AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ವಿವಾದದಲ್ಲಿ ನಟಿ ನೋರಾ, 3 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು

ಕನ್ನಡದ ‘ಕೆಡಿ’ ಸಿನಿಮಾದ ಐಟಂ ಹಾಡಿನಲ್ಲಿ ಕುಣಿದಿದ್ದ ನೋರಾ ಫತೇಹಿ ವಿವಾದಕ್ಕೆ ಗುರಿಯಾಗಿದ್ದರು. ನೋರಾ ಫತೇಹಿ ಸೇರಿದಂತೆ ಪ್ರೇಮ್ ಹಾಗೂ ಇನ್ನೂ ಕೆಲವರ ವಿರುದ್ಧ ದೂರುಗಳು ದಾಖಲಾಗಿದ್ದವು. ಅದೆಲ್ಲ ಆದ ಬಳಿಕ ಇದೀಗ ನೋರಾ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಯಾನ ಸಂಸ್ಥೆಯೊಂದು ನೋರಾ ವಿರುದ್ಧ ಮೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಮತ್ತೆ ವಿವಾದದಲ್ಲಿ ನಟಿ ನೋರಾ, 3 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು
Nora Fatehi
ಮಂಜುನಾಥ ಸಿ.
|

Updated on: Sep 09, 2026 | 12:50 PM

Share

ಮುಖ್ಯಾಂಶಗಳು

  • ಬಾಲಿವುಡ್ ಹಾಟ್ ನಟಿ ನೋರಾ ಫತೇಹಿ
  • ನೋರಾ ಫತೇಹಿ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
  • ನೋರಾ ಫತೇಹಿ ವಿರುದ್ಧ 3 ಕೋಟಿ ಮೊತ್ತದ ಮೊಕದ್ದಮೆ ದಾಖಲಾಗಿದೆ.

ಧ್ರುವ ಸರ್ಜಾ ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡಿನಲ್ಲಿ ನಟಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ನಟಿ ನೋರಾ ಫತೇಹಿ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ‘ಸರ್ಸೆ’ ವಿವಾದದ ಬಳಿಕ ಫುಟ್​​ಬಾಲ್ ವಿಶ್ವಕಪ್, ಆಲ್ಬಂ ಹಾಡುಗಳೆಂದು ಬ್ಯುಸಿ ಆಗಿದ್ದ ನಟಿ ನೋರಾ ಫತೇಹಿ, ಇತ್ತೀಚೆಗೆ ಖಾಸಗಿ ವಿಮಾನವೊಂದರಲ್ಲಿ ಪ್ರಯಾಣಿಸಿದ್ದರು. ಆದರೆ ತಮ್ಮ ರೀಲ್ಸ್ ಮಾಡುವ ಹುಚ್ಚಿನಿಂದಾಗಿ ತಾವು ಪ್ರಯಾಸಿದ್ದ ವಿಮಾನವನ್ನು ಹಾಗೂ ಆ ವಿಮಾನಯಾನ ಸಂಸ್ಥೆಯನ್ನು ಟೀಕೆ ಮಾಡಿದ್ದರು. ಅದೀಗ ನೋರಾಗೆ ಸಮಸ್ಯೆಯಾಗಿ ಪರಿಣಮಿಸಿದೆ. ನೋರಾ ವಿರುದ್ಧ ಮೂರು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿದೆ.

ಕಳೆದ ವರ್ಷ ‘ಡ್ಯೂನ್ ಏವಿಯೇಷನ್​​’ಗೆ ಸೇರಿದ ಖಾಸಗಿ ಚಾರ್ಟೆಡ್ ವಿಮಾನದಲ್ಲಿ ನೋರಾ ಫತೇಹಿ ಪ್ರಯಾಣಿಸಿದ್ದರು. ವೈಮಾನಿಕ ಸಂಸ್ಥೆಯ ‘ಸೆಸ್ನಾ ಸಿಟೇಷನ್ CJ2’ ಎಂಬ ಚಾರ್ಟೆಡ್ ವಿಮಾನದಲ್ಲಿ ಮುಂಬೈನಿಂದ ಜೈಪುರಕ್ಕೆ ಅವರು ಪ್ರಯಾಣಿಸಿದ್ದರು. ಆ ಸಮಯದಲ್ಲಿ ವಿಡಿಯೋ ಮಾಡಿದ್ದ ನಟಿ ನೋರಾ ಫತೇಹಿ ವಿಮಾನವನ್ನು ‘ಆಟಿಕೆ’, ‘ಲೆಗೊ ಏರ್​​ಪ್ಲೇನ್’ (ಆಟಿಕೆಯಿಂದ ಮಾಡಿದ ಪ್ಲೇನ್), ಮಿನಿಯೇಚರ್ (ವಿಮಾನದ ಸಣ್ಣ ರೂಪ) ಎಂದೆಲ್ಲ ಗೇಲಿ ಮಾಡಿದ್ದರು.

