Bhagavanth Kesari Teaser: ಈ ಬಾರಿ ಬಾಲಯ್ಯ ಮಾಡೋದು ನಿಮ್ಮ ಕಲ್ಪನೆಗೂ ಮೀರಿದ್ದು; ‘ಭಗವಂತ್ ಕೇಸರಿ’ ಅಬ್ಬರ ಹೇಗಿದೆ ನೋಡಿ
Nandamuri Balakrishna: ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು ಹೇಗಿರುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಈ ಬಾರಿ ‘ಭಗವಂತ್ ಕೇಸರಿ’ ಸಿನಿಮಾದಲ್ಲಿ ಅಂತಹ ಅಂಶಗಳು ಇನ್ನೂ ಹೆಚ್ಚಾಗಿರಲಿವೆ ಎನಿಸುತ್ತದೆ.

ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಅಭಿಮಾನಿಗಳು ಇಂದು (ಜೂನ್ 10) ಸಂಭ್ರಮಿಸುತ್ತಿದ್ದಾರೆ. ಆ ಸಂಭ್ರಮಕ್ಕೆ ಎರಡು ಕಾರಣಗಳಿವೆ. ಇಂದು ಬಾಲಯ್ಯ ಅವರ ಜನ್ಮದಿನ ಎಂಬುದು ಒಂದು ಕಾರಣ. ಅವರು ನಟಿಸುತ್ತಿರುವ ‘ಭಗವಂತ್ ಕೇಸರಿ’ ಚಿತ್ರದ ಟೀಸರ್ (Bhagavanth Kesari Teaser) ಬಿಡುಗಡೆ ಆಗಿದೆ ಎಂಬುದು ಎರಡನೇ ಕಾರಣ. ನಂದಮೂರಿ ಬಾಲಕೃಷ್ಣ ಅಭಿನಯದ ಈ ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ಮೊದಲೇ ಘೋಷಿಸಲಾಗಿತ್ತು. ಕೊಟ್ಟ ಮಾತಿನಂತೆಯೇ ಚಿತ್ರತಂಡ ಬೆಳಗ್ಗೆ 10.19ಕ್ಕೆ ಈ ಟೀಸರ್ ಹಂಚಿಕೊಂಡಿದೆ. ಇದರಲ್ಲಿ ಬಾಲಯ್ಯ ಅವರು ಮಾಸ್ ಆಗಿ ಅಬ್ಬರಿಸಿದ್ದಾರೆ. ಅಚ್ಚರಿ ಎಂದರೆ, ಈ ಬಾರಿ ಅವರ ಆರ್ಭಟ ನಿಮ್ಮ ಕಲ್ಪನೆಯನ್ನೂ ಮೀರಿದ್ದಾಗಿರಲಿದೆ ಎಂದು ‘ಭಗವಂತ್ ಕೇಸರಿ’ (Bhagavanth Kesari) ಸಿನಿಮಾದ ಟೀಸರ್ನಲ್ಲಿ ಹೇಳಲಾಗಿದೆ.
ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು ಹೇಗಿರುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಮಾಸ್ ಶೈಲಿಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗಾಗಿ ಅವರನ್ನು ‘ಗಾಡ್ ಆಫ್ ಮಾಸಸ್’ ಎಂದು ಕರೆಯಲಾಗುತ್ತಿದೆ. ಬಾಲಯ್ಯ ನಟಿಸುವ ಸಿನಿಮಾಗಳಲ್ಲಿ ಲಾಜಿಕ್ಗೆ ಜಾಗ ಇರುವುದಿಲ್ಲ. ಆ್ಯಕ್ಷನ್ ದೃಶ್ಯಗಳಲ್ಲಂತೂ ಬರೀ ಮ್ಯಾಜಿಕ್. ಅದನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ ಕೂಡ. ಈ ಬಾರಿ ‘ಭಗವಂತ್ ಕೇಸರಿ’ ಸಿನಿಮಾದಲ್ಲಿ ಇಂಥ ಮ್ಯಾಜಿಕ್ಗಳು ಇನ್ನೂ ಹೆಚ್ಚಾಗಿರಲಿವೆ ಎನಿಸುತ್ತದೆ. ಹಾಗಾಗಿ ‘ಇದು ನಿಮ್ಮ ಕಲ್ಪನೆಗೂ ಮೀರಿದ್ದು’ ಎಂಬ ಸಾಲು ಈ ಟೀಸರ್ನಲ್ಲಿ ಹೈಲೈಟ್ ಆಗಿದೆ.
