ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಚಿತ್ರದ ಶೀರ್ಷಿಕೆ ಬದಲು; ಹೊಸ ಟೈಟಲ್ ಏನು?
‘ಲಾಹೋರ್ 1947’ ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ. ಹೊಸ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ಶಬಾನಾ ಅಜ್ಮಿ, ಪ್ರೀತಿ ಜಿಂಟಾ, ಅಲಿ ಫಜಲ್, ಕರಣ್ ಡಿಯೋಲ್ ಮುಂತಾದವರು ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಜಾವೇದ್ ಅಖ್ತರ್ ಸಾಹಿತ್ಯ ಬರೆದಿದ್ದಾರೆ.

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಲಾಹೋರ್ 1947’ (Lahore 1947) ಚಿತ್ರ ಕೂಡ ಇದೆ. ಆದರೆ ಈ ಸಿನಿಮಾದಲ್ಲಿ ಈಗ ದೊಡ್ಡ ಬದಲಾವಣೆಗೆ ಆಗಿದೆ. ನಟ ಸನ್ನಿ ಡಿಯೋಲ್ (Sunny Deol) ಮತ್ತು ನಟಿ ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಹೆಸರನ್ನೇ ಅಧಿಕೃತವಾಗಿ ಬದಲಾಯಿಸಲಾಗಿದೆ. ಹೊಸ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿದೆ. ‘ಲಾಹೋರ್ 1947’ ಬದಲು ಈಗ ‘ಬಂಟ್ವಾರಾ 1947’ (Batwara 1947) ಎಂದು ಮರುನಾಮಕರಣ ಮಾಡಲಾಗಿದೆ.
ಮಂಗಳವಾರ (ಜೂನ್ 9) ಚಿತ್ರತಂಡವು ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹೊಸ ಶೀರ್ಷಿಕೆ ಹಾಗೂ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಟ, ನಿರ್ಮಾಪಕ ಆಮಿರ್ ಖಾನ್ ಅವರು ಬಂಡವಾಳ ಹೂಡಿದ್ದಾರೆ.
ನಟ ಸನ್ನಿ ಡಿಯೋಲ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬಂಟ್ವಾರಾ 1947’ ಚಿತ್ರದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ದ್ವೇಷ ಮತ್ತು ಭಯದ ಸಮಯದಲ್ಲಿ, ಅವನು ಧೈರ್ಯವನ್ನು ಆರಿಸಿಕೊಂಡ. 2026ರ ಆಗಸ್ಟ್ 14ರಿಂದ ಚಿತ್ರಮಂದಿರಗಳಲ್ಲಿ ಬಂಟ್ವಾರಾ 1947 ಸಿನಿಮಾ ವೀಕ್ಷಿಸಿ’ ಎಂದು ಈ ಪೋಸ್ಟ್ಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿದ್ದ ಭಯ, ಅನಿಶ್ಚಿತತೆ ಮತ್ತು ಹಿಂಸಾಚಾರದ ಕರಾಳ ದಿನಗಳನ್ನು ಈ ಪೋಸ್ಟರ್ ನೆನಪಿಸುವಂತಿದೆ. ದಟ್ಟ ಹೊಗೆ, ಜ್ವಾಲೆ ಮತ್ತು ಗದ್ದಲದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಪೋಸ್ಟರ್ ನೋಡಿದರೆ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟು ಆಗುತ್ತದೆ. ಸೆಪಿಯಾ ಟೋನ್‌ನಲ್ಲಿರುವ ಈ ಪೋಸ್ಟರ್‌ನಲ್ಲಿ ಸನ್ನಿ ಡಿಯೋಲ್ ಮತ್ತು ಶಬಾನಾ ಅಜ್ಮಿ ವಿಭಜನೆಯಿಂದ ದೂರಾಗುತ್ತಿರುವ ದೃಶ್ಯವಿದೆ. ಮತ್ತೊಂದು ದೃಶ್ಯದಲ್ಲಿ ಸನ್ನಿ ಅವರು ಕೈಯಲ್ಲಿ ಉರಿಯುತ್ತಿರುವ ಪಂಜನ್ನು ಹಿಡಿದು ನಿಂತಿದ್ದರೆ, ಅವರ ಹಿಂದೆ ಭಯಭೀತರಾಗಿರುವ ಪ್ರೀತಿ ಜಿಂಟಾ ಹಾಗೂ ಆತಂಕದಿಂದ ನೋಡುತ್ತಿರುವ ಕರಣ್ ಡಿಯೋಲ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್ ನ್ಯೂಸ್
‘ಬಾಲಿವುಡ್ ಹಂಗಾಮಾ’ ವರದಿಯ ಪ್ರಕಾರ, ‘ಬಂಟ್ವಾರಾ’ ಎಂಬ ಶೀರ್ಷಿಕೆಯ ಹಕ್ಕುಗಳು ಈ ಹಿಂದೆ 1989ರಲ್ಲಿ ಅದೇ ಹೆಸರಿನ ಚಿತ್ರವನ್ನು ನಿರ್ಮಿಸಿದ್ದ ದಿವಂಗತ ನಿರ್ಮಾಪಕ ಸಲೀಂ ಅಖ್ತರ್ ಅವರ ಕುಟುಂಬದ ಬಳಿ ಇತ್ತು. ಆಮಿರ್ ಖಾನ್ ಅವರು ಖುದ್ದಾಗಿ ಆ ಕುಟುಂಬವನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಈ ಶೀರ್ಷಿಕೆಯ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




