಂಟು ವಾರಗಳ ಒಳಗೆ ಅಂಥಹದ್ದೊಂದು ನೆಲೆ ಕಲ್ಪಿಸುವುದು ಅಸಾಧ್ಯ. ಹಾಗಾಗಿ ಇದು ನಾಯಿಗಳ ಮಾರಣಹೋಮವೇ ಆಗಲಿದೆ. ಸರ್ಕಾರ, ಸ್ಥಳೀಯ ಆಡಳಿತಗಳಿಗೆ ಇಷ್ಟು ದೊಡ್ಡ ಸಂಖ್ಯೆಯ ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗಿಲ್ಲ, ಸ್ಟೆರಿಲೈಜ್ ಮಾಡಲಾಗಿಲ್ಲ ಎಂದಮೇಲೆ ಶೆಲ್ಟರ್ ನಿರ್ಮಿಸಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
View this post on Instagram
‘ಪ್ರಾಣಿ ಪ್ರಿಯರು ತಮ್ಮ ಹಣ ಖರ್ಚು ಮಾಡಿ ನಾಯಿಗಳಿಗೆ, ಬೆಕ್ಕುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವ್ಯಾಕ್ಸಿನೇಷನ್ ಮಾಡಿಸುತ್ತಿದ್ದಾರೆ. ಯಾವುದೂ ಸಹ ಸರ್ಕಾರದ ನೆರವಿನಿಂದ ಆಗುತ್ತಿಲ್ಲ. ನಾನು ಸಹ ಇದನ್ನು ವರ್ಷಗಳಿಂದಲೂ ಮಾಡುತ್ತಿದ್ದೇನೆ. ಇನ್ನು ಜಾತಿ ನಾಯಿಗಳನ್ನು ಸಾಕುವವರು ನಿಜಕ್ಕೂ ಪ್ರಾಣಿ ಪ್ರಿಯರಲ್ಲ. ಅವರು ಪ್ರತಿಬಾರಿ ಒಳ್ಳೆಯ ಬ್ರೀಡ್ ನಾಯಿಯನ್ನು ದತ್ತು ಪಡೆದಾಗಲೆಲ್ಲ ಒಂದು ಬೀದಿ ನಾಯಿ, ಬೆಕ್ಕಿನ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಜಾತಿ ನಾಯಿಗಳನ್ನು ದತ್ತು ಪಡೆಯುವವರು ಖಂಡಿತ ಪ್ರಾಣಿ ಪ್ರಿಯರಲ್ಲ’ ಎಂದು ಸಿಟ್ಟಿನಿಂದ ಹೇಳಿದ್ದಾರೆ ನಟಿ.
‘ನಮಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಶಾಂತಿಯುತ ಪ್ರತಿಭಟನೆ ಮಾಡುವ ಅವಕಾಶವನ್ನು ಪೊಲೀಸರು ನೀಡುತ್ತಿಲ್ಲ. ಭಾರತದಂತಹಾ ದೇಶದಲ್ಲಿ ಜನಿಸಿ, ಈಗ ಮೂಕ ಪ್ರಾಣಿಗಳ ಮಾರಣಹೋಮವನ್ನು ನೋಡಬೇಕಾಗಿ ಬಂದಿದೆ. ನನಗೆ ಏನು ಮಾಡಬೇಕು ಗೊತ್ತಿಲ್ಲ, ಯಾರನ್ನು ಸಂಪರ್ಕಿಸಬೇಕು ಗೊತ್ತಿಲ್ಲ, ಎಲ್ಲಿ ಹೋಗಿ ಧ್ವನಿ ಎತ್ತಬೇಕು ಗೊತ್ತಾಗುತ್ತಿಲ್ಲ ಆದರೆ ಈ ಸುದ್ದಿ ನನ್ನನ್ನು ಒಳಗಿನಿಂದಲೇ ಕೊಲ್ಲುತ್ತಿದೆ’ ಎಂದು ಸದಾ ಕಣ್ಣೀರು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




