ಝಹೀರ್ ಇಖ್ಬಾಲ್ ಜತೆ ಮದುವೆ ಆದ ಸೋನಾಕ್ಷಿಯನ್ನು ಕುಟುಂಬದಿಂದ ಹೊರಗಿಟ್ಟ ಸಹೋದರ?
ಕೆಲವೇ ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಅವರು ಝಹೀರ್ ಇಖ್ಬಾಲ್ ಜೊತೆ ಮದುವೆ ಆದರು. ಅವರ ಮದುವೆ ಬಗ್ಗೆ ಕುಟುಂಬದವರಿಗೆ ಅಸಮಾಧಾನ ಇದೆ ಎಂಬ ಮಾತು ಕೇಳಿಬಂದಿದೆ. ಅದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಸೋನಾಕ್ಷಿ ಸಿನ್ಹಾ ಸಹೋದರ ಲವ್ ಸಿನ್ಹಾ ಅವರು ಈಗ ಒಂದು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಸಖತ್ ಚರ್ಚೆ ಮಾಡುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಮದುವೆ ನಡೆದು ಕೆಲವು ದಿನಗಳು ಕಳೆದಿದ್ದರೂ ಕೂಡ ಅದರ ಬಗೆಗಿನ ಅಂತೆ-ಕಂತೆಗಳು ಇನ್ನೂ ಹರಿದಾಡುತ್ತಲೇ ಇವೆ. ಸೋನಾಕ್ಷಿ ಸಿನ್ಹಾ ಅವರು ಬಹುಕಾಲದ ಗೆಳೆಯ ಝಹೀರ್ ಇಖ್ಬಾಲ್ ಜೊತೆ ಮದುವೆ ಆದರು. ಈ ವಿವಾಹಕ್ಕೆ ನಟಿಯ ಕುಟುಂಬದ ಕೆಲವರು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿರಲಿಲ್ಲ ಎಂಬ ಗಾಸಿಪ್ ಇದೆ. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆದಿವೆ. ನಟಿಯ ಸಹೋದರ ಲವ್ ಸಿನ್ಹಾ ನಡೆ ಕೆಲವು ಅನುಮಾನಕ್ಕೆ ಕಾರಣ ಆಗಿದೆ.
ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಶಾದಿ ನೆರವೇರಿತು. ಈ ಮದುವೆಗೆ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ, ಪೂನಂ ಸಿನ್ಹಾ, ಸಹೋದರ ಖುಷ್ ಸಿನ್ಹಾ ಸಾಕ್ಷಿಯಾಗಿದ್ದರು. ಆದರೆ ಅಣ್ಣ ಲವ್ ಸಿನ್ಹಾ ಮಾತ್ರ ಮದುವೆಗೆ ಬಂದಿರಲಿಲ್ಲ. ಝಹೀರ್ ಇಖ್ಬಾಲ್ ಅವರನ್ನು ಸೋನಾಕ್ಷಿ ಮದುವೆ ಆಗುತ್ತಿರುವುದು ಲವ್ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಹೇಳಲಾಗುತ್ತಿದೆ. ತಂಗಿಯ ಮೇಲೆ ಅವರು ಮುನಿಸಿಕೊಂಡಿದ್ದಾರೆ ಎಂಬುದಕ್ಕೆ ಈಗ ಇನ್ನೊಂದು ಸಾಕ್ಷಿ ಸಿಕ್ಕಿದೆ.
ಇಂದು (ಜುಲೈ 9) ಲವ್ ಸಿನ್ಹಾ ಅವರು ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ತಂದೆ ಶತ್ರುಘ್ನ ಸಿನ್ಹಾ, ತಾಯಿ ಪೂನಂ ಸಿನ್ಹಾ ಜೊತೆ ತಾವು ಮತ್ತು ಖುಷ್ ಸಿನ್ಹಾ ಇರುವ ಫೋಟೋವನ್ನು ಲವ್ ಸಿನ್ಹಾ ಶೇರ್ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಫೋಟೋ ಆಗಿದ್ದರೂ ಕೂಡ ಇದರಲ್ಲಿ ಸೋನಾಕ್ಷಿ ಸಿನ್ಹಾ ಇಲ್ಲ! ಬೇಕಂತಲೇ ತಂಗಿ ಇಲ್ಲದ ಫೋಟೋವನ್ನು ಲವ್ ಸಿನ್ಹಾ ಆಯ್ಕೆ ಮಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಝಹೀರ್ ಇಖ್ಬಾಲ್ನನ್ನು ಮದುವೆ ಆಗಿದ್ದಕ್ಕೆ ಲವ್ ಸಿನ್ಹಾ ಅವರು ತಂಗಿಯನ್ನು ಕುಟುಂಬದಿಂದಲೇ ಹೊರಗೆ ಇಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಝಹೀರ್ ಜತೆ ಮದುವೆ ಆದ ಸೋನಾಕ್ಷಿಗೆ ಈಗ ಕಾಡುತ್ತಿದೆ ತಂದೆ-ತಾಯಿ ನೆನಪು
‘ನನ್ನ ಅದ್ಭುತ ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಮಕ್ಕಳಾಗಿ ಜನಿಸುವುದಕ್ಕೆ ನಾವು ಪುಣ್ಯ ಮಾಡಿದ್ದೆವು. ನಿಮ್ಮ ಜೊತೆ ಕಳೆಯುವ ಪ್ರತಿ ಕ್ಷಣಕ್ಕೂ ನಾವು ಋಣಿ ಆಗಿದ್ದೇವೆ’ ಎಂದು ಲವ್ ಸಿನ್ಹಾ ಅವರು ಪಾಲಕರಿಗೆ ವೆಡ್ಡಿಂಗ್ ಆ್ಯನಿವರ್ಸರಿ ಪ್ರಯುಕ್ತ ವಿಶ್ ಮಾಡಿದ್ದಾರೆ. ತಂಗಿಯ ಜೊತೆ ಉಂಟಾಗಿರುವ ಮನಸ್ತಾಪದ ಬಗ್ಗೆ ಅವರಿನ್ನೂ ಸಾರ್ವಜನಿಕವಾಗಿ ಮಾತನಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.