AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಕೋಟಿ ರೂ. ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾಗೆ 21ರ ಪ್ರಾಯದ ನಿರ್ಮಾಪಕಿ

ಸ್ವಯಂಭೂ ಮೀಡಿಯಾ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಮತ್ತು ಅನುಪ್ರಿಯಾ ಎ. ನಾಗರ್ ಅವರು ಒಟ್ಟಾಗಿ ‘ಹನುಮಾನ್ ಅಂಶ್’ ಚಿತ್ರವನ್ನು ನಿರ್ಮಿಸಿದ್ದಾರೆ. ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಈ ಸಿನಿಮಾ ಕುರಿತು ಕಿರಿಯ ನಿರ್ಮಾಪಕಿ ಅನುಪ್ರಿಯಾ ನಾಗರ್ ಮಾತಾಡಿದ್ದಾರೆ.

200 ಕೋಟಿ ರೂ. ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾಗೆ 21ರ ಪ್ರಾಯದ ನಿರ್ಮಾಪಕಿ
Anupriya Nagar
ಮದನ್​ ಕುಮಾರ್​
|

Updated on: Sep 14, 2026 | 1:05 PM

Share

ಆಗಸ್ಟ್ ತಿಂಗಳಲ್ಲಿ ಯಾವುದೇ ದೊಡ್ಡ ಮಟ್ಟದ ಪ್ರಚಾರ ಅಥವಾ ಆರ್ಭಟವಿಲ್ಲದೆ ಚಿತ್ರಮಂದಿರಗಳಿಗೆ ಕಾಲಿಟ್ಟಿದ್ದ ‘ಹನುಮಾನ್ ಅಂಶ್’ ಸಿನಿಮಾ ಇಂದು ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಬದುಕು ಹಾಗೂ ಅವರ ಪವಾಡಗಳ ಆಧಾರಿತ ಈ ಭಕ್ತಿಪ್ರಧಾನ ಸಿನಿಮಾ, ಪ್ರೇಕ್ಷಕರ ಅತ್ಯುತ್ತಮ ಪ್ರಚಾರದಿಂದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಬ್ಲಾಕ್‌ಬಸ್ಟರ್ ಆಗಿದೆ. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಚಿತ್ರದ 21 ವರ್ಷದ ಕಿರಿಯ ನಿರ್ಮಾಪಕಿ ಅನುಪ್ರಿಯಾ ನಾಗರ್ ಅವರು ಉತ್ತರ ಪ್ರದೇಶದಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿ, ಸಿನಿಮಾ ನಿರ್ಮಾಣದ ಹಿಂದಿದ್ದ ಕಷ್ಟದ ದಿನಗಳು ಹಾಗೂ ತಮ್ಮ ಪಯಣವನ್ನು ಹಂಚಿಕೊಂಡಿದ್ದಾರೆ.

ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿದ ಅನುಪ್ರಿಯಾ ನಾಗರ್, ‘ಈ ಸಿನಿಮಾವನ್ನು ಮೂವರು ಮಹಿಳೆಯರು ಸೇರಿ ನಿರ್ಮಿಸಿದ್ದೇವೆ. ಅದರಲ್ಲಿ ನಾನೇ ಅತ್ಯಂತ ಕಿರಿಯವಳು. ನಾನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ತಂಡವನ್ನು ಸೇರಿಕೊಂಡೆ. ಆ ಸಮಯದಲ್ಲಿ ಚಿತ್ರದ ಶೂಟಿಂಗ್ ಮುಗಿದಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹಣದ ಕೊರತೆಯಿತ್ತು. ಈ ವಿಷಯ ತಿಳಿದಾಗ, ನಾನು ನನ್ನಲ್ಲಿದ್ದ ಸಂಪೂರ್ಣ ಉಳಿತಾಯದ ಹಣವನ್ನು ಈ ಸಿನಿಮಾಗೆ ಹೂಡಿಕೆ ಮಾಡಿದೆ. ಏಕೆಂದರೆ ಈ ಕಥೆಯೊಂದಿಗೆ ನನಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆಳವಾದ ನಂಟು ಏರ್ಪಟ್ಟಿತ್ತು’ ಎಂದಿದ್ದಾರೆ.