ನೋರಾ ಅವರ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಡ್ಯೂನ್ ಏವಿಯೇಷನ್ಸ್, ನೋರಾ ವಿರುದ್ಧ ಮೊಕದ್ದಮೆ ದಾಖಲಿಸಿದೆ. ನೋರಾ ಮಾಡಿರುವ ಹೇಳಿಕೆಗಳು ಕಂಪೆನಿಯ ಘನತೆಗೆ ಧಕ್ಕೆ ಮಾಡಿವೆ, ಕಂಪೆನಿಯು ಗಳಿಸಿರುವ ಜನಪ್ರಿಯತೆ ಹಾಗೂ ಗ್ರಾಹಕರಿಂದ ಗಳಿಸಿರುವ ವಿಶ್ವಾಸಾರ್ಹತೆಗೆ ಧಕ್ಕೆ ತಂದಿವೆ. ಇನ್‌ಸ್ಟಾಗ್ರಾಮ್‌ನಲ್ಲಿ 4.6 ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿರುವುದರಿಂದ, ಆಕೆಯ ಹೇಳಿಕೆಗಳು ಆನ್‌ಲೈನ್‌ನಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿವೆ ಅವರು ಮಾಡಿರುವ ಕಾಮೆಂಟ್‌ಗಳು ಕಂಪೆನಿಯ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಆರೋಪಿಸಿದೆ.

ಇದನ್ನೂ ಓದಿ:ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ

ನಟಿಯ ಹೇಳಿಕೆಗಳ ನಂತರ ತಮ್ಮ ಬುಕಿಂಗ್‌ಗಳಲ್ಲಿ ಶೇ. 15-20 ರಷ್ಟು ಕುಸಿತ ಕಂಡುಬಂದಿದೆ ಮತ್ತು ಕ್ಯಾನ್ಸಲೇಷನ್​​ಗಳು ಹೆಚ್ಚಾಗಿವೆ. ಮುಂಬೈ-ಜೈಪುರ ಪ್ರವಾಸಕ್ಕೆ ತಕ್ಕ ಗಾತ್ರದ ಪ್ರಮಾಣಿತ ವಿಮಾನ ಇದಾಗಿದೆ ಎಂದು ತಿಳಿಸಿರುವ ಡ್ಯೂನ್ಸ್ ಏವಿಯೇಷನ್, ಇದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA) ನಿಂದ ಸಂಪೂರ್ಣ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಹಾರಾಟಕ್ಕೆ ಯೋಗ್ಯವಾಗಿದೆ ಎಂದು ಸಮರ್ಥಿಸಿಕೊಂಡಿದೆ. ಈ ವಿಮಾನವನ್ನು ಮಾನ್ಯವಾದ ನಾನ್-ಷೆಡ್ಯೂಲ್ಡ್ ಆಪರೇಟರ್ಸ್ ಪರ್ಮಿಟ್ (NSOP) ಅಡಿಯಲ್ಲಿ ಕಾನೂನುಬದ್ಧವಾಗಿ ನಿರ್ವಹಿಸಲಾಗುತ್ತಿದೆ ಎಂದು ಸಹ ಕಂಪೆನಿ ಸ್ಪಷ್ಟನೆ ನೀಡಿದೆ.

ವಿಮಾನದ ಬಗ್ಗೆ “ಅವಮಾನಕರ ಮತ್ತು ಬೇಜವಾಬ್ದಾರಿಯುತ” ಟೀಕೆಗಳನ್ನು ಮಾಡಿದ್ದಾರೆ ಎಂದು ಡ್ಯೂನ್ಸ್ ಏವಿಯೇಷನ್ ನೋರಾ ಫತೇಹಿ ಅವರನ್ನು ದೂಷಿಸಿ ಗುಜರಾತ್​​ನ ಗಾಂಧಿನಗರದಲ್ಲಿ ಮೊಕದ್ದಮೆ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಅಗರ್ವಾಲ್ ಅವರ ಮುಂದೆ ಸೆಪ್ಟೆಂಬರ್ 25 ರಂದು ನಡೆಯಲಿದೆ. 3 ಕೋಟಿ ರೂ.ಗಳ ಪರಿಹಾರವನ್ನು ಕೋರುವುದರ ಜೊತೆಗೆ, ಆಪಾದಿತ ಹೇಳಿಕೆಗಳು ಅಥವಾ ವಿಮಾನದ ಉಲ್ಲೇಖಗಳನ್ನು ಹೊಂದಿರುವ ಪೋಸ್ಟ್‌ಗಳು ಮತ್ತು ಇತರ ಆನ್‌ಲೈನ್ ವಿಷಯಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಲು ವಿಮಾನಯಾನ ಸಂಸ್ಥೆಯು ನ್ಯಾಯಾಲಯವನ್ನು ಕೋರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More