A special birthday gift?
Proudly presenting our #NandamuriBalakrishna garu as #BhagavanthKesari to you all❤️
నేలకొండ భగవంత్ కేసరి? ఈ పేరు శానా ఏండ్లు యాదుంటది ? https://t.co/YCgpFWgGiA#HappyBirthdayNBK@MsKajalAggarwal @sreeleela14 @rampalarjun @MusicThaman @Shine_Screens pic.twitter.com/yAtEBKvjdB
— Anil Ravipudi (@AnilRavipudi) June 10, 2023
ಬಾಲಯ್ಯ ಅವರು ‘ಭಗವಂತ್ ಕೇಸರಿ’ ಟೀಸರ್ನಲ್ಲಿ ಎಂದಿನಂತೆ ಮಾಸ್ ಆಗಿ ಡೈಲಾಗ್ ಹೊಡೆದಿದ್ದಾರೆ. ಆಯುಧ ಹಿಡಿದು ಅಬ್ಬರಿಸಿದ್ದಾರೆ. ವಿಲನ್ಗಳ ಮೂಳೆ ಮುರಿಯುತ್ತ ಪರಾಕ್ರಮ ಮೆರೆದಿದ್ದಾರೆ. ಮೇಕಿಂಗ್ ಗುಣಮಟ್ಟ ಗಮನ ಸೆಳೆಯುವಂತಿದೆ. ಥಮನ್ ಅವರ ಹಿನ್ನೆಲೆ ಸಂಗೀತ ಆರ್ಭಟಿಸಿದೆ. ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಅವರು ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಭಗವಂತ್ ಕೇಸರಿ’ ಟೀಸರ್ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳಿಗೆ ಇಷ್ಟ ಆಗುವಂತಹ ಎಲ್ಲ ಅಂಶಗಳನ್ನು ‘ಭಗವಂತ್ ಕೇಸರಿ’ ಟೀಸರ್ನಲ್ಲಿ ತೋರಿಸಲಾಗಿದೆ. ‘ಐ ಡೋಂಟ್ ಕೇರ್’ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಟೀಸರ್ ಬಿಡುಗಡೆ ಆದ ಬಳಿಕ ‘ಭಗವಂತ್ ಕೇಸರಿ’ ಚಿತ್ರದ ಹೈಪ್ ಹೆಚ್ಚಾಗಿದೆ. ಈ ಟೀಸರ್ ಅನ್ನು 108 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗಿದೆ.
ಇದನ್ನೂ ಓದಿ: ‘NBK108’ ಸೆಟ್ನಲ್ಲಿ ಕನ್ನಡತಿ ಶ್ರೀಲೀಲಾ; ಕಣ್ ಹೊಡೆದು ಬಾಲಯ್ಯನ ಚಿತ್ರಕ್ಕೆ ಎಂಟ್ರಿ
ಈ ವರ್ಷ ನಂದಮೂರಿ ಬಾಲಕೃಷ್ಣ ಅವರು ನಟಿಸಿದ ‘ವೀರ ಸಿಂಹ ರೆಡ್ಡಿ’ ಸಿನಿಮಾ ಜನವರಿ 12ರಂದು ತೆರೆಕಂಡಿತ್ತು. ಫ್ಯಾಮಿಲಿ ಕಥಾಹಂದರ ಹೊಂದಿದ್ದ ಆ ಮಾಸ್ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದರು. ಹಾಡುಗಳು ಸೂಪರ್ ಹಿಟ್ ಆದವು. ಈ ಯಶಸ್ಸಿನಿಂದ ಬಾಲಯ್ಯ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿತು. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