ತಮ್ಮ ಮೇಲಿರುವ ಕೆಲವು ತಪ್ಪು ಕಲ್ಪನೆಗಳಿಗೂ ಸ್ಪಷ್ಟನೆ ನೀಡಿದ ಅವರು, ‘ಇಡೀ ಸಿನಿಮಾವನ್ನು ನಾನೊಬ್ಬಳೇ ನಿರ್ಮಿಸಿದ್ದೇನೆ ಎಂಬ ವದಂತಿ ಇದೆ. ಆದರೆ ಅದು ನಿಜವಲ್ಲ. ಚಿತ್ರದ ಒಟ್ಟು ಬಜೆಟ್‌ನಲ್ಲಿ ನಾನು ಮೂರನೇ ಒಂದು ಭಾಗವನ್ನು ಹೂಡಿಕೆ ಮಾಡಿದ್ದೇನೆ. ನಾವು ತೊಡಗಿಸಿದ ಹಣ ನಮಗೆ ಮರಳಿ ಸಿಕ್ಕಿದೆ ಮತ್ತು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲವೂ ನೀಮ್ ಕರೋಲಿ ಬಾಬಾ ಅವರ ಪವಾಡ ಎಂದೇ ನಮ್ಮಿಡೀ ತಂಡ ನಂಬಿದೆ’ ಎಂದು ಭಾವುಕರಾದರು.

ನೀಮ್ ಕರೋಲಿ ಬಾಬಾ ಅವರ ಪ್ರಭಾವದ ಕುರಿತು ಮಾತನಾಡಿದ ಅನುಪ್ರಿಯಾ, ‘ಲ್ಯಾರಿ ಬ್ರಿಲಿಯಂಟ್, ಸ್ಟೀವ್ ಜಾಬ್ಸ್ ಅವರಂತಹ ಅನೇಕ ಜಾಗತಿಕ ಗಣ್ಯರು ಹಾಗೂ ವಿದೇಶಿಯರು ಮಹಾರಾಜ್‌ ಜಿ ಅವರಿಂದ ಪ್ರೇರಿತರಾಗಿದ್ದರು. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ಇನ್ನೂ ಅನೇಕರಿಗೆ ಅವರ ಬಗ್ಗೆ ತಿಳಿದಿಲ್ಲ. ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಮತ್ತು ಉತ್ತರಾಖಂಡದಲ್ಲಿರುವ ಅವರ ಆಶ್ರಮಕ್ಕೆ ಭೇಟಿ ನೀಡಬೇಕು ಎಂಬುದು ನನ್ನ ಆಸೆ’ ಎಂದು ಹೇಳಿದರು.

ಇದನ್ನೂ ಓದಿ: ‘ಹನುಮಾನ್ ಅಂಶ್’ ಸಿನಿಮಾಗೆ 100 ಕೋಟಿ ರೂ. ಒಟಿಟಿ ಆಫರ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ

‘ಹನುಮಾನ್ ಅಂಶ್’ ಸಿನಿಮಾದ ಕಥೆಯೇನು?

ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಹನುಮಾನ್ ಅಂಶ್’ ಚಿತ್ರವು ಲಕ್ಷ್ಮಣ್ ದಾಸ್ ಎನ್ನುವ 13 ವರ್ಷದ ಬಾಲಕ ಆಧ್ಯಾತ್ಮದತ್ತ ಹೆಜ್ಜೆ ಇಟ್ಟು, ಮುಂದೆ ಕೋಟ್ಯಂತರ ಜನರ ಆರಾಧ್ಯ ದೈವ ನೀಮ್ ಕರೋಲಿ ಬಾಬಾ ಆಗಿ ಹೇಗೆ ರೂಪಾಂತರಗೊಂಡರು ಎಂಬುದನ್ನು ಎಳೆಎಳೆಯಾಗಿ ತೋರಿಸುತ್ತದೆ. ಚಂದನ್ ಆನಂದ್ ಮತ್ತು ಶೋಭಿನಾವ್ ಸತ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡು, ಪ್ರಸ್ತುತ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us